ADVERTISEMENT

ವಲಸೆ ಹೋಗಿ ಟೊಮೆಟೊ ಬೆಳೆದರು

ರೈತರನ್ನು ಕಾಡುತ್ತಿದೆ ನೀರಿನ ಕೊರತೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 8:53 IST
Last Updated 11 ಜುಲೈ 2017, 8:53 IST

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಅಂತರ್ಜಲ ಕೊರತೆಯ ಪರಿಣಾಮವಾಗಿ, ರೈತರು ದೂರ ಪ್ರದೇಶಗಳಿಗೆ ವಲಸೆ ಹೋಗಿ ಭೋಗ್ಯಕ್ಕೆ ಜಮೀನು, ಕೊಳವೆ ಬಾವಿ ಪಡೆದು ವ್ಯವಸಾಯ ಮಾಡುತ್ತಿದ್ದಾರೆ.

ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ ಅವರು ಈಗ ವಲಸೆ ರೈತ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸಮೀಪ ಭೋಗ್ಯಕ್ಕೆ ಜಮೀನು ಪಡೆದು ಟೊಮೆಟೊ ಮತ್ತಿತರ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಗ್ರಾಮದ ಸಮೀಪ ಇದ್ದ ಕೃಷಿ ಕೊಳವೆ ಬಾವಿಗಳು ಬತ್ತಿಹೋದವು. ನೀರು ಪಡೆಯುವ ಆಸೆಯಿಂದ 1800 ಅಡಿಗಳಷ್ಟು ಆಳದ ಕೊಳವೆ ಬಾವಿ ನಿರ್ಮಿಸಿದರೂ, ಒಂದು ತೊಟ್ಟು ನೀರು ಸಿಗಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅನ್ಯ ಮಾರ್ಗ ಕಾಣದೆ, ವಲಸೆ ಹೋಗಬೇಕಾಗಿ ಬಂದಿತು. ರೈತರೊಬ್ಬರಿಂದ ಭೂಮಿ, ನೀರು ಪಡೆದು ತರಕಾರಿ ಬೆಳೆಯುತ್ತಿದ್ದೇನೆ.

ADVERTISEMENT

ಹೊರಗಡೆ ಬಂದು ವ್ಯವಸಾಯ ಮಾಡುವುದು ಸುಲಭದ ಮಾತಲ್ಲ. ಆದರೂ ದೇವರ ಮೇಲೆ ಭಾರ ಹಾಕಿ ದುಡಿಯುತ್ತಿದ್ದೇವೆ ಎಂದು ಕೃಷ್ಣಾರೆಡ್ಡಿ ಅಳಲು ತೋಡಿಕೊಂಡರು. ಇದು ಒಬ್ಬಿಬ್ಬ ರೈತರ ಕತೆಯಲ್ಲ. ತಾಲ್ಲೂಕಿನ ಹಲವು ರೈತರು ನೆರೆಯ ಆಂಧ್ರಪ್ರದೇಶ, ತಮಿಳು ನಾಡು ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿ ತೊಟ ಮಾಡುತ್ತಿದ್ದಾರೆ.

ಬಹುತೇಕ ರೈತರು ಟೊಮೆಟೊ ಬೆಳೆಯುತ್ತಿರುವುದು ಒಂದು ವಿಶೇಷ. ರೈತರು ಟೊಮೆಟೊವನ್ನು ಅದೃಷ್ಟದ ಬೆಳೆ ಎಂದು ಭಾವಿಸಿದ್ದಾರೆ. ಆದ್ದರಿಂದಲೇ ನೀರಿನ ಸೌಲಭ್ಯ ಇರುವ ಎಲ್ಲ ಕಡೆ ಟೊಮೆಟೊ ಬೆಳೆ ಕಂಡುಬರುತ್ತಿದೆ.

ಈಗ ಟೊಮೆಟೊಗೆ ಲಾಭದಾಯಕ ಬೆಲೆ ಬಂದಿದೆ. ತಾಲ್ಲೂಕಿನ ಗಡಿ ಗ್ರಾಮಗಳ ರೈತರು ಆಂಧ್ರಪ್ರದೇಶದ ಮದನಪಲ್ಲಿ ಮಾರುಕಟ್ಟೆಗೆ ಟೊಮೆಟೊ ಹಾಕುತ್ತಿದ್ದಾರೆ. ಅಲ್ಲಿ 30 ಕೆಜಿ ತೂಗುವ ಪೆಟ್ಟಿಗೆಗೆ ₹1600 ರಂತೆ ಮಾರಾಟವಾಗುತ್ತಿದೆ. ರಾಜ್ಯದ ಮಾರುಕಟ್ಟೆಗಳಲ್ಲೂ ಒಳ್ಳೆ ಬೆಲೆ ಇದೆ.

  ಕಳವು: ಟೊಮೆಟೊಗೆ ದಾಖಲೆ ಬೆಲೆ ಬಂದಿರುವುದರಿಂದ ತೋಟಗಳಲ್ಲಿ ಕಳುವಿನ ಪ್ರಕರಣಗಳು ಹೆಚ್ಚಿವೆ. ತಾಲ್ಲೂಕಿನ ಮುದಿಮಡಗು ಗ್ರಾಮದ ಸಮೀಪ ತೋಟವೊಂದರಲ್ಲಿ ರಾತ್ರಿ ಹೊತ್ತು ಕಳವು ನಡೆದಿರುವುದಾಗಿ ರೈತ ನರಸಿಂಹರೆಡ್ಡ ತಿಳಸಿದ್ದಾರೆ. ರಾತ್ರಿ ಹೊತ್ತು ತೋಟ ಕಾಯುವುದು ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.