ADVERTISEMENT

ಅವೈಜ್ಞಾನಿಕ ಚರಂಡಿ ಕಾಮಗಾರಿ: ನಗರ ಸಾರಿಗೆ ಸ್ಥಗಿತ

ಬಸ್‌ ಸಂಚಾರ ಬಂದ್‌: ಪಂಪಾನಗರ ವೃತ್ತದಿಂದ ವಾಲ್ಮೀಕಿ ವೃತ್ತಕ್ಕೆ ಸಂಪರ್ಕಿಸುವ ರಸ್ತೆಯ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 10:22 IST
Last Updated 13 ಫೆಬ್ರುವರಿ 2017, 10:22 IST
ಗಂಗಾವತಿಯ ಪಂಪಾನಗರ ವೃತ್ತದ ಸಮೀಪದ ರಸ್ತೆಯಲ್ಲಿ ಎರಡು ಅಡಿ ಎತ್ತರಕ್ಕೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ
ಗಂಗಾವತಿಯ ಪಂಪಾನಗರ ವೃತ್ತದ ಸಮೀಪದ ರಸ್ತೆಯಲ್ಲಿ ಎರಡು ಅಡಿ ಎತ್ತರಕ್ಕೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ   

ಗಂಗಾವತಿ: ಸ್ವಾತಂತ್ರ್ಯ ಸಿಕ್ಕು ಏಳು ದಶಕ ಕಂಡರೂ ಸಾರಿಗೆ ವಾಹನದ ಮುಖವೇ ಕಾಣದ ನಗರಕ್ಕೆ ಸಮೀಪ ಇರುವ ಸಿದ್ದಿಕೇರಿ ಗ್ರಾಮಕ್ಕೆ ಇತ್ತೀಚೆಗೆ ನಗರ ಸಾರಿಗೆ ಆರಂಭಿಸಲಾಗಿತ್ತು. ಸೇವೆ ಆರಂಭವಾಗಿ ಒಂದು ಎರಡು ವಾರ ಕಳೆಯುವುದರೊಳಗೆ ಸ್ಥಗಿತವಾಗುವ ಮೂಲಕ ಜನರಿಗೆ ನಿರಾಸೆ ಉಂಟು ಮಾಡಿದೆ.

ನಗರದ ಪಂಪಾನಗರ ವೃತ್ತದಿಂದ ಕೊಟ್ಟೂರೇಶ್ವರ ಸಂಸ್ಥೆಯ ಕಾಲೇಜು, ವಾಲ್ಮೀಕಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಕೈಗೊಂಡಿರುವುದು ಸಿದ್ಧಿಕೇರಿಗೆ ಹೋಗಲು ಪರ್ಯಾಯ ಮಾರ್ಗವಿಲ್ಲದೇ ಕಳೆದ ಹತ್ತು ದಿನಗಳಿಂದ ಸಾರಿಗೆ ವಾಹನ ಓಡಾಟ ಸ್ಥಗಿತವಾಗಿದೆ.

ಜೆನರ್ಮ್‌್ ನಗರ ಸಾರಿಗೆ ಯೋಜನೆಯಿಂದ  ಮಂಜೂರಾಗಿದ್ದ ಒಂದು ಬಸ್‌ ಸಿದ್ದಿಕೇರಿಗೆ  ಸಂಚಾರ ನಡೆಸುತ್ತಿತ್ತು. ಸುಲಭ ಸಂಚಾರಕ್ಕೆ ಸಾಧ್ಯವಿಲ್ಲದ ರಸ್ತೆ, ಪ್ರಯಾಣಿಕರ ಕೊರತೆ, ಆದಾಯ ಕೊರತೆ ಸಮಸ್ಯೆಯ ಮಧ್ಯೆಯೂ ಸಾರಿಗೆ ಇಲಾಖೆ, ಎರಡು ವಾರ ದಿನಕ್ಕೆ ಮೂರು ಬಾರಿ ವಾಹನ ಓಡಿಸುವ ಮೂಲಕ ಸೇವೆ ನೀಡಿದ್ದರಿಂದ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರಿಗೆ ಅನುಕೂಲವಾಗಿತ್ತು.

‘ಚರಂಡಿ ನಿರ್ಮಾಣದ ನೆಪದಲ್ಲಿ ವಾಹನ ಸೇವೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ರಸ್ತೆಯ ಮೇಲ್ಮೈಯಿಂದ ಸುಮಾರು ಎರಡು ಅಡಿ ಎತ್ತರಕ್ಕೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವುದು ವಾಹನ ಓಡಾಟಕ್ಕೆ ತೊಂದರೆಯಾಗಿದೆ’ ಎಂದು ಪ್ರಯಾಣಿಕರಾದ ದೇವಪ್ಪ ತಾಳದ, ಸುಂಕೀರಪ್ಪ ನಾಯಕ ದೂರಿದ್ದಾರೆ. 

ಕಲ್ಮಠ, ಮಹಾವೀರ ವೃತ್ತದಿಂದ ವಾಲ್ಮೀಕಿ ವೃತ್ತದವರೆಗಿನ ರಸ್ತೆ ಒತ್ತುವರಿ ತೆರವಿಗೆ ನಗರಸಭೆ ಮುಂದಾದರೆ ಪರ್ಯಾಯ ವಾಹನಗಳ ಓಡಾಟಕ್ಕೆ ಮಾರ್ಗ ಸಿಗುತ್ತವೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಎಂ.ಜೆ. ಶ್ರೀನಿವಾಸ

* ಬಸ್ ಓಡಾಟದಿಂದ ಗ್ರಾಮದ ಶಾಲಾ– ಕಾಲೇಜು ಮಕ್ಕಳಿಗೆ, ಆಸ್ಪತ್ರೆಗೆ ಹೋಗಿ ಬರಲು ಮಹಿಳೆ, ಮಕ್ಕಳು ವೃದ್ಧರಿಗೆ ಅನುಕೂಲವಾಗಿದೆ
ಲಕ್ಷ್ಮಿ, ಪಾರ್ವತಿ, ಸುಧಾ, ವಿದ್ಯಾರ್ಥಿನಿಯರು, ಸಿದ್ದಿಕೇರಿ

ADVERTISEMENT

* ನಗರ ಸಾರಿಗೆಯಲ್ಲಿ ಪ್ರತಿ ಕಿ.ಮೀ.ಗೆ  ಕನಿಷ್ಠ ₹ 26  ಸಂಗ್ರಹವಾಗಬೇಕು.  ಸಿದ್ದಿಕೇರಿ ಮಾರ್ಗದಲ್ಲಿ ಪ್ರತಿ ಕಿ.ಮೀ.ಗೆ ಕೇವಲ ₹3–-4 ಮಾತ್ರ ಸಂಗ್ರಹವಾಗುತ್ತಿದೆ. ಇದು ಸಂಸ್ಥೆಗೆ ನಷ್ಟದಾಯಕ.
ಆರ್.ಎಸ್. ಸೊನ್ನದ, ವ್ಯವಸ್ಥಾಪಕ, ಸಾರಿಗೆ ಇಲಾಖೆ ಗಂಗಾವತಿ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.