ADVERTISEMENT

ಕಾಲುವೆ ಹೂಳು ತೆಗೆಯಲು ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 7:13 IST
Last Updated 3 ಸೆಪ್ಟೆಂಬರ್ 2017, 7:13 IST

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ವಿವಿಧ ವಿತರಣಾ ಹಾಗೂ ಉಪ ವಿತರಣಾ ಕಾಲುವೆಗಳಿಗೆ ಕೃಷಿ ಚಟುವಟಿಕೆಗೆ ಹರಿದು ಬರುತ್ತಿರುವ ನೀರನ್ನು ತಮ್ಮ ಹೊಲಗಳಿಗೆ ಹರಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಕಳೆದ ಆರು ತಿಂಗಳಿನಿಂದ ಕಾಲುವೆಗೆಳಿಗೆ ನೀರು ಹರಿದಿಲ್ಲ. ಹಾಗಾಗಿ ಕಾಲುವೆಗಳಲ್ಲಿ ಕಸಕಡ್ಡಿ, ಗಿಡಗಂಟೆಗಳು ಬೆಳೆದು ಈಗ ನೀರು ಸರಾಗವಾಗಿ ಹರಿದು ಮುಂದಕ್ಕೆ ಹೋಗಲು ಸಮಸ್ಯೆಯಾಗಿದೆ. ಇದರಿಂದಾಗಿ ಕಾಲುವೆಯ ಕೆಳಭಾಗದ ರೈತರಿಗೆ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ.

ಹಾಗಾಗಿ ಅಯೋಧ್ಯಾ ಹಾಗೂ ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಸುವ ತಾಲ್ಲೂಕಿನ ವಿದ್ಯಾನಗರದ ಸಮೀಪ ಇರುವ ನಂಬರ್- 17 ಕಾಲುವೆಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣ ಗಿಡ, ಬಟ್ಟೆ, ಕಸ, ತಿಪ್ಪೆಯಂತ ತ್ಯಾಜ್ಯವನ್ನು ಸ್ವತಃ ರೈತರೇ ಕಾಲುವೆಗೆ ಇಳಿದು ಸ್ವಚ್ಛಗೊಳಿಸಿದರು.

ADVERTISEMENT

ನೀರು ಬರುವ ಮುನ್ನ ಕಾಲುವೆಗಳನ್ನು ಸ್ವಚ್ಛಗೊಳಿಸುವಂತೆ ನೀರಾವರಿ ಇಲಾಖೆಯ ಜೂನಿಯರ್ ಎಂಜಿನೀಯರ್ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಗ್ಯಾಂಗ್‌ಮನ್‌ಗಳಿಗೆ ಕರೆ ಮಾಡಿದರೆ ಮುಷ್ಕರದ ಹಿನ್ನೆಲೆಯಲ್ಲಿ ಅವರೂ ಬಂದಿಲ್ಲ ಎಂದು ರೈತ ವಿಜಯಕುಮಾರ ಹೇಳಿದರು.

ಇದು ಕೇವಲ ಸಮಸ್ಯೆಗಳ ಆರಂಭವಷ್ಟೆ. ನೀರಿನಿಂದ ಆರಂಭ ವಾಗುವ ಸಮಸ್ಯೆ ಕ್ಷಣಕ್ಷಣಕ್ಕೂ ಆತಂಕ ಹುಟ್ಟಿಸಿದೆ. ನಾಟಿ ಮಾಡಿ ಬೆಳೆ ಕಟಾವು ಮಾಡುವವರೆಗೂ ನಿತ್ಯ ಒಂದಿಲ್ಲೊಂದು ಸಮಸ್ಯೆಯ ಸುಳಿಯಲ್ಲಿ ನಾವು ಸಿಲುಕುತ್ತಲೇ ಇರುತ್ತೇವೆ ಎನ್ನುವ ಆತಂಕ ವ್ಯಕ್ತಪಡಿಸಿದ ರೈತರು, ಕಾಲುವೆಗೆ ನೀರು ಬಿಡುವ ಮುನ್ನ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕಿತ್ತು ಎಂದು ದೂರಿದರು. ಶ್ರೀನಿವಾಸ, ಹರಿ, ಪಾಪಾರಾವ್, ಸತ್ಯನಾರಾಯಣ, ವೆಂಕಟರಾವ್, ರಾಂಬಾಬು, ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.