ADVERTISEMENT

ಜನಸ್ಪಂದನ ಸಭೆಯಲ್ಲಿ ದೂರಿನ ಮಹಾಪೂರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 10:03 IST
Last Updated 24 ಜನವರಿ 2018, 10:03 IST
ಸಭೆಯಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಸತ್ಯವತಿ ಅವರಿಗೆ ಅಹವಾಲು ಸಲ್ಲಿಸಿದರು
ಸಭೆಯಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಸತ್ಯವತಿ ಅವರಿಗೆ ಅಹವಾಲು ಸಲ್ಲಿಸಿದರು   

ಕೋಲಾರ: ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿಯ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ದೂರಿನ ಮಹಾಪೂರವೇ ಹರಿದು ಬಂದಿತು. ಮಧ್ಯಾಹ್ನ 3.30ಕ್ಕೆ ಆರಂಭವಾದ ಸಭೆಯು ಸುಮಾರು ಸಂಜೆ 7ರವರೆಗೂ ನಡೆಯಿತು. ಸಾರ್ವಜನಿಕರು ಗಂಟೆಗಟ್ಟಲೇ ಸಾಲಿನಲ್ಲಿ ನಿಂತು ದೂರಿನ ಅರ್ಜಿಗಳನ್ನು ಸಲ್ಲಿಸಿದರು.

ಭೂದಾಖಲೆ ಸಮಸ್ಯೆ, ಭೂ ಮಂಜೂರಾತಿ, ಖಾತೆ ಬದಲಾವಣೆ, ಪಹಣಿ ತಿದ್ದುಪಡಿ ಸಂಬಂಧ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದವು. ಜಿಲ್ಲಾಧಿಕಾರಿ ಜಿ.ಸತ್ಯವತಿ ದೂರಿನ ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಕೆಲ ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಕಾನೂನಾತ್ಮಕ ತೊಡಕು ಇರುವ ಹಾಗೂ ಗೊಂದಲದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಳುಹಿಸಿದರು.

‘ನನ್ನ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲು ನೆರೆಹೊರೆಯ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ. ಜಮೀನಿನ ಸರ್ವೆ ಮಾಡಿಸುವಂತೆ ಸರ್ವೆ ಅಧಿಕಾರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇನೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ಶ್ರೀನಿವಾಸಪುರ ತಾಲ್ಲೂಕಿನ ಕಠಾರಮುದ್ದಲಹಳ್ಳಿ ನಿವಾಸಿ ಮುನಿಕದಿರಮ್ಮ ಅಳಲು ತೋಡಿಕೊಂಡರು.

ADVERTISEMENT

‘ಗ್ರಾಮವು ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಮನೆ ಕಟ್ಟಿಕೊಳ್ಳಲು ಇ–ಖಾತೆಗೆ ಅರ್ಜಿ ಹಾಕಿದ್ದೇವೆ. ಆದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಪ್ಪ ಮತ್ತು ಸರ್ವೆ ಅಧಿಕಾರಿ ಪುಟ್ಟರಾಜು ನನ್ನಿಂದ ಲಂಚ ಪಡೆದು ಈಗ ದಾಖಲೆ ಮಾಡಿಕೊಡಲು ಆಗುವುದಿಲ್ಲ ಎನ್ನುತ್ತಿದ್ದಾರೆ’ ಎಂದು ಆರೋಪಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಮುನಿಕದಿರಮ್ಮ ಅವರ ಅರ್ಜಿಯನ್ನು ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಕಳುಹಿಸಿ ಪ್ರಕರಣವನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಕ್ಷಣೆ ನೀಡಿ: ‘ಕೋಲಾರ ಹೊರವಲಯದಲ್ಲಿ 22 ಗುಂಟೆ ಪಿತ್ರಾರ್ಜಿತ ಆಸ್ತಿ ಇದ್ದು, ಅದರಲ್ಲಿ 10 ಗುಂಟೆ ಜಾಗವನ್ನು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಉಳಿದ 12 ಗುಂಟೆ ಜಾಗಕ್ಕೆ ಕೆಲ ವ್ಯಕ್ತಿಗಳು ನಕಲಿ ದಾಖಲೆಪತ್ರ ಸೃಷ್ಟಿಸಿ ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಅವರು ಕೊಲೆ ಬೆದರಿಕೆ ಹಾಕುತ್ತಾರೆ. ಆ ಒತ್ತುವರಿದಾರರಿಂದ ಜಮೀನು ಬಿಡಿಸಿ ಕೊಡಿ ಮತ್ತು ಪೊಲೀಸ್‌ ರಕ್ಷಣೆ ನೀಡಿ’ ಎಂದು ನಗರದ ಪೇಟೆಚಾಮನಹಳ್ಳಿ ನಿವಾಸಿ ಕೃಷ್ಣಪ್ಪ ಮನವಿ ಮಾಡಿದರು.

ಹೆದ್ದಾರಿಗೆ ಸ್ವಾಧೀನ ಮಾಡಲಾಗಿದ್ದ ಜಮೀನಿನ ಪರಿಹಾರ ಮೊತ್ತದಲ್ಲಿ ₹ 45 ಸಾವಿರ ಮಾತ್ರ ತನಗೆ ಬಂದಿದೆ. ಉಳಿದ ಹಣ ಬೇನಾಮಿ ವ್ಯಕ್ತಿಗಳ ಹೆಸರಿಗೆ ಹೋಗಿದೆ. ಒಟ್ಟು 5 ಮಂದಿಯ ಹೆಸರಿಗೂ ಜಮೀನಿನ ಖಾತೆಯಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಪತ್ರಗಳು ಕಂದಾಯ ಇಲಾಖೆಯಲ್ಲಿ ಲಭ್ಯವಿಲ್ಲ. ಆ ವ್ಯಕ್ತಿಗಳು ನಕಲಿ ದಾಖಲೆಪತ್ರ ಸೃಷ್ಟಿಸಿ, ತನಗೆ ಜಮೀನು ಸಿಗದಂತೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜಮೀನಿಗೆ ಸಂಬಂಧಿಸಿದ ಮೂಲ ದಾಖಲೆಪತ್ರಗಳನ್ನು ತಹಶೀಲ್ದಾರ್ ಕಚೇರಿಯಿಂದ ತರಿಸುತ್ತೇನೆ. ಜ.27ರಂದು ಕಂದಾಯ ಮತ್ತು ಭೂ ದಾಖಲೆ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪ್ರಕರಣ ಇತ್ಯರ್ಥಪಡಿಸಿಕೊಡುವುದಾಗಿ ಭರವಸೆ ನೀಡಿದರು.

ಶಾಲೆ ಜಾಗ ಒತ್ತುವರಿ: ‘ಶಾಲೆಗೆ ದಾನವಾಗಿ ಬಂದಿದ್ದ ಜಾಗವನ್ನು ಕೆಲ ಸ್ಥಳೀಯರು ಒತ್ತುವರಿ ಮಾಡಿದ್ದಾರೆ. ಒತ್ತುವರಿ ತೆರವುಗೊಳಿಸಿ ಜಾಗ ಬಿಡಿಸಿಕೊಡುವಂತೆ ಶಿಕ್ಷಣ ಇಲಾಖೆ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಕೋಲಾರದ ದೇವಾಂಗಪೇಟೆ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಎನ್.ಪ್ರಭಾವತಿ ಜಿಲ್ಲಾಧಿಕಾರಿಗೆ ದೂರು ನೀಡಿದರು.

ಶಾಲೆಯ ಜಾಗ ಅತಿಕ್ರಮಿಸಿಕೊಂಡಿರುವ ನಾರಾಯಣಸ್ವಾಮಿ ಮತ್ತು ಪ್ರಕಾಶ್‌ ಎಂಬುವರು ಆ ಜಾಗದಲ್ಲಿ ಮಕ್ಕಳಿಗೆ ಶೌಚಾಲಯ ನಿರ್ಮಾಣಕ್ಕೆ ಅವಕಾಶ ಕೊಡುತ್ತಿಲ್ಲ. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಅವರು ಪೊಲೀಸರನ್ನು ಕರೆಸಿ ಬೆದರಿಕೆ ಹಾಕಿಸುತ್ತಾರೆ. ಶಾಲೆಯಲ್ಲಿ ಶೌಚಾಲಯವಿಲ್ಲದೆ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಆ ಜಾಗ ಬಿಟ್ಟರೆ ಶೌಚಾಲಯ ನಿರ್ಮಾಣಕ್ಕೆ ಬೇರೆ ಜಾಗವಿಲ್ಲ ಎಂದು ಹೇಳಿದರು.

ಶಿಕ್ಷಣ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳಿಂದ ಶಾಲೆಯ ಜಾಗದ ಜಂಟಿ ಸರ್ವೆ ಮಾಡಿಸುತ್ತೇನೆ. ಒತ್ತುವರಿದಾರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಾಹನ ನೀಡಿಲ್ಲ: ‘ಸ್ವಯಂ ಚಾಲಿತ ವಾಹನಕ್ಕಾಗಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಇಲಾಖೆಗೆ ಅರ್ಜಿಸಿ ಸಲ್ಲಿಸಿ ಮೂರ್ನಾಲ್ಕು ವರ್ಷವಾಗಿದೆ. ಆದರೆ, ಅಧಿಕಾರಿಗಳು ಈವರೆಗೂ ವಾಹನ ನೀಡಿಲ್ಲ’ ಎಂದು ಅಂಗವಿಕಲ ರಘುಪತಿ ಅಲವತ್ತುಕೊಂಡರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಇಲಾಖೆ ಅಧಿಕಾರಿ ನಾಗವೇಣಿ ಅವರನ್ನು ಕಚೇರಿಗೆ ಕರೆಸಿ ತರಾಟೆಗೆ ತೆಗೆದುಕೊಂಡು ಬುಧವಾರ (ಜ.24) ಸಂಜೆಯೊಳಗೆ ವಾಹನ ಕಲ್ಪಿಸಿಕೊಡುವಂತೆ ತಾಕೀತು ಮಾಡಿದರು.

ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಅರ್ಜಿಗಳನ್ನು ನ್ಯಾಯಾಲಯದಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಸತ್ಯವತಿ ಅರ್ಜಿದಾರರಿಗೆ ಸಲಹೆ ನೀಡಿದರು. ಭೂದಾಖಲೆಗೆ ಸಂಬಂಧಿಸಿದ ಅರ್ಜಿಗಳನ್ನು ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಕಳುಹಿಸಿಕೊಟ್ಟರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.