ADVERTISEMENT

36 ಅಡಿ ಬಾವಿಯಲ್ಲಿ ಬತ್ತದ ಜಲದ ಕಣ್ಣು

ಆರ್.ಚೌಡರೆಡ್ಡಿ
Published 23 ಜುಲೈ 2017, 10:45 IST
Last Updated 23 ಜುಲೈ 2017, 10:45 IST
ಶ್ರೀನಿವಾಸಪುರ ತಾಲ್ಲೂಕಿನ ಮಲಮೊಟಕುಪಲ್ಲಿ ಗ್ರಾಮದ ಬಾವಿಯಿಂದ ಮಹಿಳೆಯೊಬ್ಬರು ನೀರು ಸೇದುತ್ತಿರುವುದು
ಶ್ರೀನಿವಾಸಪುರ ತಾಲ್ಲೂಕಿನ ಮಲಮೊಟಕುಪಲ್ಲಿ ಗ್ರಾಮದ ಬಾವಿಯಿಂದ ಮಹಿಳೆಯೊಬ್ಬರು ನೀರು ಸೇದುತ್ತಿರುವುದು   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ 1800 ಅಡಿ ಆಳ ಕೊಳವೆ ಬಾವಿ ಕೊರೆದರೂ ನೀರು ಸಿಗುವ ಭರವಸೆ ಇಲ್ಲ. ಆದರೆ  ಮಲಮೊಟಕುಪಲ್ಲಿ ಗ್ರಾಮದ ಸಮೀಪದ ಶತಮಾನದಷ್ಟು ಹಳೆಯದಾದ ಬಾವಿಯಲ್ಲಿ ಈಗಲೂ ಜನರು ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಅಚ್ಚರಿ ಎಂದರೆ ಈ ಬಾವಿಯ ಆಳ ಕೇವಲ 36 ಅಡಿ! ‘ಈ ಬಾವಿ ಬತ್ತಿದ್ದನ್ನು ನೋಡಿಯೇ ಇಲ್ಲ’ ಎನ್ನುವ ಇಲ್ಲಿನ ಜನರ ಮಾತುಗಳು ಮಗದೊಂದು ಅಚ್ಚರಿಯನ್ನು ನೀಡುತ್ತವೆ. 

ರಾಯಲ್ಪಾಡ್‌ನಿಂದ ಮುದಿಮಡಗು ರಸ್ತೆಯಲ್ಲಿ 4 ಕಿ.ಮೀ ಕ್ರಮಿಸಿ, ಕಡಪಲರೆಡ್ಡಿಗಾರಿಹಳ್ಳಿ ಗ್ರಾಮದ ಕೆರೆ ಅಂಚಿನಲ್ಲಿ ಬಲಕ್ಕೆ ತಿರುಗಿ ಎರಡು ಕಿ.ಮೀ ಸಾಗಿದರೆ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಮಲಮೊಟಕುಪಲ್ಲಿ ಗ್ರಾಮ ಸಿಗುತ್ತದೆ. ಹಳ್ಳಿ ಇನ್ನೂ ಮಾರು ದೂರ ಇರುವಾಗಲೇ ರಸ್ತೆಯ ಬಲಭಾಗದ ಎತ್ತರ ಪ್ರದೇಶದಲ್ಲಿ ಈ ಅಪರೂಪದ ಬಾವಿ ಕಾಣಿಸುತ್ತದೆ.

ಬಿಸಿಲು ವೇಳೆ ಹೊರತುಪಡಿಸಿ ಉಳಿದ ಎಲ್ಲ ಸಮಯ ಮಹಿಳೆಯರು ಈ ಬಾವಿ ಯಲ್ಲಿ ನೀರು ಸೇದುವುದನ್ನು ನೋಡ ಬಹುದು. ಬಾವಿಯ ಕಟ್ಟಡಕ್ಕೆ ಸೈಜು ಕಲ್ಲು ಹಾಗೂ ಗಾರೆ ಬಳಸಲಾಗಿದೆ. ಶತಮಾನದ ಬಾವಿ ಸುಸ್ಥಿತಿಯಲ್ಲಿದೆ. ಸುತ್ತು ಭದ್ರವಾದ ಗೋಡೆ ಇದೆ. ನೀರು ಸೇದಲು ಅನುಕೂಲವಾಗುವಂತೆ ಬಾವಿ ಎರಡೂ ಕಡೆ ಗೋಡೆ ನಿರ್ಮಿಸಲಾಗಿದೆ. ಮೇಲೆ ಕೂಚ ಇಟ್ಟು ಅದಕ್ಕೆ ಗುಡುಗು ಬಂಡಿ ಅಳವಡಿಸಲಾಗಿದೆ. ಮಹಿಳೆಯರು ಆ ಗುಡುಗು ಬಂಡಿಗೆ ಹಗ್ಗ ಹಾಕಿ ನೀರು ಸೇದುತ್ತಿದ್ದಾರೆ.

ADVERTISEMENT

ತೀರಾ ಕಡಿಮೆ ಆಳದಲ್ಲಿ ಜಿನುಗುವ ಈ ನೀರಿನಲ್ಲಿ ಫ್ಲೋರೈಡ್‌ ಅಂಶಗಳಿಲ್ಲ ಎನ್ನುವುದು ವಿಶೇಷ. ಏಕೆಂದರೆ ತಾಲ್ಲೂಕಿನ ಬಹುತೇಕ ಹಳ್ಳಿಗಳ ನೀರಿನಲ್ಲಿ ಫ್ಲೋರೈಡ್‌ ಅಂಶ ಇದೆ. ‘ಹಳ್ಳಿ ಜನ ಕುಡಿಯಲು ಈ ಬಾವಿ ನೀರನ್ನೇ ಬಳಸುತ್ತಿದ್ದಾರೆ’ ಎಂದು ಗ್ರಾಮಸ್ಥರು ಹೆಮ್ಮೆಯಿಂದ ತಿಳಿಸುವರು. ಗ್ರಾಮಸ್ಥರು ಈ ಬಾವಿ ಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಈ ಬಾವಿ ಹೊರತು ಪಡಿಸಿ ಇಂಥದ್ದು ಇನ್ನೊಂದಿಲ್ಲ.

ಬಾವಿ ಸಮೀಪದಲ್ಲಿಯೇ ಆಳವಾಗಿ ಕೊರೆದ ಕೃಷಿ ಕೊಳವೆ ಬಾವಿಗಳಿವೆ. ಹಳ್ಳಿಯ ನೀರಿಗೂ ಒಂದು ಕೊಳವೆ ಬಾವಿ ಇದೆ. ಆದರೂ ಈ ಬಾವಿಯಲ್ಲಿ ನೀರಿಗೆ ಬರವಿಲ್ಲ. ಬೇಸಿಗೆಯಲ್ಲೂ ನೀರು ಸಿಗುತ್ತದೆ.

ಹಿಂದೆ ಪ್ರತಿ ಗ್ರಾಮದಲ್ಲೂ ಕನಿಷ್ಠ  ಒಂದೆರಡು ಸೇದು ಬಾವಿಗಳಿದ್ದವು. ಕೊಳವೆ ಬಾವಿ ಪ್ರಾರಂಭದೊಂದಿಗೆ ಅವು ಬತ್ತಿಹೋದವು. ಹಾಗೆ ಬತ್ತಿದ ಬಾವಿಗಳನ್ನು ಗ್ರಾಮಸ್ಥರು ಸತ್ತ ಕರು, ನಾಯಿ, ಕೋಳಿಗಳನ್ನು ಎಸೆಯಲು, ಬೇಡವಾದ ವಸ್ತುಗಳನ್ನು ತುಂಬಲು ಬಳಸಿಕೊಳ್ಳುತ್ತಿದ್ದರು. ಕೆಲವನ್ನು ಮಣ್ಣು ತುಂಬಿ ಮುಚ್ಚಲಾಯಿತು.

ಆದರೆ ಮಲಮೊಟಕುಪಲ್ಲಿ ಗ್ರಾಮದ ಬಾವಿ ಮಾತ್ರ ಜೀವಂತವಾಗಿದೆ. ಶುದ್ಧ ಕುಡಿಯುವ ನೀರು ಕೊಡುತ್ತಿದೆ. ಆಳದ ಕೊಳವೆ ಬಾವಿಗಳು ಒಣಗುತ್ತಿರುವ ಈ ಕಾಲದಲ್ಲಿ, ಕೆಲವೇ ಅಡಿ ಆಳದ ಬಾವಿಯ ಜಲದ ಕಣ್ಣು ಬತ್ತದಿರುವುದು ಅಚ್ಚರಿ  ಸಂಗತಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.