ADVERTISEMENT

15ರಂದು ದಿಬ್ಬೂರಹಳ್ಳಿ ಠಾಣೆಗೆ ಪಾದಯಾತ್ರೆ

ಪಿಎಸ್‌ಐ ಅಮಾನತಿಗೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಆಗ್ರಹ; ಪ್ರತಿಭಟನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 8:47 IST
Last Updated 11 ಜುಲೈ 2017, 8:47 IST

ಶಿಡ್ಲಘಟ್ಟ : ‘ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ವಿಜಯ್‌ರೆಡ್ಡಿ ಹಾಗೂ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಜುಲೈ 15 ರಂದು ವೇಮಗಲ್ ಗ್ರಾಮದಿಂದ ದಿಬ್ಬೂರಹಳ್ಳಿ ಠಾಣೆಯವರೆಗೂ ಪಾದಯಾತ್ರೆ ನಡೆಸಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಜಿ.ನಾರಾಯಣಸ್ವಾಮಿ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕಳೆದ ದೀಪಾವಳಿ ಹಬ್ಬದಂದು ವೇಮಗಲ್ ಗ್ರಾಮದಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ಘರ್ಷಣೆ ನಡೆದಿತ್ತು. ಆಗ ದಲಿತರ ದೂರು ದಾಖಲಿಸಲು ನಿರ್ಲಕ್ಷ್ಯ ತೋರಿದ್ದರು. ದೂರು ದಾಖಲಿಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿ  ದಲಿತರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ದೂರಿದರು.

‘ಹಳೇ ಗಂಜಿಗುಂಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪನೆ ಸಮಯದಲ್ಲಿ ಕೆಲವರನ್ನು ದಲಿತರ ಮೇಲೆ ಎತ್ತಿಗಟ್ಟಿ  ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ದಸಂಸ ತಾಲ್ಲೂಕು ಘಟಕದ ಮಾಜಿ ಸಂಚಾಲಕ ಜಿ.ನರಸಿಂಹಮೂರ್ತಿ ಮಾತನಾಡಿ, ‘ಪೊಲೀಸ್ ಅಧಿಕಾರಿಗಳ ದಲಿತ ವಿರೋಧಿ ಧೋರಣೆಯಿಂದ ದಿಬ್ಬೂರಹಳ್ಳಿ ವ್ಯಾಪ್ತಿಯ ಜನ ಭಯ ಭೀತರಾಗಿದ್ದಾರೆ’ ಎಂದು ಅವರು ಹೇಳಿದರು.

‘ವಿಜಯರೆಡ್ಡಿ ಅವರ ಅವಧಿಯಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಬೇರೆ ತನಿಖಾ ಅಧಿಕಾರಿಯಿಂದ ತನಿಖೆ ಮಾಡಿಸಬೇಕು.   ಅವರಿಗೆ ಬೆಂಬಲವಾಗಿರುವ ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಟಿ.ವಿ.ಚಲಪತಿ, ದ್ಯಾವಕೃಷ್ಣಪ್ಪ, ಎಲ್.ವೆಂಕಟೇಶ್, ಲಕ್ಷ್ಮಿನಾರಾಯಣ, ಹುಜಗೂರು ವೆಂಕಟೇಶ್ ಹಾಜರಿದ್ದರು.

***

ಪಿಎಸ್ಐ  ಪರ  ದಲಿತರ ಹೋರಾಟ

ಶಿಡ್ಲಘಟ್ಟ: ‘ರಾಜಕೀಯ ಹಿತಾಸಕ್ತಿಗಾಗಿ ಪಿಎಸ್‌ಐ ಮೇಲೆ ದಲಿತ ವಿರೋಧಿ ಹಣೆಪಟ್ಟಿ ಕಟ್ಟಲಾಗುತ್ತಿದೆ. ದಸಂಸ ಪದಾಧಿಕಾರಿಗಳ ಆರೋಪ ಸತ್ಯಕ್ಕೆ ದೂರವಾದುದು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಹಳೇ ಗಂಜಿಗುಂಟೆ ಗ್ರಾಮದಲ್ಲಿ 60 ಮನೆಗಳಿವೆ. ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲು ಮೂವತ್ತು ಮನೆಗಳ ಜನರು ಮನೆಯಲ್ಲಿ ನಾಲ್ಕೈದು ಜನರ ಷೇರುಗಳನ್ನು ಮಾಡಿಸಿದ್ದರು. ಇದನ್ನು ಪ್ರಶ್ನಿಸಿದ  ವಿಜಯ್‌ರೆಡ್ಡಿ ಅವರನ್ನು ವಿನಾಕಾರಣ ದಲಿತ ವಿರೋಧಿ’ ಎಂದು ಬಿಂಬಿಸುವುದು ಸರಿಯಲ್ಲ’ ಎಂದು ತಿಳಿಸಿದರು.

‘ಪ್ರಾಮಾಣಿಕ ಪೊಲೀಸ್ ಅಧಿಕಾರಯನ್ನು ದಲಿತ ವಿರೋಧಿ ಎಂದು ಬಿಂಬಿಸಿ ತೊಂದರೆ ಕೊಡುವುದು ಸರಿಯಲ್ಲ. ಅವರು ಜನಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತಿ ದ್ದಾರೆ’ ಎಂದು ತಿಳಿಸಿದರು.

‘ಒಂದು ವೇಳೆ ಶನಿವಾರ ದಸಂಸ ಠಾಣೆ ಬಳಿ ಪ್ರತಿಭಟನೆ ನಡೆಸಿದರೆ ಪಿಎಸ್‌ಐ ಪರವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯೂ ಪ್ರತಿಭಟನೆ ನಡೆಸುತ್ತದೆ’ ಎಂದರು.
‘ರಾಜಕೀಯ ದುರುದ್ದೇಶಕ್ಕಾಗಿ ಇಡೀ ಸಮುದಾಯದ ಹಾಗೂ ಸಂಘಟನೆಗಳನ್ನು ಬಳಸಿಕೊಳ್ಳುವು ದನ್ನು ಕೆಲವರು ಬಿಡಬೇಕು. ಸಂಘ ಟನೆಗಳು ನಿಜವಾದ ಅರ್ಹ ದಲಿತನ ಏಳಿಗೆಗಾಗಿ ದುಡಿಯಲು ಮುಂದಾಗ ಬೇಕು’ ಎಂದರು.

ದಿಬ್ಬೂರಹಳ್ಳಿ ಚಿಕ್ಕ ನರಸಿಂಹಯ್ಯ, ಯಣ್ಣಂಗೂರು ಸುಬ್ರಮಣಿ, ಗೊರ್ಲಪ್ಪ, ಬೈರಸಂದ್ರ ದೇವರಾಜ್, ಮಲ್ಲಶೆಟ್ಟಿಹಳ್ಳಿ ನಾಗರಾಜ್, ಸೊಣ್ಣೇನಹಳ್ಳಿ ತಿರುಮಲೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.