ADVERTISEMENT

ಕುಕನೂರು: ಮಾರುತೇಶ್ವರ ಸಂಭ್ರಮದ ಕಾರ್ತಿಕೋತ್ಸವ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 9:15 IST
Last Updated 13 ನವೆಂಬರ್ 2017, 9:15 IST

ಕುಕನೂರು: ಮಾರುತೇಶ್ವರ ಸಂಭ್ರಮದ ಕಾರ್ತಿಕೋತ್ಸವ ಕುಕನೂರು: ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನವು ಈ ಭಾಗದ ಸಾವಿರಾರು
ಭಕ್ತಾದಿಗಳನ್ನು ಸೆಳೆವ ಪುಣ್ಯ ತಾಣವಾಗಿದೆ. ಇದು ಪುರಾತನ ದೇವಸ್ಥಾನವಾಗಿದ್ದು ಸುಂದರ ಕೆತ್ತನೆ ಕಲಾಕೃತಿಗಳನ್ನು ಹೊಂದಿದೆ. ಮೂರ್ತಿ ಪ್ರತಿಷ್ಠಾಪನೆಯ ಐತಿಹಾಸಿಕ ಚಾರಿತ್ರೆ ಇದೆ.

ಇಟಗಿಗೆ ಒಯ್ಯಲಾಗುತ್ತಿದ್ದ ಹನುಮಂತನ ಮೂರ್ತಿಯನ್ನು ಕತ್ತಲಾದ ಕಾರಣ ಮಸಬಹಂಚಿನಾಳ ಗ್ರಾಮದ ಹೊರವಲಯದಲ್ಲಿ ಇರಿಸಿ ವಸತಿ ಮಾಡಲಾಯಿತು. ಮರುದಿನ ಇಟಗಿಗೆ ಒಯ್ಯಲು ಮುಂದಾದಾಗ ಮೂರ್ತಿಯು ಆ ಸ್ಥಳದಿಂದ ಸ್ವಲ್ಪವೂ ಅಲುಗಾಡಲಿಲ್ಲ. ಅಂದಿನಿಂದ ಆ ಮೂರ್ತಿಯನ್ನು ಇಲ್ಲಿಯೇ ಪೂಜಿಸಲಾಗುತ್ತಿದೆ’ ಎಂದು
ಹಿರಿಯರು ಹೇಳುತ್ತಾರೆ.

ಹನುಮಂತನ ಮೂರ್ತಿಯು ಸಾಮಾನ್ಯವಾಗಿ ದಕ್ಷಿಣಾಭಿಮುಖವಾಗಿ ಇರುತ್ತವೆ. ಆದರೆ ಇಲ್ಲಿ ಮೂರ್ತಿಯು  ಪಶ್ಚಿಮಾಭಿಮುಖವಾಗಿ ಇದೆ. ಆದ್ದರಿಂದಲೇ ಶನಿವಾರ ಮತ್ತು ಪ್ರತಿ ಅಮಾವಾಸ್ಯೆಯಂದು ರಾಜ್ಯದ ವಿವಿಧೆಡೆಯಿಂದ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಅವರಿಗಾಗಿ ದಾಸೋಹ ವ್ಯವಸ್ಥೆ ಇರುತ್ತದೆ. ಭಕ್ತರು ರಾತ್ರಿ ಅಲ್ಲಿಯೇ ಮಲಗಿ ಮರು ದಿನ ಬೆಳಿಗ್ಗೆ ಮಜ್ಜಲ ಭಾವಿಯಲ್ಲಿ ಸ್ನಾನ ಮಾಡಿಕೊಂಡು ಬಂದು ದೇವರ ದರ್ಶನ ಪಡೆಯುತ್ತಾರೆ.

ADVERTISEMENT

’ಈ ಎಲ್ಲಾ ಧಾರ್ಮಿಕ ಪ್ರಕ್ರಿಯೆಯಿಂದ ರೋಗ ರುಜಿನೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ದೇವಸ್ಥಾನದ ಗೋಪುರಕ್ಕಿಂತ ಎತ್ತರಕ್ಕೆ ಗ್ರಾಮಸ್ಥರು ಮನೆ ಕಟ್ಟುವದಿಲ್ಲ. ಕಾರ್ತಿಕ ಮಾಸದಲ್ಲಿ ಈ ಭಾಗದಲ್ಲಿ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ಜಾತ್ರೆ ನಂತರ ಉಳಿದ ದೇವರುಗಳ ಕಾರ್ತಿಕ ಮಹೋತ್ಸವ ಜರಗುತ್ತವೆ.

ಕಾರ್ತಿಕ ಮಾಸದ ನ.13ರಂದು ಮಾರುತೇಶ್ವರ ಜಾತ್ರಾ ಮಹೋತ್ಸವ ಇದೆ. ಕುಂಕುಮಾರ್ಚನೆ, ಎಲೆಪೂಜೆ, ದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಪಾದಯತ್ರೆ ಮುಖಾಂತರ ಬರುವ ಭಕ್ತರು ಲಕ್ಷ ದೀಪೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಇಟಗಿ ಮಹೇಶ್ವರ ಭಜನಾ ಸಂಘ ಮತ್ತು ಮಂಡಲಗಿರಿ ವೀರೇಶ್ವರ ಭಜನಾ ಸಂಘದಿಂದ ಕಾರ್ಯಕ್ರಮ ಜರುಗುತ್ತದೆ. ಮಂಗಳವಾರ ಬೆಳಿಗ್ಗೆ 4ಕ್ಕೆ  ಸುಮಾರು ಐದು ಭಜನಾ ಮಂಡಳಿಗಳಿಂದ ಪಲ್ಲಕ್ಕಿ ಸೇವೆ, ಮುಂಗೈ ಕುಸ್ತಿ, ಕಬ್ಬಡ್ಡಿ, ರಂಗೋಲಿ, ಹಾಡಿನ ಸ್ಪರ್ಧೆಗಳು ನಡೆಯುತ್ತವೆ. ‘ಕನಿಕರವಿಲ್ಲದ ಧನಿಕರು’ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಮುದ್ದಪ್ಪ ನಾಗರಹಳ್ಳಿ ತಿಳಿಸಿದರು.

ಭಕ್ತರು ದೇವಸ್ಥಾನಕ್ಕೆ ಹಣವನ್ನು ಮತ್ತು ವಸ್ತುಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. ಯುಗಾದಿ ಪಾಢ್ಯ ದಿನ ಹುಬ್ಬಳ್ಳಿ, ದಾವಣಗೆರೆ, ಗದಗ, ಬಳ್ಳಾರಿ, ರೋಣ ಹೀಗೆ ಮುಂತಾದ ಕಡೆಯಿಂದ ಭಕ್ತರು ಬರುವರು. ಅಂದಿನ ರಾತ್ರಿ ಲಘು ರಥೋತ್ಸವ, ಖೊಂಡ ಹಾರುವ ಕಾರ್ಯಕ್ರಮ ನಡೆಯುವುದು.

ಮಂಜುನಾಥ ಎಸ್‌.ಅಂಗಡಿ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.