ADVERTISEMENT

ಶೌಚಾಲಯ ಗೌರವದ ಸಂಕೇತವಾಗಲಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 10:07 IST
Last Updated 24 ಜೂನ್ 2017, 10:07 IST

ಶ್ರೀನಿವಾಸಪುರ: ಉತ್ತಮ ಆರೋಗ್ಯ ಹಾಗೂ ಗೌರವಯುತವಾದ ಜೀವನ ನಿರ್ವಹಣೆಗೆ ಪ್ರತಿಯೊಬ್ಬರೂ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಅದನ್ನು ತಪ್ಪದೆ ಬಳಸಬೇಕು ಎಂದು ಪುಲಗೂರುಕೋಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೌಸ್‌ ಸಾಬ್‌ ಹೇಳಿದರು.

ತಾಲ್ಲೂಕಿನ ಮುದ್ದೇಪಲ್ಲಿ ಗ್ರಾಮದಲ್ಲಿ ಶುಕ್ರವಾರ ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಅಡಿಯಲ್ಲಿ ಏರ್ಪಡಿಸಿದ್ದ ಶೌಚಾಲಯಕ್ಕಾಗಿ ಸಮರ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಯಲಿನಲ್ಲಿ ಶೌಚ ಮಾಡುವುದರಿಂದ ಸಾಂಕ್ರಾಮಿಕ ರೋಗಗಳು ಹರುಡುವ ಸಾಧ್ಯತೆ ಇರುತ್ತದೆ. ಅದು ಹೆಣ್ಣು ಮಕ್ಕಳ ಗೌರವಕ್ಕೆ ಕುಂದುಂಟು ಮಾಡುತ್ತದೆ ಎಂದು ಹೇಳಿದರು.

ಇಲಾಖೆಯ ಒತ್ತಾಯಕ್ಕೆ ಮಣಿದು ಶೌಚಾಲಯ ನಿರ್ಮಿಸುವುದು ಕಷ್ಟ. ಸ್ವಯಂ ಪ್ರೇರಣೆಯಿಂದ ಶೌಚಾಲಯ ನಿರ್ಮಿಸಿ, ಗೌರವಯುತ ಬದುಕಿಗೆ ನಾಂದಿ ಹಾಡಬೇಕು. ಎಲ್ಲ ವಯೋಮಾನದ ವ್ಯಕ್ತಿಗಳೂ ಮನೆಯಲ್ಲಿನ ಶೌಚಾಲಯ ಬಳಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಯೋಜನೆಯ ವಿಶೇಷ ತಂಡದ ಉಸ್ತುವಾರಿ ಅಧಿಕಾರಿ ರಾಮಪ್ಪ ಮಾತನಾಡಿ, ಶೌಚಾಲಯ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ. ಆದರೆ ಇಚ್ಛಾಶಕ್ತಿಯ ಕೊರತೆ ಇದೆ. ಇದನ್ನು ಹೋಗಲಾಡಿಸುವ ಸಲುವಾಗಿ ಸರ್ಕಾರ ವಿಶೇಷ ತಂಡ ರಚಿಸಿದೆ ಎಂದು ತಿಳಿಸಿದರು.

ಪ್ರತಿ ಗ್ರಾಮದಲ್ಲೂ ಶೌಚಾಲಯ ನಿರ್ಮಾಣಕ್ಕೆ ಸಮರ ಸಾರುತ್ತಿದೆ. ಶೌಚಾಲಯ ನಿರ್ಮಿಸಿಕೊಳ್ಳಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ₹15 ಸಾವಿರ, ಸಾಮಾನ್ಯ ವರ್ಗದವರಿಗೆ ₹ 12 ಸಾವಿರ ನೀಡಲಾಗುವುದು. ಈ ಅವಕಾಶವನ್ನು ಸದಪಯೋಗ ಪಡಿಸಿಕೊಂಡು ಮನೆಗೊಂದು ಶೌಚಾಲಯ ಹೊಂದಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ, ಸಮಾಲೋಚಕ ಶ್ರೀಶೈಲಂಸನದ್‌, ಸುಧೀರ್‌, ಉಗ್ಗಪ್ಪ ಮಲ್ಯ, ಪ್ರೇರಕ ಸಾಗರೀಕ, ತಾಲ್ಲೂಕು ಸಮಾಲೋಚಕ ನಾಗರಾಜ್‌, ಕರವಸೂಲಿಗಾರ ಈಶ್ವರಪ್ಪ, ಗಂಗುಲಪ್ಪ, ಶಂಕರಪ್ಪ, ಭಾಗ್ಯಮ್ಮ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.