ADVERTISEMENT

ಹನಿ ನೀರಾವರಿಯಲ್ಲಿ ರಾಗಿ ಬೆಳೆ ಬೆಳೆದ ರೈತ

​ಪ್ರಜಾವಾಣಿ ವಾರ್ತೆ
Published 14 ಮೇ 2017, 5:12 IST
Last Updated 14 ಮೇ 2017, 5:12 IST

ಮುಳಬಾಗಿಲು: ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರೂ ಗುಣಮಟ್ಟದ ರಾಗಿ ಬೆಳೆಯುವಲ್ಲಿ ರೈತರು ಯಶಸ್ಸು ಕಂಡಿದ್ದಾರೆ. ಕೊಳವೆ ಬಾವಿಗಳ ಬಳಿ ಅಲ್ಪ ಸ್ವಲ್ಪ ನೀರಿನಲ್ಲಿ ರಾಗಿ ಬೆಳೆಯುವ ಸಾಮಾನ್ಯ ಸಂಗತಿ. ಆದರೆ, ಇದೇ ಮೊದಲು ಬಾರಿಗೆ ಹನಿ ನೀರಾವರಿ ಪದ್ಧತಿಯಲ್ಲಿ ರಾಗಿ ಬೆಳೆಯನ್ನು ಬೆಳೆದಿದ್ದಾರೆ.

‘ಕಳೆದ ಮುಂಗಾರಿನಲ್ಲಿ ಸರಿಯಾಗಿ ಮಳೆಯಾಗದ ಕಾರಣ ಹೊಲ ಗದ್ದೆಗಳಲ್ಲಿ ಬೆಳೆದಿದ್ದ ರಾಗಿ ಬೆಳೆ ಕೈಗೆ ಸಿಕ್ಕಿರಲಿಲ್ಲ. ಆದ್ದರಿಂದ ಮಳೆ ನಂಬದೇ ಸಮಯ ಸಿಕ್ಕಾಗ ಕೊಳವೆ ಬಾವಿ ಬಳಿ ತೋಟಗಾರಿಕೆ ಬೆಳೆ ಬಿಟ್ಟು ರಾಗಿಯನ್ನು ಬೆಳೆಯಲಾಗುತ್ತಿದೆ’ ಎಂದು ರೈತ ಸಂಗಸಂದ್ರ ರಾಮಚಂದ್ರ ತಿಳಿಸಿದರು.

‘ತಾಲ್ಲೂಕಿನ ಹಲವೆಡೆ ರಾಗಿ ಬೆಳೆ ಕೊಯ್ಲಿಗೆ ಬಂದಿದೆ. ಈಚೆಗೆ ಮೋಡ ಮುಸುಕಿದ ವಾತಾವರಣ ಇರುವುದರಿಂದ ಮಳೆಗಾಲ ಪ್ರಾರಂಭವಾಗುವ ಮುನ್ನವೆ ರಾಗಿ ಕೊಯ್ಲು ಮಾಡಿ ಮನೆ ಕಣಜಕ್ಕೆ ಸೇರಿಸುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ರೈತರು ಹೇಳುತ್ತಾರೆ.

ADVERTISEMENT

‘ರಾಗಿಯನ್ನು ತುಂಬಾ ಸುಲಭವಾಗಿ ಬೆಳೆಯಬಹುದು. ಆದ್ದರಿಂದ ಎಲ್ಲರೂ ರಾಗಿ ಬೆಳೆಯನ್ನು ಮಾಡಲು ಮುಂದಾಗುತ್ತಾರೆ. ತೋಟಗಳಲ್ಲಿ ಮಾಡುವ ಇತರೆ ಬೆಳೆಗಳಿಗಿಂತ ರಾಗಿ ಬೆಳೆ ವಿಭಿನ್ನವಾದದ್ದು. ಏಕೆಂದರೆ ರಾಗಿ ಹೊರೆತು ಪಡಿಸಿದ ಬೆಳೆಗಳಿಗೆ ಎರಡು ದಿನಕೊಮ್ಮೆ ನೀರು ಹರಿಸಬೇಕು. ರಸಗೊಬ್ಬರದ ಫಲವತ್ತತೆ ಮಾಡಬೇಕು. ಔಷಧಿ ಸಿಂಪಡಣೆ ಸೇರಿದಂತೆ ಹಣ ತುಂಬಾ ಖರ್ಚಾಗುತ್ತದೆ. ರಾಗಿ ಬೆಳೆಗೆ ತಿಪ್ಪೆ ಗೊಬ್ಬರ ಹಾಕಿ ವಾರಕ್ಕೊಮ್ಮೆ ನೀರು ಹರಿಸಿದರೂ ಉತ್ತಮ ಬೆಳೆ ಬೆಳೆಯಬಹುದು’ ಎಂದು ಶೆಟ್ಟಿಬನಕನಹಳ್ಳಿ ಗ್ರಾಮದ ರೈತ ಕೊಂಡಪ್ಪ ಹೇಳುತ್ತಾರೆ.

ರಾಗಿ ಕಾಳು ಮನೆಯಲ್ಲಿದ್ದರೆ ಕೋಟಿ ಹಣ ಇದ್ದಂತೆ ಎಂಬುದು ನಮ್ಮ ಪೂರ್ವಿಕರ ಮಾತಾಗಿತ್ತು. ಅಲ್ಲದೆ ರಾಗಿ ಪೈರಿನಿಂದ ಜಾನುವಾರುಗಳಿಗೆ ಹುಲ್ಲು ಸಿಗುತ್ತಿತ್ತು. ಮನೆಯಲ್ಲಿ ಊಟಕ್ಕೆ ಕಾಳು ಇದ್ದವರು ಶ್ರೀಮಂತರೆಂದು ಆಗಿನ ಕಾಲದಲ್ಲಿ ಕರೆಯಲಾಗುತ್ತಿತ್ತು. ಈಗಲೂ ಸಹ ಗ್ರಾಮೀಣ ಭಾಗಗಳಲ್ಲಿ ರಾಗಿ, ಭತ್ತ, ಹುರಳಿ, ಅವರೆ, ಅಲಸಂದಿ, ಸಾಸುವೆ ಮೊದಲಾದ ಕಾಳುಗಳು ಇದ್ದವರನ್ನು ಶ್ರೀಮಂತರು ಎಂದು ಕರೆಯಲಾಗುತ್ತದೆ.

ರಾಗಿ ಬೆಳೆಯನ್ನು ಕೊಯ್ಲು ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ. ಹೆಂಗಸರಿಗೆ ₹ 250, ಗಂಡಸರಿಗೆ ₹ 350 ಕೂಲಿ ಕೊಟ್ಟರೂ ಕೂಲಿ ಆಳುಗಳು ಸಿಗುತ್ತಿಲ್ಲ ಎಂದು ರಾಗಿ ಬೆಳೆಗಾರರು ಅಳಲು ತೋಡಿಕೊಂಡರು. ಮಳೆಗಾಲ ಸಮೀಪಿಸುತ್ತಿರುವುದರಿಂದ ಮನೆಯವರೇ ಸ್ವತಃ ರಾಗಿ ಬೆಳೆ ಕೊಯ್ಲು ಮಾಡಲಾಗುತ್ತಿದೆ. ಅನಿವಾರ್ಯತೆಯಿಂದ ಕೂಲಿ ನೀಡಲಾಗುತ್ತಿದೆ ಎನ್ನುತ್ತಾರೆ ರೈತರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.