ADVERTISEMENT

ಕಣ್ಣಿಲ್ಲದಿದ್ದರೂ ಕೆಲಸಕ್ಕೆ ಮಾತ್ರ ಬಿಡುವಿಲ್ಲ

ಕಿಶನರಾವ್‌ ಕುಲಕರ್ಣಿ
Published 3 ಸೆಪ್ಟೆಂಬರ್ 2017, 7:11 IST
Last Updated 3 ಸೆಪ್ಟೆಂಬರ್ 2017, 7:11 IST
ಖಾದರಬಾಷಾ ಅವರ ಅಂಗಡಿಯ ಮುಂದೆ ಮಕ್ಕಳ ಸಂತೆ. ಇವರೆ ನಿತ್ಯದ ಗ್ರಾಹಕರು
ಖಾದರಬಾಷಾ ಅವರ ಅಂಗಡಿಯ ಮುಂದೆ ಮಕ್ಕಳ ಸಂತೆ. ಇವರೆ ನಿತ್ಯದ ಗ್ರಾಹಕರು   

ಹನುಮಸಾಗರ: ಬ್ಯಾಂಕ್‌ನಲ್ಲಿ ನೋಟು ಪರೀಕ್ಷಿಸುವ ಯಂತ್ರಗಳೂ ಇವೆ. ಆದರೆ, ಹನುಮಸಾಗರದಲ್ಲಿ ಪುಟ್ಟವ್ಯಾಪಾರ ಮಾಡುವ 30 ವರ್ಷದ ಅಂಧ ಖಾದರಬಾಷಾ ಮೂಲಿಮನಿ ಅವರಿಗೆ ಖೋಟಾ ನೋಟು ಪತ್ತೆ ಹಚ್ಚುವುದು ಸಲೀಸು. ಯಾರಾದರೂ ಅಂತಹ ನೋಟ್‌ಗಳನ್ನು ನೀಡಿದರೆ ಅಥವಾ ಅದೇ ಅಳತೆಯ ನೋಟ್‌ ನೀಡಿ ಬೇರೆ ನೋಟಿನ ಅಂಕಿ ಹೇಳಿದರೆ ‘ನೀವು ಯಾರಿಗಾದರೂ ಮೋಸ ಮಾಡಬಹುದು. ಆದರೆ ಈ ಭಾಷಾಗೆ ಮಾತ್ರ ಮೋಸ ಮಾಡಲು ಅಸಾಧ್ಯ’ ಎಂದು ಖಡಕ್ಕಾಗಿ ಹೇಳುತ್ತಾರೆ.

'ಆರಂಭದಲ್ಲಿ ₹ 2 ಸಾವಿರ ಹಾಗೂ ₹ 500ರ ಹೊಸ ನೋಟುಗಳು ಬಂದಾಗ ಭಾಷಾ ಒಂದು ಗಂಟೆ ಕೈಯಲ್ಲಿ ನೋಟು ಹಿಡಿದು ಅಳತೆ, ಗಾತ್ರ, ತೂಕ, ಕೈಗೆ ಒರಕುವ ಅಕ್ಷರಗಳನ್ನು ಕುಲಂಕಷವಾಗಿ ಪರಿಶೀಲಿಸಿದರು. ಬಳಿಕ ಅವರ ಕೈಗಳೇ ಅಸಲಿ ನೋಟು ಯಾವುದು ನಕಲಿ ನೋಟು ಯಾವುದು ಎಂಬುದನ್ನು ಪತ್ತೆ ಹಚ್ಚುವ ಯಂತ್ರಗಳಾದವು' ಎಂದು ಅವರ ತಾಯಿ ಹುಸೇನ್‌ಬಿ ಹೇಳುತ್ತಾರೆ.

5 ವರ್ಷದ ಬಾಲಕನಾಗಿದ್ದಾಗ ಅದ್ಯಾವುದೊ ಜ್ವರ ಬಂದು ಎರಡೂ ಕಣ್ಣು ಕಳೆದುಕೊಳ್ಳಬೇಕಾಯಿತು. ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದರೆ ಕಣ್ಣುಗಳು ಬರುತ್ತವೆ ಎಂದು ವೈದ್ಯರು ಹೇಳಿದ್ದರು. ಆದರೆ ಅದ್ಯಾವ ಪ್ರಯತ್ನ ಕೈಗೂಡಲಿಲ್ಲ ಎಂದು ಭಾಷಾ ನಿರಾಸೆಯಿಂದ ಹೇಳುತ್ತಾರೆ. ದಾದೇಸಾಹೇಬ್‌ ಹಾಗೂ ಹುಸೇನ್‌ಬಿ ದಂಪತಿಯ ಆರು ಜನ ಮಕ್ಕಳಲ್ಲಿ ಬಾಷಾ ಮಾತ್ರ ಅಂಧರು.

ADVERTISEMENT

ಅನಕ್ಷರಸ್ಥರಾಗಿರುವ ಬಾಷಾ ಅವರ ಲೆಕ್ಕವೆಲ್ಲ ಬಾಯಿಯಲ್ಲಿಯೇ. ನೋಟಿನ ಕಂತೆಗಳನ್ನು ಎಣಿಸುವಾಗ ಎಲ್ಲೂ ಲೆಕ್ಕ ತಪ್ಪುವುದಿಲ್ಲ. ಬೆಳಿಗ್ಗೆ ಅವರದೆ ಹೋಟೆಲ್‌ನಲ್ಲಿ ಕೌಂಟರ್‌ಗೆ ಕುಳಿತು ಕಾರ್ಯನಿರ್ವಹಿಸಿದರೆ, ಮಧ್ಯಾಹ್ನದ ಸಮಯದಲ್ಲಿ ಮನೆಯ ಮುಂದಿರುವ ತಮ್ಮ ಪುಟ್ಟ ಮಿಠಾಯಿ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಾರೆ.

ಅಲ್ಲದೆ ರಾತ್ರಿ ತಾಯಿಗೆ ಕೈಕೆಲಸದಲ್ಲಿ ನೆರವಾಗುತ್ತಾರೆ. ‘ದಿನ ಎಷ್ಟು ಲಾಭ ಆಗುತ್ತೆ ಅನ್ನೋದಕ್ಕಿಂತ ನಾನು ಹೇಗೆ ಸ್ವಾವಲಂಬಿಯಾಗಿದ್ದೇನೆ ಅನ್ನೋದು ಮುಖ್ಯ’ ಎಂದು ಕೇಳಿದವರಿಗೆ ಹೇಳುತ್ತಾರೆ.

ಹೋಟೆಲ್‌ ಹಾಗೂ ಮಿಠಾಯಿ ಅಂಗಡಿಯನ್ನು ಮೇಲ್ದರ್ಜೆಗೇರಿಸುವ ಕನಸು ಹೊತ್ತಿರುವ ಬಾಷಾ ಅವರಿಗೆ ಆರ್ಥಿಕ ತೊಂದರೆ ಎದುರಾಗಿದೆ. ಏನೂ ಓದಿರದ ನನಗೆ ನೆರವು ಸಿಕ್ಕರೆ ಜತೆಗೆ ನಾಲ್ಕಾರು ಜನರಿಗೂ ಉದ್ಯೋಗ ನೀಡುವ ಶಕ್ತಿ ನನ್ನಲ್ಲಿದೆ ಎಂದು ಅವರಿವರನ್ನು ಅಂಗಲಾಚುತ್ತಾರೆ. ಜಿಲ್ಲಾ ಪಂಚಾಯಿತಿಯಿಂದ ಸಹಾಯ ಧನ ಪಡೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಸಹಾಯಧನ ದೊರ ಕಿದರೆ ನನ್ನ ಪುಟ್ಟ ಅಂಗಡಿ ಮುಖ್ಯರಸ್ತೆಗೆ ಬರುತ್ತದೆ ಎಂದು ಈ ಬಾಷಾ ಹೆಮ್ಮೆಯಿಂದ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.