ADVERTISEMENT

ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಾದ ಕೆ.ಸಿ.ರೆಡ್ಡಿ ಕಾಲೇಜು

ಸಾಂತೇನಹಳ್ಳಿ ಕಾಂತರಾಜ್
Published 23 ಅಕ್ಟೋಬರ್ 2017, 8:35 IST
Last Updated 23 ಅಕ್ಟೋಬರ್ 2017, 8:35 IST

ಬಂಗಾರಪೇಟೆ: ಇಲ್ಲಿನ ಕೆ.ಸಿ.ರೆಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪದವಿ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಾಗಿದೆ. ಚಿಕ್ಕ ಅಂಗನವಾಡಿ ಕೇಂದ್ರದಲ್ಲಿ ಆರಂಭಗೊಂಡ ಕಾಲೇಜು ಈಗ 8 ಎಕರೆ ವಿಸ್ತಾರವಾದ ಜಾಗದಲ್ಲಿ ತಲೆ ಎತ್ತಿದೆ.

1985ರಲ್ಲಿ 7 ವಿದ್ಯಾರ್ಥಿಗಳಿಂದ ಶುರುವಾದ ಕಾಲೇಜು ಪ್ರಸ್ತುತ 1,100 ವಿದ್ಯಾರ್ಥಿಗಳಿಗೆ ಜ್ಞಾನ ದೇಗುಲವಾಗಿದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿದ್ದು, ಈಚೆಗೆ ಉತ್ತಮ ಫಲಿತಾಂಶ ಪಡೆದಿದೆ. ಹಲ ವಿಷಯಗಳಲ್ಲಿ ಶೇ 100ರಷ್ಟು ಫಲಿತಾಂಶ ಸಾಧಿಸಿದೆ. ಜಿಲ್ಲೆಯಲ್ಲಿ ಐಚ್ಛಿಕ ಆಂಗ್ಲಭಾಷೆ ಇರುವ ಏಕೈಕ ಕೇಂದ್ರವಾಗಿದೆ.

2013ರಲ್ಲಿ ಕೇವಲ 5 ತರಗತಿ ಕೊಠಡಿಗಳಿದ್ದ ಕಾಲೇಜಿನಲ್ಲಿ ಇಂದು 15 ಬೋಧನಾ ಕೊಠಡಿಗಿವೆ. ಆ ಪೈಕಿ 10 ಕೊಠಡಿಗಳು ಐಸಿಟಿ ವ್ಯವಸ್ಥೆ ಒಳಗೊಂಡಿದೆ. ಸುಮಾರು 250 ಆಸನ ವ್ಯವಸ್ಥೆಗೆ ಅವಕಾಶವಿರುವ ಅಂಬೇಡ್ಕರ್ ಸೆಮಿನಾರ್ ಸಭಾಂಗಣಕ್ಕೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಅಳವಡಿಸಿದೆ. ಜಿಲ್ಲೆಯಲ್ಲೇ ವಿಸ್ತಾರವಾದ ಕಾಲೇಜು ಎನ್ನುವ ಹೆಗ್ಗಳಿಕೆ ಕೂಡ ಹೊಂದಿದೆ.

ADVERTISEMENT

ರೂಸಾ ಅನುದಾನದಲ್ಲಿ ಮೂರು ಹೆಚ್ಚುವರಿ ಕೊಠಡಿ ನಿರ್ಮಿಸಲಾಗುತ್ತಿದೆ. 2017-18ನೇ ಸಾಲಿಗೆ 10 ಕೊಠಡಿ ನಿರ್ಮಿಸಲು ಇಲಾಖೆ ಅನುಮತಿ ನೀಡಿದೆ. ಇಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಉತ್ತಮ ವಾತಾವರಣದಿಂದಾಗಿ ಪ್ರತಿ ವರ್ಷ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ಕಾಲೇಜಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಪಠ್ಯದ ಜತೆಗೆ ಜೀವನ ಕೌಶಲ, ಮೃದು ಕೌಶಲಯ, ಗಣಕಯಂತ್ರ ಕೌಶಲ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಕೌಶಲ ಮೈಗೂಡಿಸುವ ಸತತ ಪ್ರಯತ್ನ ನಡೆದಿದೆ.

’ಕಾಲೇಜಿನಲ್ಲಿ ಎನ್ಎಸ್ಎಸ್. ಎನ್‌ಸಿಸಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳಿವೆ. ಮೂರೂ ಘಟಕಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿವೆ. ಮೆರವಣಿಗೆ, ಜಾಥಾ, ಅರಿವು ಕಾರ್ಯಕ್ರಮಗಳ ಮೂಲಕ ಮೂಢನಂಬಿಕೆ, ಬಾಲ್ಯ ವಿವಾಹ ನಿಷೇಧ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಏಡ್ಸ್, ಎಚ್ಐವಿ ತಡೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ರಾಜ್ಯ ಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಈರಣ್ಣ  ಹೇಳುತ್ತಾರೆ.

ಕಾಲೇಜು ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಸುಮಾರು ಅರ್ಧ ಎಕರೆ ಜಾಗದಲ್ಲಿ ಉದ್ಯಾನ ನಿರ್ಮಿಸಿದೆ. ಬಾಳೆ, ತೆಂಗು, ಕ್ರಿಸ್ಮಸ್ ಗಿಡ, ಹೊಂಗೆ ಸೇರಿದ ಹಾಗೇ ವಿವಿಧ ಅಲಂಕಾರಿಕ ಗಿಡ, ಮರಗಳು ಕಾಲೇಜಿಗೆ ಕಳೆ ತುಂಬಿವೆ. ಅಲ್ಲದೆ ಅರಣ್ಯ ಇಲಾಖೆ ಸಹಕಾರದೊಂದಿಗೆ 650 ವಿವಿಧ ತಳಿಯ ಗಿಡ ನೆಟ್ಟು ಪೋಷಿಸುತ್ತಿರುವುದು ಇಲ್ಲಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಪರಿಸರ ಪ್ರೇಮಕ್ಕೆ ಸಾಟಿ. ಜಿಲ್ಲೆಯಲ್ಲಿ ಉದ್ಯಾನ ಹೊಂದಿರುವ ಏಕೈಕ ಕಾಲೇಜು ಎನ್ನುವುದು ವಿಶೇಷವಾಗಿದೆ.

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ನಂತರ ಕಾಲೇಜು ಅಮೂಲಾಗ್ರ ಬದಲಾವಣೆ ಕಂಡಿದೆ. ಎಸ್.ಎನ್.ಟ್ರಸ್ಟ್‌ನಿಂದ ಉಚಿತ ನೋಟ್ ಪುಸ್ತಕ, ಶುದ್ಧ ಕುಡಿಯುವ ನೀರು, ಬಸ್, ಕ್ಯಾಂಟಿನ್ ವ್ಯವಸ್ಥೆ ಮಾಡಿದ್ದು, ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ ಎನ್ನುವುದು ಪ್ರಾಂಶುಪಾಲ ರೆಡ್ಡಪ್ಪ ಅವರ ಅಭಿಪ್ರಾಯವಾಗಿದೆ.

ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಗಮನಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಮುಂದಿನ ವರ್ಷದಿಂದ ಎಂ.ಎ. ಅರ್ಥಶಾಸ್ತ್ರ. ಎಂ.ಎ. ರಾಜ್ಯಶಾಸ್ತ್ರ ಮತ್ತು ಎಂ.ಕಾಂ. ಸ್ನಾತಕೋತ್ತರ ಪದವಿ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಐದು ವರ್ಷಕ್ಕೊಮ್ಮೆ ನ್ಯಾಕ್ ಸಂಸ್ಥೆ ಕಾಲೇಜಿನ ಮೌಲ್ಯಾಂಕನ ನಡೆಸುತ್ತಿದ್ದು, 2012ರಲ್ಲಿ 'ಬಿ' ದರ್ಜೆ ಪಡೆದಿತ್ತು. ನ.6 ಮತ್ತು 7 ರಂದು ಮತ್ತೆ ನ್ಯಾಕ್ ಸಮಿತಿ ಮೌಲ್ಯಾಂಕನ ನಡೆಸಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.