ADVERTISEMENT

ಹಾಳು ಕೊಂಪೆಯಾದ ಶಿಕ್ಷಕರ ವಸತಿ ಗೃಹ

ಎನ್.ವಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 9ವರ್ಷಗಳ ಹಿಂದೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:04 IST
Last Updated 18 ಜುಲೈ 2017, 6:04 IST

ನಂಗಲಿ: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವಸತಿ ಸೌಕರ್ಯಕ್ಕಾಗಿ ಸಮೀಪದ ಎನ್. ವಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಿರುವ ಗುರುಭವನ ಹೆಸರಿನ ಶಿಕ್ಷಕರ ವಸತಿ ಗೃಹಗಳು ಪಾಳು ಬಿದ್ದಿವೆ. ಶಿಕ್ಷಣ ಇಲಾಖೆಯ ಹಣ ವ್ಯರ್ಥವಾಗಿದೆ.

ಗ್ರಾಮೀಣ ಪ್ರದೇಶದ ಶಿಕ್ಷಕರಿಗೆ ಹಾಗೂ ದೂರದ ಊರುಗಳಿಂದ ಓಡಾಡುವ ಸಮಸ್ಯೆ ತಪ್ಪಿಸಲು ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ವಾಸಕ್ಕೆ ಯೋಗ್ಯವಾದ ಸೌಲಭ್ಯಗಳು ಕಟ್ಟಡದಲ್ಲಿ ಇವೆ. ಆದರೆ ಇಲ್ಲಿಯವರೆಗೆ ಒಬ್ಬ ಶಿಕ್ಷಕರೂ ಇಲ್ಲಿಗೆ ವಾಸಕ್ಕೆ ಬಂದಿಲ್ಲ. ಗುರುಭವನ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

9 ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಲಾಗಿದೆ. ಅಂದಿನಿಂದ ಇಲ್ಲಿಯವರೆಗೂ ಬಾಗಿಲನ್ನೂ ತೆರೆದಿಲ್ಲ. ಕಿಟಕಿಗಳ ಗಾಜುಗಳನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಕಿಟಕಿಗಳ ಮೂಲಕ ಕೊಠಡಿಗಳ ಒಳಗೆ ಕಸವನ್ನು ಎಸೆದಿದ್ದಾರೆ. ಸುತ್ತಲಿನ ಮನೆಯವರು  ಇಲ್ಲಿ ಕಸವನ್ನು ಸುರಿದಿದ್ದಾರೆ.

ADVERTISEMENT

ನೀರಿನ ಸಂಪಿನ ಮುಚ್ಚಳ ಸಹ ಕಳ್ಳತನವಾಗಿದೆ. ತೆರೆದ ಸಂಪಿನ ಒಳಗೆ ಕಲ್ಲುಗಳನ್ನು ಹಾಕಲಾಗಿದೆ. ಪಕ್ಕದಲ್ಲಿಯೇ ಇರುವ ಟೊಮೆಟೊ ಮಾರುಕಟ್ಟೆಯ ಕಸವನ್ನು ಈ ಆವರಣಕ್ಕೆ ತಂದು ಸುರಿಯಲಾಗುತ್ತಿದೆ.

ಕಾಂಪೌಂಡ್‌ನಲ್ಲಿ ಶೌಚದ ದುರ್ವಾಸನೆ ಬೀರುತ್ತಿದೆ. ರಾತ್ರಿ ವೇಳೆ ಇಲ್ಲಿ ಕುಡಿತ ಮೋಜು ಸೇರಿದಂತೆ ಅನೈತಿಕ ಚಟುವಟಿಕೆಗಳನ್ನು ಪುಂಡರು ನಡೆಸುತ್ತಿದ್ದಾರೆ ಎನ್ನುವ ದೂರುಗಳು ವ್ಯಾಪಕವಾಗಿವೆ.

ಪ್ರೌಢಶಾಲೆಗೆ ಹೊಂದಿಕೊಂಡಿರುವ ಭಾಗದ ಕಟ್ಟಡ ಮಾತ್ರ ಸುಂದರವಾಗಿ ಕಾಣುತ್ತದೆ. ಉಳಿದ ಮೂರು ಕಡೆಗಳಲ್ಲಿ ಗಿಡ ಗಂಟೆಗಳು ಬೆಳೆದಿವೆ. ಕಿಟಕಿಗಳ ಸಂದಿಯಿಂದ ಕೊಠಡಿಗೆ ಇಣುಕಿದರೆ ಕಬೋರ್ಡ್, ಫ್ಯಾನ್‌ಗಳಲ್ಲಿ ಜೇಡ ಬಲೆ ಕಟ್ಟಿದೆ. 

ಶಿಕ್ಷಣಕ್ಕಾಗಿ ಸರ್ಕಾರ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಆದರೆ ಇಲ್ಲಿ ಮಾತ್ರ ಆ ಹಣ ವ್ಯರ್ಥವಾಗಿ ಪೋಲಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಗಮನ ವಹಿಸಬೇಕು. ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ಇಲ್ಲಿ ಕಾಲಿಡಲು ಸಾಧ್ಯವಾಗದ ಸ್ಥಿತಿ ಉಂಟಾಗುತ್ತದೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

**

ಕಡತಗಳು ನಮ್ಮಲ್ಲಿ ಇಲ್ಲ
ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ನಮ್ಮ ಬಳಿ ಇಲ್ಲ. ಮುಳಬಾಗಿಲಿನಿಂದ ವಡ್ಡಹಳ್ಳಿ ನಾಲ್ಕು ಕಿಲೋಮೀಟರ್‌ ದೂರದಲ್ಲಿ ಇದೆ. ಆದ್ದರಿಂದ ಇಲ್ಲಿ ವಾಸಿಸಲು ಶಿಕ್ಷಕರು ಬರುತ್ತಿಲ್ಲ. ಬೇರೆ ಜಿಲ್ಲೆಗಳಿಂದ ನೇಮಕವಾಗಿ ಬಂದಿರುವ ಶಿಕ್ಷಕರಿಗೆ ವಸತಿ ಗೃಹಗಳಲ್ಲಿ ವಾಸಿಸುವಂತೆ ಹೇಳಿದರೂ ಅವರು ಗಮನವನ್ನು ನೀಡುತ್ತಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ದೇವರಾಜ್ ತಿಳಿಸಿದರು.

‘ಕಟ್ಟಡ ಖಾಲಿಯಾಗಿಯೇ ಉಳಿದುಕೊಂಡಿದೆ. ಬೇರೆ ಇಲಾಖೆಯವರು ಕಚೇರಿ ಕೆಲಸಕ್ಕಾದರೂ ಬಳಸಿಕೊಂಡರೆ ಚೆನ್ನಾಗಿರುತ್ತದೆ’ ಎಂದು ಹೇಳುವರು.

**

ಕಟ್ಟಡದ ಒಳಗೆ ಕಸ ಹಾಕಲಾಗುತ್ತಿದೆ. ಆ ದುರ್ವಾಸನೆಯಿಂದ ನಾವು ಮನೆಗಳಲ್ಲಿ ವಾಸಿಸುವುದು ಕಷ್ಟವಾಗಿದೆ. ಅಧಿಕಾರಿಗಳು ತಕ್ಷಣ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.
-ದೇವರಾಜ್, ಸ್ಥಳೀಯ ನಿವಾಸಿ

*

-ಕೆ.ತ್ಯಾಗರಾಜ್. ನಂಗ್ಲಿಕೊತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.