ADVERTISEMENT

ಸರ್ಕಾರಿ ಸವಲತ್ತು ಸದ್ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 8:50 IST
Last Updated 27 ಜುಲೈ 2017, 8:50 IST
ಕೃಷಿ ಇಲಾಖೆಯು ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಮತ್ತು ವಸ್ತು ಪ್ರದರ್ಶನದಲ್ಲಿ ಇರಿಸಿದ್ದ ಕೃಷಿ ಯಂತ್ರೋಪಕರಣಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ನಂಜುಂಡಪ್ಪ ವೀಕ್ಷಿಸಿದರು.
ಕೃಷಿ ಇಲಾಖೆಯು ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಮತ್ತು ವಸ್ತು ಪ್ರದರ್ಶನದಲ್ಲಿ ಇರಿಸಿದ್ದ ಕೃಷಿ ಯಂತ್ರೋಪಕರಣಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ನಂಜುಂಡಪ್ಪ ವೀಕ್ಷಿಸಿದರು.   

ಕೋಲಾರ: ‘ರೈತರು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿ ಕೊಂಡು ಕೃಷಿಯಲ್ಲಿ ಅಭಿವೃದ್ಧಿ ಸಾಧಿಸ ಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ನಂಜುಂಡಪ್ಪ ಸಲಹೆ ನೀಡಿದರು. ಕೃಷಿ ಇಲಾಖೆಯು ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ‘ರೈತರು ಬೆಳೆ ವಿಮೆ, ಫಸಲ್ ಭಿಮಾ ಯೋಜನೆ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಕೃಷಿ ಯಂತ್ರೋಪಕರಣಗಳ ಸೌಲಭ್ಯ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ರೈತರು ಕೃಷಿಯಿಂದ ವಿಮುಖರಾಗಿ ಕೆಲಸ ಹುಡುಕಿಕೊಂಡು ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ರೈತರು ಕೃಷಿ ಹೊಂಡ, ಹನಿ ನೀರಾವರಿ ಪದ್ಧತಿ ಸೇರಿದಂತೆ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಉಳಿಸಬೇಕು’ ಎಂದು ಮನವಿ ಮಾಡಿದರು.

‘ಪ್ರತಿ ಹೋಬಳಿಯಲ್ಲೂ ರೈತ ಸಂಪರ್ಕ ಕೇಂದ್ರಗಳಿದ್ದು, ರೈತರು ಕೃಷಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳ ವಿಚಾರವಾಗಿ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಿ ನೆರವು ಮತ್ತು ಮಾರ್ಗ ದರ್ಶನ ಪಡೆಯಬಹುದು. ರೈತರು ಮಳೆ ಪ್ರಮಾಣ, ಹವಾಮಾನ ಆಧರಿಸಿ ಬೆಳೆ ಬೆಳೆಯುವ ಕ್ರಮ ರೂಢಿಸಿಕೊಳ್ಳಬೇಕು’ ಎಂದರು.

ADVERTISEMENT

ಪ್ರತಿಕೂಲ ಪರಿಣಾಮ: ತೋಟಗಾರಿಕೆ ಇಲಾಖೆ ನಿವೃತ್ತ ಅಧಿಕಾರಿ ಹಾಲ ಲಿಂಗಯ್ಯ ಮಾತನಾಡಿ, ‘ರೈತರು ಬೆಳೆ ಗಳಿಗೆ ಹೆಚ್ಚು ಕೀಟನಾಶಕಗಳನ್ನು ಸಿಂಪಡಿಸುತ್ತಿರುವುದರಿಂದ ಫಸಲು ಹಾಗೂ ಭೂಮಿಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ರಾಸಾಯನಿಕ ಗೊಬ್ಬರಗಳನ್ನು ಅತಿಯಾಗಿ ಬಳಸುವು ದರಿಂದ ಭೂಮಿ ಬರಡಾಗುತ್ತಿದೆ’ ಎಂದು ಕಿವಿಮಾತು ಹೇಳಿದರು.

ಸಂವಾದ: ಕೃಷಿ -ವಿಜ್ಞಾನಿಗಳೊಂದಿಗೆ ನಡೆದ ಸಂವಾದದಲ್ಲಿ ರೈತರು ರಾಗಿ ಮತ್ತು ತೊಗರಿ ಬೆಳೆಗೆ ಬರುವ ಕೀಟ ಬಾಧೆ ಬಗ್ಗೆ ಪ್ರಶ್ನಿಸಿದರು. ರೈತರ ಪ್ರಶ್ನೆಗಳಿಗೆ ಉತ್ತರಿಸಿದ ತೋಟಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿ ನೂರುಲ್ಲಾ, ‘ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ರಾಗಿ ಮತ್ತು ತೊಗರಿಗೆ ರೋಗಗಳು ಬರುತ್ತವೆ’ ಎಂದು ಹೇಳಿದರು.

ರೈತ ಮುರಳಿ ಅವರು ಪ್ರದರ್ಶನಕ್ಕೆ ಇಟ್ಟಿದ್ದ ಹಳೆ ಕಾಲದ ಕೃಷಿ ಸಲಕರಣೆಗಳು ಹಾಗೂ ಕೃಷಿ ಇಲಾಖೆಯಿಂದ ಇರಿಸಲಾಗಿದ್ದ ಆಧುನಿಕ ಕೃಷಿ ಯಂತ್ರೋಪಕರಣಗಳು ವಸ್ತು ಪ್ರದರ್ಶ ನದ ಪ್ರಮುಖ ಆಕರ್ಷಣೆಯಾಗಿದ್ದವು. ತಾ.ಪ ಸದಸ್ಯ ತಿರುಮಳಪ್ಪ, ಕೃಷಿ ಇಲಾಖೆ ಅಧಿಕಾರಿ ಗಳಾದ ಸುನಿಲ್, ಶ್ರೀನಿವಾಸ್ ಪಾಲ್ಗೊಂಡಿದ್ದರು.

* * 

ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 100 ಎಕರೆಯಲ್ಲಿ ಸಿರಿಧಾನ್ಯ ಬೆಳೆಯುವಂತೆ ಸೂಚನೆ ನೀಡಿದೆ.  ರೈತರು ಹೆಚ್ಚು ಲಾಭದಾಯಕ ವಾಗಿರುವ ಸಿರಿಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು.
ಎಸ್.ರಂಗಸ್ವಾಮಿ, ಕೃಷಿ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.