ADVERTISEMENT

ಶಾಲಾ ವಂತಿಗೆ ಹಾವಳಿ ತಡೆಗೆ ತಂಡ ರಚನೆ

ಖಾಸಗಿ ಶಾಲೆ ಮೇಲೆ ಇಲಾಖೆ ಕಣ್ಣು

​ಪ್ರಜಾವಾಣಿ ವಾರ್ತೆ
Published 6 ಮೇ 2016, 5:24 IST
Last Updated 6 ಮೇ 2016, 5:24 IST

ಕೋಲಾರ: ಖಾಸಗಿ ಶಾಲೆಗಳಲ್ಲಿ ವಂತಿಗೆ ಹಾವಳಿ ತಡೆಗೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಆಂಜಿನಪ್ಪ ತಿಳಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಇಲಾಖೆ ನಿಗದಿಪಸಿಡಿರುವ ಶುಲ್ಕದ ವಿವರಗಳನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದರು.

ವಂತಿಗೆಗಾಗಿ ಪೋಷಕರಿಗೆ ತೊಂದರೆ ನೀಡಿದಲ್ಲಿ, ಅಂತಹ ಶಾಲೆಗಳ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಪೋಷಕರು ದೂರು ನೀಡಬಹುದು ಎಂದು ಹೇಳಿದರು.

ಮಾನ್ಯತೆ ಇಲ್ಲದ ಮತ್ತು ನಿರಾಪೇಕ್ಷಣಾ ಪತ್ರ ಪಡೆಯದೆ ಶಾಲೆ ಅಥವಾ ತರಗತಿ ನಡೆಸುವ ಶಾಲೆಗಳ ವಿರುದ್ಧ ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್ 18(5)ರಡಿ ದಂಡ ವಿಧಿಸಲಾಗುವುದು. ಅಲ್ಲದೆ, ಅನಧಿಕೃತ ಶಾಲೆ ಎಂದು ಘೋಷಣೆ ಮಾಡಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಖಾಸಗಿ ಶಾಲೆಗಳು ತಮಗಿಷ್ಟ ಬಂದಂತೆ ಪ್ರವೇಶ ಪ್ರಕ್ರಿಯೆ ನಡೆಸುವಂತಿಲ್ಲ. ಇಲಾಖೆ ಸೂಚಿಸಿರುವ ಮಾರ್ಗದರ್ಶನ ಮತ್ತು ದಿನಾಂಕಗಳಂತೆ ಪ್ರಥಮ ಆಯ್ಕೆ ಪಟ್ಟಿ ಪ್ರಕಟ ಮತ್ತು ದಾಖಲಾತಿ ಪ್ರಕ್ರಿಯೆಯನ್ನು ನಡೆಸಬೇಕು.

ಅನುದಾನ ರಹಿತ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಅಡಿ ಪ್ರವೇಶಕ್ಕೆ ಮೀಸಲು ಇರಿಸಿದ್ದು, ಉಳಿದ ಶೇ 75 ಸೀಟುಗಳನ್ನು ಪಾರದರ್ಶಕವಾಗಿ ದಾಖಲಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರವೇಶ ಪ್ರಕ್ರಿಯೆ ವೇಳೆ ವಿಚಕ್ಷಣ ದಳವನ್ನು ಜಿಲ್ಲಾ ಪ್ರಾಧಿಕಾರದ ಹಂತದಲ್ಲಿ ರಚಿಸಿ ನಿಗಾ ವಹಿಸಲಾಗುತ್ತದೆ. ಅಲ್ಲದೆ, ಇಲಾಖೆ ಅಧಿಕಾರಿಗಳ ತಂಡ ಶಾಲೆಗಳಿಗೆ ಭೇಟಿ ನೀಡಿ, ಶುಲ್ಕ ಪಟ್ಟಿ ಪ್ರಕಟಣೆ ಮತ್ತು ಇಲಾಖೆ ನಿಯಮ ಪಾಲಿಸುವ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.