ADVERTISEMENT

ಇಲ್ಲಿ ಇಡ್ಲಿ, ವಡೆಗೆ ಕೇವಲ ₹1.75!

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:30 IST
Last Updated 17 ಏಪ್ರಿಲ್ 2017, 6:30 IST
ಕೊಪ್ಪಳದ ಭಾಗ್ಯನಗರದ ಅಂಬಾಸಾ ದಲಬಂಜನ್‌ ಹೋಟೆಲ್‌
ಕೊಪ್ಪಳದ ಭಾಗ್ಯನಗರದ ಅಂಬಾಸಾ ದಲಬಂಜನ್‌ ಹೋಟೆಲ್‌   
ಕೊಪ್ಪಳ: ಸ್ಪರ್ಧಾತ್ಮಕ ದಿನಗಳಲ್ಲೂ ಅತ್ಯಂತ ಅಗ್ಗದ ಬೆಲೆಗೆ ಉಪಾಹಾರ ಪೂರೈಸುವ ಹೋಟೆಲ್‌ ಇಲ್ಲಿದೆ.  ಭಾಗ್ಯನಗರದ ಅಂಬಾಸಾ ದಲಬಂಜನ್‌ ಅವರ ಪುಟ್ಟ ಹೋಟೆಲ್‌ನಲ್ಲಿ ಪ್ರತಿ ಇಡ್ಲಿ ಹಾಗೂ ವಡೆಗೆ ತಲಾ ₹ 1.75. 
 
ಅಂಬಾಸ ಅವರನ್ನು ಮಾತಿಗೆಳೆದಾಗ ಅವರು ಹೇಳಿದ್ದು, ಬಹಳಷ್ಟು ವರ್ಷಗಳಿಂದ ಈ ವ್ಯಾಪಾರ ಮಾಡುತ್ತಿದ್ದೇವೆ. ಎಲ್ಲ ಸಾಮಗ್ರಿಗಳು ಮನೆಯಲ್ಲಿ ಇವೆ. ಮಳಿಗೆಯೂ ನಮ್ಮದೇ ಆದ್ದರಿಂದ ಇದರಿಂದ ಸಿಗುವ ಉಳಿತಾಯದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತೇವೆ ಎನ್ನುತ್ತಾರೆ. 
 
2003ರಲ್ಲಿ ಈ ಹೋಟೆಲ್‌ ತೆರೆದೆ. ನನಗೆ ಕಾಲು ನೋವಿನ ಸಮಸ್ಯೆ ಇದೆ. ಹಾಗಾಗಿ ಬೇರೆ ಉದ್ಯೋಗ ಮಾಡುವುದು ಕಷ್ಟ. ನನ್ನ ಜತೆ ಮಗ ಪ್ರವೀಣ ಕೈಜೋಡಿಸಿದ್ದಾನೆ. ಹೀಗಾಗಿ ಬದುಕು ಸಾಗಿದೆ ಎಂದು ಹೇಳಿದರು ಅಂಬಾಸ. 
 
ನಮ್ಮದು ಇದೇ ವ್ಯಾಪಾರದ ಬದುಕು ನನ್ನ ತಂದೆಯವರು ಸೋಡಾ ಅಂಗಡಿ ಮಾಡಿದ್ದರು. ಆ ವ್ಯವಹಾರ ಕೈಹಿಡಿಯಲಿಲ್ಲ. ಈಗ ಹೋಟೆಲ್‌ ತೆರೆದಿದ್ದೇವೆ. ಹಾಗೂ ಹೀಗೂ ಜೀವನ ಸಾಗಿದೆ ಎಂದು ಹೇಳಿದರು ಅವರು.
 
ಕೇವಲ ₹10ಕ್ಕೆ 6 ಇಡ್ಲಿ: 14 ವರ್ಷಗಳಿಂದ ಈ ವ್ಯಾಪಾರ ಮಾಡುತ್ತಿದ್ದೇವೆ. ಮೊದಲು ₹10ಕ್ಕೆ 10 ಇಡ್ಲಿ ಅಥವಾ ವಡಾ ಮಾರುತ್ತಿದ್ದೆವು. ನಂತರ ₹8, ಈಗ ₹10ಕ್ಕೆ 6 ಇಡ್ಲಿ ಅಥವಾ ವಡಾ ಮಾರುತ್ತಿದ್ದೇವೆ. ಅಂದರೆ ಪ್ರತಿ ಇಡ್ಲಿ ಅಥವಾ ವಡಾದ ಬೆಲೆ ₹1.75ಪೈಸೆ ಇದೆ. ದಿನಾಲು ₹ 600 ವ್ಯಾಪಾರವಾಗುತ್ತದೆ. ಇದರಲ್ಲಿ ₹ 350 ಖರ್ಚಾಗುತ್ತದೆ. ಇದರಿಂದ ದಿನಕ್ಕೆ ₹ 250 ಆದಾಯ ಬರುತ್ತದೆ ಎಂದು ಅಂಬಾಸಾ ಲೆಕ್ಕಾಚಾರ ತೆರೆದಿಟ್ಟರು.
ಅನಿಲ್‌ ಬಾಚನಹಳ್ಳಿ
***
ಬದುಕಿಗೆ ಬೇಕಾದ ಆದಾಯ
ಭಾಗ್ಯನಗರದಲ್ಲಿ ಹತ್ತಾರು ಹೋಟೆಲ್‌ಗಳಿವೆ. ಹಾಗಿದ್ದರೂ ಗ್ರಾಹಕರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಇಲ್ಲಿ ಸಿಗುವುದು ಇಡ್ಲಿ ವಡೆ ಮಾತ್ರ. ಹೆಚ್ಚು ವೈವಿಧ್ಯತೆ ಮಾಡಲು ಹೋಗಿ ಆಹಾರ ವ್ಯರ್ಥವಾಗಿ ನಷ್ಟವಾಗಬಾರದು ಎನ್ನುವುದು ನಮ್ಮ ಸಿದ್ಧಾಂತ. ಮಾತ್ರವಲ್ಲ ಸೀಮಿತ ಪ್ರಮಾಣದಲ್ಲಿ ತಯಾರಿಸುತ್ತೇವೆ. ಇದರಿಂದ ನಮ್ಮ ಶ್ರಮವೂ ಕಡಿಮೆ. ಬದುಕಿಗೆ ಬೇಕಾದಷ್ಟೇ ಆದಾಯ ಬರುತ್ತದೆ ಎನ್ನುತ್ತಾರೆ ದಲಭಂಜನ್‌.
***
‘ವ್ಯಾಪಾರ ಮುಂದುವರಿಕೆ’
ದಲಬಂಜನ್‌ ಪುತ್ರ ಪ್ರವೀಣ ಹೇಳುವಂತೆ ಬೆಳಿಗ್ಗೆ 6.30ರಿಂದ 9.30ರವರೆಗೆ ಅಂಗಡಿ ತೆಗೆದಿರುತ್ತದೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ನೇಕಾರರು, ಕಾರ್ಮಿಕರು ಇಲ್ಲಿಯೇ ಉಪಾಹಾರ ಮಾಡುತ್ತಾರೆ.  ತಂದೆ ಮಾಡಿಕೊಂಡು ಬಂದ ಈ ವ್ಯಾಪಾರವನ್ನೇ ನಾನು ಮುಂದುವರಿಸಿದ್ದೇನೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.