ADVERTISEMENT

ಹೆಣ್ಣು ಮಕ್ಕಳಿಗೆ ಉಚಿತ ಎಂಜಿನಿಯರಿಂಗ್ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 5:09 IST
Last Updated 14 ಫೆಬ್ರುವರಿ 2017, 5:09 IST

ಕೋಲಾರ: ‘ಅಥ್ಲೆಟಿಕ್ಸ್ ಅಸೋಸಿಯೇಷನ್ ಸದಸ್ಯರಾಗಿರುವ ಬಡ ಹೆಣ್ಣು ಮಕ್ಕಳು ಪಿಯುಸಿಯಲ್ಲಿ ಶೇ 95 ರಷ್ಟು ಅಂಕಗಳಿಸಿದರೆ ಸಿ.ಬೈರೇಗೌಡ ಎಂಜಿಯರಿಂಗ್ ಕಾಲೇಜಿನಲ್ಲಿ ಉಚಿತ ಶಿಕ್ಷಣ ಕೊಡಿಸುವ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ’ ಎಂದು ಸಿ.ಬೈರೇಗೌಡ ಕಾಲೇಜಿನ ಸಂಸ್ಥಾಪಕ ವಿ.ಕೃಷ್ಣಾರೆಡ್ಡಿ ಘೋಷಿಸಿದರು.

ನಗರದ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ 32 ಮಂದಿ ಕ್ರೀಡಾಪಟುಗಳಿಗೆ ಬೀಳ್ಕೊಡುಗೆ ಸೋಮವಾರ ಹಮ್ಮಿಕೊ ಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ  ಮಾತನಾಡುತ್ತಿದ್ದರು.

ಹಣಕಾಸಿನ ಕೊರತೆಯಿಂದಾಗಿ ವಿದ್ಯಾಭ್ಯಾಸ ನಿಲ್ಲಿಸಿದ್ದ ಯುವತಿಗೆ ತಾವು ಎಂಜಿನಿಯರಿಂಗ್ ಸೀಟು ಕೊಡಿಸಿ ಓದಿಸಿದ್ದರಿಂದ ಆಕೆ ಈಗ ಇಡೀ ರಾಜ್ಯಕ್ಕೆ 9ನೇ ರ್‌್ಯಾಂಕ್ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ. ಇದೇ ರೀತಿಯಲ್ಲಿಯೇ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸಲು ನಮ್ಮನೆ ಹಾಸ್ಟೆಲ್ ನಡೆಸುತ್ತಿರುವುದಾಗಿ ಹೇಳಿದರು.

ಜಿಲ್ಲಾ ಮಾಸ್ಟರ್ ಅಥ್ಸೆಟಿಕ್ಸ್ ಅಸೋಸಿಯೇಷನ್‌ಗೆ ಕಾಯಕಲ್ಪ ಕಲ್ಪಿಸಲು ಸಹಕಾರ ನೀಡುತ್ತೇನೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳ ನೆರವಿಗಾಗಿ ಪ್ರತ್ಯೇಕ ನಿಧಿ ಸ್ಥಾಪಿಸಲಾಗುವುದು. ಕ್ರೀಡಾಪಟುಗಳಿಗೆ ಸಿ.ಬೈರೇಗೌಡ ಸಹ ಕಾರಿ ಬ್ಯಾಂಕ್‌ನಿಂದ ಸಾಲ ಸೌಲಭ್ಯವನ್ನು ಕಲ್ಪಿಸಲು ಚಿಂತನೆ ಮಾಡಲಾಗಿದೆ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಮಾತನಾಡಿ, ‘ಪಂಚಾಯಿತಿಗಳಲ್ಲಿ ಶೇ.3ರಷ್ಟು ಅನುದಾನವನ್ನು ಕ್ರೀಡಾಭಿವೃದ್ಧಿಗೆ ಮೀಸಲಿರಿಸಲಾಗುತ್ತಿದ್ದು, ವಂತಿಗೆಯನ್ನು ಪ್ರತ್ಯೇಕ ವಾಗಿ ಕ್ರೂಢೀಕರಿಸಿ ಅಗತ್ಯ  ಕ್ರೀಡಾಪಟು ಗಳಿಗೆ ನೆರವು ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಅಂತರರಾಷ್ಟ್ರೀಯ ಕ್ರೀಡಾಪಟು ವಿ.ಮಾರಪ್ಪ ಮಾತನಾಡಿದರು. ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿ ಯೇಷನ್ ಖಜಾಂಚಿ ಕೆ.ಟಿ.ಸುರೇಶ್‌ ಬಾಬು, ಕ್ರೀಡಾಪಟು ಗೌಸ್‌ಖಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.