ADVERTISEMENT

18ಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 7:32 IST
Last Updated 15 ಮಾರ್ಚ್ 2017, 7:32 IST

ಕೋಲಾರ: ‘ನಾಲ್ಕನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ನಗರದ ಟಿ.ಚನ್ನಯ್ಯ ರಂಗಮಂದಿರದ ಶತಶೃಂಗ ವೇದಿಕೆಯಲ್ಲಿ ಮಾ.18ರಂದು ನಡೆಯಲಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ  ನಾಗಾನಂದ ಕೆಂಪರಾಜ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿತನ ಹಾಗೂ ಅರ್ಹತೆಗೆ ಪ್ರಾಮುಖ್ಯತೆ ನೀಡಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ ಆರ್.ವಿಜಯರಾಘವನ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ಪ್ರಚಾರ ಬಯಸದೆ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ ಎಂದರು.

ಪುಸ್ತಕ ಬಿಡುಗಡೆ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ.ಎಂ.ಮುನಿರತ್ನಪ್ಪ ಮಾತನಾಡಿ, ‘ಮಾ.18ರಂದು ಬೆಳಿಗ್ಗೆ 8.30ಕ್ಕೆ ಚನ್ನಯ್ಯ ರಂಗಮಂದಿರದಲ್ಲಿ ತಹಸೀಲ್ದಾರ್ ವಿಜಯಣ್ಣ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ನಾಡ ಧ್ವಜಾರೋಹಣ ನೆರವೇರಿಸುತ್ತಾರೆ. ಬಳಿಕ ಬೆಳಿಗ್ಗೆ 9ಕ್ಕೆ ಸಾಹಿತಿ ಬಿ.ಗಂಗಾಧರಮೂರ್ತಿ ಸಮ್ಮೇಳನ ಉದ್ಘಾಟಿಸುವರು. ಶಾಸಕ ವರ್ತೂರು ಪ್ರಕಾಶ್ ಅಧ್ಯಕ್ಷತೆ ವಹಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್‌, ಸಂಸದ ಕೆ.ಎಚ್.ಮುನಿಯಪ್ಪ ಅತಿಥಿಗಳಾಗಿ ಭಾಗವಹಿಸುತ್ತಾರೆ. ಸಮ್ಮೇಳನದಲ್ಲಿ ಹಲವು ಪುಸ್ತಕಗಳು ಬಿಡುಗಡೆಯಾಗಲಿವೆ’ ಎಂದು ಹೇಳಿದರು.

ADVERTISEMENT

ಬೆಳಿಗ್ಗೆ 11.30ಕ್ಕೆ ಮೊದಲ ವಿಚಾರಗೋಷ್ಠಿ ಮತ್ತು ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕೃಷಿ ಕುರಿತು ವಿಷಯ ಮಂಡನೆ ನಡೆಯಲಿದೆ. ಬಳಿಕ ಶಿಕ್ಷಣ ತಜ್ಞ ಕೋಡಿರಂಗಪ್ಪ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 2ಕ್ಕೆ ಎರಡನೇ ವಿಚಾರಗೋಷ್ಠಿ ನಡೆಯಲಿದೆ. ‘ಜಾಗತಿಕ ಭಾಷಾ ಸವಾಲುಗಳು ಮತ್ತು -ಕನ್ನಡ ಭಾಷಾ ಸಂವರ್ಧನೆ’ ಕುರಿತು ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ರಾಜಪ್ಪ ದಳವಾಯಿ, ‘ಕೋಲಾರ ಜಿಲ್ಲೆ ಮಾನವ ನಿರ್ಮಿತ ಮರುಭೂಮಿ’ ಕುರಿತು ಅಂಕಣಕಾರ ಕೆ.ಸಿ.ರಘು ವಿಚಾರ ಮಂಡಿಸುತ್ತಾರೆ ಎಂದು ಹೇಳಿದರು.

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆವರೆಗೆ ಕವಿಗೋಷ್ಠಿ ನಡೆಯಲಿದೆ. ಸಂಜೆ 5ರಿಂದ 6.30ರವರೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಸಮಾರೋಪ ಭಾಷಣ ಮಾಡುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಜೆ 6.30ಕ್ಕೆ ಚಂದ್ರಶೇಖರ ಕಂಬಾರರ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.