ADVERTISEMENT

ಬಕ್ರೀದ್‌: ಶಾಂತಿ– ಸೌಹಾರ್ದ ಕಾಪಾಡಿ

ಶಾಂತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಮನವಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2018, 15:19 IST
Last Updated 18 ಆಗಸ್ಟ್ 2018, 15:19 IST
ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಶನಿವಾರ ಶಾಂತಿ ಸಮಿತಿ ಸಭೆ ನಡೆಸಿದರು.
ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಶನಿವಾರ ಶಾಂತಿ ಸಮಿತಿ ಸಭೆ ನಡೆಸಿದರು.   

ಕೋಲಾರ: ‘ಬಕ್ರೀದ್‌ ಹಬ್ಬ ಆಚರಣೆ ವೇಳೆ ಶಾಂತಿ, ಸೌಹಾರ್ದತೆ ಕಾಪಾಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮನವಿ ಮಾಡಿದರು.

ಬಕ್ರೀದ್‌ ಹಿನ್ನೆಲೆಯಲ್ಲಿ ಇಲ್ಲಿ ಶನಿವಾರ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಆ.22ರಂದು ಬಕ್ರೀದ್‌ ಹಬ್ಬವಿದೆ. ಶಾಂತಿಯುತವಾಗಿ ಹಬ್ಬ ಆಚರಿಸಲು ಎಲ್ಲಾ ಸಮುದಾಯದವರು ಕೈ ಜೋಡಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿರುವ ವಾರ್ಡ್‌ಗಳಿಗೆ ಆ.22ರಿಂದ 24ರವರೆಗೆ ನಿರಂತರವಾಗಿ ನೀರು ಸರಬರಾಜು ಮಾಡಬೇಕು. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಬಾರದು. ಕಸ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು’ ಎಂದು ತಿಳಿಸಿದರು.

ADVERTISEMENT

‘ಹಬ್ಬದ ಸಂದರ್ಭದಲ್ಲಿ ಪ್ರಚೋದನಾಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ನಾಗರಿಕರ ಹಿತ ಕಾಪಾಡುವುದು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯು ಪ್ರತಿಯೊಬ್ಬರ ಜವಾಬ್ದಾರಿ. ಸಣ್ಣಪುಟ್ಟ ಅಹಿತಕರ ಘಟನೆ ನಡೆದರೂ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರಿಗೆ ವಿಷಯ ತಿಳಿಸದೆ ಸಮುದಾಯದವರೇ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ಮಾಡಿದರೆ ಸನ್ನಿವೇಶ ವಿಕೋಪಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಕೋರಿದರು.

ಚರಂಡಿ ಸ್ವಚ್ಛಗೊಳಿಸಿ: ‘ನಗರ ಪ್ರದೇಶದಲ್ಲಿ ಮಳೆಯಿಂದ ಚರಂಡಿಗಳು ತುಂಬಿದ್ದು, ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಈ ಸಂಬಂಧ ಹಲವು ಜನಪ್ರತಿನಿಧಿಗಳು ದೂರು ನೀಡಿದ್ದಾರೆ. ನಗರಸಭೆಯ ಪೌರ ಕಾರ್ಮಿಕರಿಂದ ಹಬ್ಬಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆಗಳ ಬದಿಯಲ್ಲಿ ರಾಶಿಯಾಗಿ ಬಿದ್ದಿರುವ ಕಸವನ್ನು ತೆರವುಗೊಳಿಸಬೇಕು’ ಎಂದರು.

ಅಂಜುಮಾನ್ ಇಸ್ಲಾಮಿಯಾ ಜಿಲ್ಲಾ ಸಮಿತಿ ಅಧ್ಯಕ್ಷ ಜಮೀರ್ ಅಹಮ್ಮದ್‌, ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಸ್‌.ಲೋಕೇಶ್, ನಗರಸಭೆ ಸದಸ್ಯ ಅಫ್ರೋಜ್‌ ಪಾಷಾ, ಆಯುಕ್ತ ಸತ್ಯನಾರಾಯಣ ಹಾಗೂ ಶಾಂತಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.