ADVERTISEMENT

‘ಅಂತರಂಗ ಗಟ್ಟಿಗೊಳಿಸಿ, ವಿಕಾಸದತ್ತ ಮುಖಮಾಡಿ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:49 IST
Last Updated 15 ಏಪ್ರಿಲ್ 2017, 9:49 IST

ಕೊಪ್ಪಳ: ಅಂತರಂಗದ ವಿಚಾರದ ಬೇರನ್ನು ಗಟ್ಟಿಗೊಳಿಸಿ ವಿಕಾಸದತ್ತ ಮುಖ ಮಾಡಬೇಕು ಎಂದು ಬೀದರ್‌ನ ಬಸವಗಿರಿಯ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣಾ ತಾಯಿ ಹೇಳಿದರು.ಪ್ರವಚನ ಸೇವಾ ಸಮಿತಿ, ಬಸವತತ್ವ ಮತ್ತು ಪ್ರಗತಿಬರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ಆರಂಭವಾದ ಜೀವನದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಷ್ಟೋ ವೇಳೆ ನಮ್ಮದಲ್ಲದ ವಿಚಾರಕ್ಕೇ ಹೆಚ್ಚು ಗಮನ ಕೊಡುತ್ತೇವೆ. ಹಣ, ಅಂತಸ್ತು, ಪ್ರಶಸ್ತಿ ಇತ್ಯಾದಿಗಳ ಸುತ್ತಲೇ ಬದುಕು ಸಾಗಿರುತ್ತದೆ. ಆದರೆ, ನಿಜವಾದ ಬದುಕು ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ಆದ್ದರಿಂದ ನಾವು ಶಾಶ್ವತವಾದ ಜೀವನದ ಅರ್ಥ ಮತ್ತು ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಜೀವನದ ವ್ಯಾಖ್ಯಾನ ಮನುಷ್ಯನಿಂದ ಮನುಷ್ಯನಿಗೆ ಭಿನ್ನವಾಗಿರುತ್ತದೆ. ವೃತ್ತಿ, ಗಳಿಕೆಯ ಹೆಸರಿನಲ್ಲಿ ನಾವು ಉಪಜೀವನವನ್ನಷ್ಟೇ ಮಾಡುತ್ತೇವೆ. ನಿಜವಾದ ಜೀವನ ಮಾಡುವುದೇ ಇಲ್ಲ. ದೀರ್ಘಾಯುಷ್ಯದ ವ್ಯರ್ಥ ಬದುಕಿಗಿಂತ ಸಾಧನೆಯ ಯೌವನದಲ್ಲಿ ಸಾಧಿಸಿ ಸಾಯುವ ಬದುಕು ಲೇಸು ಎಂದರು.

ADVERTISEMENT

ಮಹಾತ್ಮರು ಬೆಳಗಿದ ಅರಿವಿನ ಜ್ಯೋತಿಯನ್ನು ಮನೆ ಮನಗಳಲ್ಲಿ ಬೆಳಗಬೇಕು. ಅದಕ್ಕೆ ಮನಸ್ಸುಗಳು ಒಂದಾಗಬೇಕು. ಬಸವಣ್ಣ ಮತ್ತು ಅಂಬೇಡ್ಕರ್‌ ಜನಿಸಿದ್ದರಿಂದ ದೇಶದ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆಯುವಂತಾಯಿತು. ಇಲ್ಲವಾದರೆ ಅದು ಕಪ್ಪು ಚುಕ್ಕೆಯಲ್ಲಿ ಮೂಡುತ್ತಿತ್ತು. ಆದರೆ, ಮಹಾತ್ಮರನ್ನು ನಿರ್ದಿಷ್ಟ ಜಾತಿ, ಸಮುದಾಯಕ್ಕೆ ಸೀಮಿತಗೊಳಿಸುವುದು ವಿಷಾದನೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮುಖಂಡ ಚಂದ್ರಶೇಖರ ಕವಲೂರು ಮಾತನಾಡಿ, ಅಂಬೇಡ್ಕರ್‌ ಹುಟ್ಟಿದ ದಿನವನ್ನು ವಿಶ್ವದ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂಥ ಶ್ರೇಷ್ಠ ಜ್ಞಾನಿ ಅವರಾಗಿದ್ದರು. ಅಂಬೇಡ್ಕರ್‌ ಮತ್ತು ಬಸವಣ್ಣ ಹುಟ್ಟಿದ ದಿನಗಳ ಅವಧಿಯಲ್ಲಿ ಅವರ ಸಂದೇಶಗಳನ್ನು ಸಾರುವ, ಜೀವನ ದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.ಗವಿಸಿದ್ದಪ್ಪ ಕೊಪ್ಪಳ, ಉದ್ಯಮಿ ಬಸವರಾಜ ಬಳ್ಳೊಳ್ಳಿ, ಅಮರೇಶ ಕರಡಿ, ಎಂ.ಬಸವರಾಜಪ್ಪ ಇದ್ದರು. ರಾಜೇಶ ಸಸಿಮಠ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.