ADVERTISEMENT

ವಿನಾಯಕ ಯುವಕ ಸಂಘದ ಬೆಂಬಲ

281ನೇ ದಿನಕ್ಕೆ ಕಾಲಿಟ್ಟ ಶಾಶ್ವತ ನೀರಾವರಿ ಹೋರಾಟ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:21 IST
Last Updated 20 ಮಾರ್ಚ್ 2017, 5:21 IST

ಕೋಲಾರ: ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ನಗರದಲ್ಲಿ ನಡೆಯುತ್ತಿರುವ ಹೋರಾಟ ಭಾನುವಾರ 281ನೇ ದಿನ ಪೂರ್ಣಗೊಳಿಸಿದೆ. ಶ್ರೀನಿವಾಸಪುರ ವಿನಾಯಕ ಯುವಕ ಸಂಘದ ಸದಸ್ಯರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕನ್ನಡ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್ ಮಾತನಾಡಿ ‘ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ತೀವ್ರ ಹೋರಾಟ ನಡೆಯುತ್ತಿದ್ದರು ಸರ್ಕಾರ ಕಣ್ಮುಚ್ಚಿ ಕುಳಿತಿದೆ’ ಎಂದು ಆರೋಪಿಸಿದರು.

ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆ, ಆಶ್ವಾಸನೆ ನೀಡಿ ಆಯ್ಕೆಯಾದ ನಂತರ ಮರೆತು ಹೋಗುತ್ತಾರೆ. ಚುನಾವಣೆಗೆ ಕೇವಲ ಒಂದು ವರ್ಷ ಇದ್ದಾಗ ರಾಜಕೀಯ ತಂತ್ರಗಾರಿಕೆ ಚುರುಕುಗೊಳ್ಳುತ್ತದೆ. ಇದು ನಿಜಕ್ಕೂ ಅಮಾನವೀಯ ಸಂಗತಿ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣೆಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹೆಚ್ಚಾಗಿ ನೀರಿನ ವಿಚಾರವಾಗಿಯೇ ಹೋರಾಟಗಳು ನಡೆಯುತ್ತಿವೆ. ನೀರಾವರಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಎಸ್.ಎಂ. ಶ್ರೀನಿವಾಸ್ ಮಾತನಾಡಿ, ‘ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿರುವುದರಿಂದ ಚುನಾಯಿತ ಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಕಾವೇರಿ ನದಿ ವಿವಾದ, ಮಹಾದಾಯಿ ವಿವಾದ ಹೀಗೆ ಅನೇಕ ನೀರಿನ ಸಮಸ್ಯೆಗಳಿಗಾಗಿಯೇ ರಾಜ್ಯದಲ್ಲಿ ಅನೇಕ ಹೋರಾಟಗಳು, ಬಂದ್ ಆಚರಣೆಗಳು ನಡೆದಿವೆ. ಇದು ಯಾವುದಕ್ಕೂ ಜಗ್ಗದ ಸರ್ಕಾರ ಇನ್ನು ಮುಂದೆಯೇ ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತದೆ ಎಂಬ ನಂಬಿಕೆ ನಮಗಿಲ್ಲ ಎಂದು ಹೇಳಿದರು.

ವಿನಾಯಕ ಯುವಕ ಸಂಘದ ಪದಾಧಿಕಾರಿಗಳಾದ ಪಿ.ಕೆ.ರಘುನಾಥ್, ಪಿ.ಶ್ರೀನಿವಾಸಲು, ಬಿ.ಸುಬ್ರಮಣಿ, ರವಿಕುಮಾರ್, ಟಿ.ವಿ.ಮಂಜುನಾಥಗೌಡ, ಮುನಿಯಪ್ಪ, ಕಾರ್ತಿಕ್, ರಾಜೇಶ್, ನೀರಾವರಿ ಹೋರಾಟದ ಸಂಚಾಲಕರಾದ ವೆಂಕಟೇಶ್, ಮಂಜುನಾಥ್, ಪ್ರಕಾಶ್, ಶ್ರೀನಿವಾಸ್, ವಿ.ಕೆ.ರಾಜೇಶ್, ನಟರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.