ADVERTISEMENT

ಕಳಪೆ ಬಿಸಿಯೂಟ: ಶಾಲೆಗೆ ಪಾಲಕರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:22 IST
Last Updated 5 ಜನವರಿ 2017, 9:22 IST

ಗಂಗಾವತಿ: ಶಾಲೆಯಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದರಿಂದ ಆಹಾರ ಸೇವಿಸಿದ ಮಕ್ಕಳು ಅಸ್ವಸ್ಥರಾಗುತ್ತಿದ್ದಾರೆ ಎಂದು ಆರೋಪಿಸಿ ಪಾಲಕರು ಶಾಲೆಗೆ ಮುತ್ತಿಗೆ ಹಾಕಿ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಬುಧವಾರ ನಡೆದಿದೆ.

16ನೇ ವಾರ್ಡ್‌ ಸರ್ಕಾರಿ ಮಾದರಿಯ ಕಿರಿಯ ಪ್ರಾಥಮಿಕ ಶಾಲೆ (ಪ್ರಾಪರ್)ಯಲ್ಲಿ ಈ ಘಟನೆ ನಡೆದಿದ್ದು, ಕಳಪೆ ಗುಣಮಟ್ಟದ ಆಹಾರ ಧಾನ್ಯಗಳಿಂದ ಆಹಾರ ಬೇಯಿಸಲಾಗಿದೆ ಎಂದು ದೂರಿ ಪಾಲಕರು ಮುಖ್ಯ ಶಿಕ್ಷಕ ಕಲ್ಲಪ್ಪ ಕದ್ರಿಮನಿ ಅವರನ್ನು ಕೂಡಿ ಹಾಕಲು ಯತ್ನಿಸಿದರು.

ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ಪಾಲಕರು ಹಾಗೂ ಅಡುಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಪಾಲಕ ಸೋಮಶೇಖರ ಮಾತನಾಡಿ, ಕಳೆದ ಹಲವು ದಿನಗಳಿಂದ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುತ್ತಿದೆ. ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ಅಡುಗೆ ಸಿಬ್ಬಂದಿ, ಇಲಾಖೆ ನೀಡಿದ ಆಹಾರಧಾನ್ಯವನ್ನೇ ಬೇಯಿಸುತ್ತಿದ್ದೇವೆ ಎಂದು ಉತ್ತರ ನೀಡಿದರು. ಆಹಾರಧಾನ್ಯದಲ್ಲಿ ಜೊಂಡು ಹಿಡಿದ ಬೇಳೆ, ಕಂದು ಬಣ್ಣಕ್ಕೆ ತಿರುಗಿದ ಅಕ್ಕಿ ನೀಡಲಾಗಿದೆ ಎಂದು ದೂರಿದರು. ಆಹಾರ ಧಾನ್ಯವನ್ನು ಬಸಲಿಸುವಂತೆ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗುವುದು ಎಂದು ಬಿಇಒ ತಿಳಿಸಿದರು.ನಗರಸಭಾ ಸದಸ್ಯ ಕೆ. ವೆಂಕಟೇಶ, ನಗರಠಾಣೆಯ ಪಿಐ ರಾಜಕುಮಾರ ಭಜಂತ್ರಿ, ಅಕ್ಷರ ದಾಸೋಹ ಆರ್.ಟಿ. ನಾಯಕ, ಗಣೇಶ, ವಿನಾಯಕ, ಸೋಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.