ADVERTISEMENT

ಸಾವಿನ ದವಡೆಯಲ್ಲಿ 19,331 ಮಕ್ಕಳು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 8:45 IST
Last Updated 23 ಸೆಪ್ಟೆಂಬರ್ 2017, 8:45 IST
ಬಿ.ಬಿ.ಕಾವೇರಿ
ಬಿ.ಬಿ.ಕಾವೇರಿ   

ಕೋಲಾರ: ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಮಕ್ಕಳ ಪೈಕಿ ಶೇ 30.04ರಷ್ಟು ಮಕ್ಕಳು ಸಾಧಾರಣ ಅಪೌಷ್ಟಿಕತೆ (ಮಾಡರೇಟ್‌ ಅಕ್ಯೂಟ್‌ ಮಾಲ್‌ ನ್ಯೂಟ್ರಿಷನ್‌– ಮ್ಯಾಮ್‌) ಸಮಸ್ಯೆಯಿಂದ ಬಳಲುತ್ತಿದ್ದು, ಸಾವಿನ ದವಡೆಯಲ್ಲಿ ಸಿಲುಕಿವೆ ಎಂಬ ಆತಂಕಕಾರಿ ಸಂಗತಿ ಸಮೀಕ್ಷೆಯಿಂದ ಬಯಲಾಗಿದೆ.

ರಾಜ್ಯದಲ್ಲಿ ಮ್ಯಾಮ್‌ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸರಾಸರಿಯು ಶೇ 32.52ರಷ್ಟಿದೆ. ಅದೇ ರೀತಿ ತೀವ್ರ ಅಪೌಷ್ಟಿಕತೆಗೆ (ಸಿವಿಯರ್‌ ಅಕ್ಯೂಟ್‌ ಮಾಲ್‌ನ್ಯೂಟ್ರಿಷನ್‌– ಸ್ಯಾಮ್‌) ತುತ್ತಾಗಿರುವ ಮಕ್ಕಳ ಪ್ರಮಾಣ ಶೇ 1.6 ಇದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ 10.79ರಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಜಿಲ್ಲೆಯಲ್ಲಿ 2,061 ಅಂಗನವಾಡಿ ಕೇಂದ್ರಗಳಿದ್ದು, ಈ ಕೇಂದ್ರಗಳಿಗೆ ಬರುವ 6 ವರ್ಷ ವಯೋಮಾನದವರೆಗಿನ 64,344 ಮಕ್ಕಳ ತೂಕ ಮತ್ತು ಬೆಳವಣಿಗೆ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಜಂಟಿ ಸಮೀಕ್ಷೆ ನಡೆಸಿದ್ದಾರೆ.

ADVERTISEMENT

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಮಾರ್ಗಸೂಚಿ ಅನ್ವಯ ಮಕ್ಕಳ ವಯಸ್ಸು ಮತ್ತು ತೂಕದ ಆಧಾರದ ಮೇಲೆ ಬೆಳವಣಿಗೆಯನ್ನು ಗ್ರೇಡ್ ಆಧಾರದಲ್ಲಿ ಗುರುತಿಸಲಾಗುತ್ತದೆ. ಅದರ ಪ್ರಕಾರ ಸಾಮಾನ್ಯ, ಸಾಧಾರಣ ಮತ್ತು ತೀವ್ರ ಕಡಿಮೆ ತೂಕ ಹೊಂದಿರುವ ಮಕ್ಕಳೆಂದು ನಿರ್ಧರಿಸಲಾಗುತ್ತದೆ. ಜಿಲ್ಲೆಯಲ್ಲಿ 19,331 ಮಕ್ಕಳು ಸಾಧಾರಣ ತೂಕ ಹೊಂದಿದ್ದು, ಇವರಲ್ಲಿ ಸಾಧಾರಣ ಅಪೌಷ್ಟಿಕತೆ ಇರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಅದೇ ರೀತಿ ತೀರಾ ಕಡಿಮೆ ತೂಕ ಹೊಂದಿರುವ 168 ಮಕ್ಕಳಲ್ಲಿ (ಶೇ 0.86) ತೀವ್ರ ಅಪೌಷ್ಟಿಕತೆ ಇದೆ.

ಬಡ, ಮಧ್ಯಮ ಹಾಗೂ ಮೇಲ್ವರ್ಗ ಹೀಗೆ ಎಲ್ಲಾ ವರ್ಗದ ಮಕ್ಕಳಲ್ಲೂ ಅಪೌಷ್ಟಿಕತೆ ಕಾಣಿಸಿಕೊಂಡಿದೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಈ ಮಕ್ಕಳಲ್ಲಿ ಕಡಿಮೆ ಬುದ್ಧಿಶಕ್ತಿ, ಕುರುಡುತನ, ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ.

ಸಾವಿನತ್ತ ಹೆಜ್ಜೆ: ಆರು ವರ್ಷದೊಳಗಿನ ಮಕ್ಕಳ ಸಾವಿಗೆ ಕಾರಣವಾಗುವ ಅಂಶಗಳಲ್ಲಿ ಅಪೌಷ್ಟಿಕತೆಯು ಪ್ರಮುಖವಾಗಿದ್ದು, ಸ್ಯಾಮ್‌ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ಸಾಧಾರಣ ತೂಕ ಹೊಂದಿರುವ ಮಕ್ಕಳನ್ನು ವೈದ್ಯಕೀಯವಾಗಿ ಆರೋಗ್ಯ ಕಾರ್ಯಕರ್ತರ ಪರಿಭಾಷೆಯಲ್ಲಿ ಸಾವಿನತ್ತ ಹೆಜ್ಜೆ ಹಾಕಿರುವ ಮಕ್ಕಳೆಂದೇ ಪರಿಗಣಿಸಲಾಗುತ್ತದೆ.

ಸ್ಯಾಮ್‌ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಯಲ್ಲಿನ ಪೌಷ್ಟಿಕ ಆಹಾರ ಪುನರ್ವಸತಿ ಕೇಂದ್ರಕ್ಕೆ ಕರೆತಂದು ಆರೈಕೆ ಮಾಡಲಾಗುತ್ತಿದೆ. 15 ದಿನಗಳ ಕಾಲ ಮಕ್ಕಳನ್ನು ಕೇಂದ್ರದಲ್ಲೇ ಇರಿಸಿಕೊಂಡು ತೂಕ ಮತ್ತು ಬೆಳವಣಿಗೆ ವೃದ್ಧಿಗೆ ಪೂರಕವಾದ ಪೌಷ್ಟಿಕ ಆಹಾರ ಪದಾರ್ಥ ಕೊಡಲಾಗುತ್ತಿದೆ. ಜಿಲ್ಲಾಡಳಿತವು ಪ್ರತಿ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಐದು ಅಂಗನವಾಡಿ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡು ಮ್ಯಾಮ್‌ ಮಕ್ಕಳಲ್ಲಿನ ಅಪೌಷ್ಟಿಕತೆ ದೂರ ಮಾಡಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.