ADVERTISEMENT

ಕುಷ್ಟಗಿ ಬಸ್‌ನಿಲ್ದಾಣದ ಬಳಿ ಪರಿಸರ ಮಾಲಿನ್ಯ

ತುಂಬಿತುಳುಕುತ್ತಿರುವ ಚರಂಡಿ, ಪುರಸಭೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 10:05 IST
Last Updated 2 ಜನವರಿ 2017, 10:05 IST

ಕುಷ್ಟಗಿ: ನಿತ್ಯ ಸಹಸ್ರ ಸಂಖ್ಯೆ ಜನರು ಬಂದುಹೋಗುವ ಇಲ್ಲಿಯ ಬಸ್‌ನಿಲ್ದಾಣದ ಬಳಿ ಜನನಿಬಿಡ ಸ್ಥಳದಲ್ಲಿ ಪರಿಸರ ಮಾಲಿನ್ಯ ಉಂಟಾಗಿದ್ದು ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ದೂರಲಾಗಿದೆ.

ನಿಲ್ದಾಣದ ಮುಂದೆ ಮತ್ತು ಸಾರಿಗೆ ಬಸ್‌ ಘಟಕದ ಮುಂದಿರುವ ಚರಂಡಿಗಳು ಕಸ ಮತ್ತಿತರೆ ತ್ಯಾಜ್ಯದಿಂದ ಭರ್ತಿಯಾಗಿದ್ದು ಕೊಳಚೆ ನೀರು ಹರಿದುಹೋಗಲು ಸಾಧ್ಯವಾಗದೆ ನಿಂತಲ್ಲಿಯೇ ನಿಲ್ಲುತ್ತಿದೆ. ಬಸ್‌ನಿಲ್ದಾಣಕ್ಕೆ ಸೇರಿದ ಮೂತ್ರಾಲಯವೂ ಅಲ್ಲಿಯೇ ಇದ್ದು ಚರಂಡಿ ಕಟ್ಟಿಕೊಂಡಿರುವುದರಿಂದ  ಅದರಲ್ಲಿನ ತ್ಯಾಜ್ಯ ಮಡುಗಟ್ಟಿ ದುರ್ನಾತ ಬೀರುತ್ತಿರುವುದರಿಂದ ಜನರು ಮೂಗುಮುಚ್ಚಿಕೊಂಡೆ ಓಡಾಡುವಂತಾಗಿದೆ.

ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಪುರಸಭೆಗೆ ಪತ್ರ ಬರೆಯಲಾಗಿದೆ, ಅನೇಕ ಬಾರಿ ಮೌಖಿಕವಾಗಿಯೂ ಸಮಸ್ಯೆ ವಿವರಿಸಲಾಗಿದೆ. ಆದರೆ ಆರೇಳು ತಿಂಗಳು ಕಳೆದರೂ ಚರಂಡಿಯನ್ನು ಸ್ವಚ್ಛಗೊಳಿಸಿ ಪರಿಸರ ನೈರ್ಮಲ್ಯ ಕಾಪಾಡಲು ಮುಂದಾಗಿಲ್ಲ ಎಂದು ಸಾರಿಗೆ ಸಂಸ್ಥೆ ಸಿಬ್ಬಂದಿ ಹೇಳಿದರು.

ತ್ಯಾಜ್ಯ ಎಲ್ಲಿಯದು: ಕೊಳಚೆ ನೀರು ಹರಿದುಹೋಗುವುದಕ್ಕೆ ಚರಂಡಿ ನಿರ್ಮಿಸಲಾಗಿದೆ ಆದರೆ ಸುತ್ತಲಿನ ಅಂಗಡಿಗಳು, ಹೋಟೆಲ್‌, ತಳ್ಳುಗಾಡಿ ತಿನಿಸು ವ್ಯಾಪಾರಿಗಳು ತ್ಯಾಜ್ಯವನ್ನು ತಂದು ಚರಂಡಿಗೆ ಬಿಸಾಕಿ ಹೋಗುತ್ತಾರೆ. ಹಾಗಾಗಿ ಚರಂಡಿ ಕೆಲದಿನಗಳಲ್ಲಿಯೇ ಭರ್ತಿಯಾಗುತ್ತದೆ. ಹಾಗಾಗಿ ಕೊಳಚೆ ನೀರು ಹರಿದುಹೋಗುವುದಿಲ್ಲ. ಸೊಳ್ಳೆ, ನೊಣಗಳ ಸಂತತಿ ಹೆಚ್ಚಿದೆ. ಹಂದಿ ನಾಯಿಗಳು ನಿಲ್ದಾಣ, ಸಾರಿಗೆ ಘಟಕದ ಬಳಿಯಲ್ಲಿಯೇ ಠಿಕಾಣಿ ಹೂಡಿ ತೊಂದರೆ ನೀಡುತ್ತಿವೆ ಎಂದು ಸಾರ್ವಜನಿಕರು ಸಮಸ್ಯೆ ವಿವರಿಸಿದರು.

ಪಟ್ಟಣದಲ್ಲಿ ನಿತ್ಯ ಸಾಕಷ್ಟ ಪ್ರಮಾಣದಲ್ಲಿ ತ್ಯಾಜ್ಯ ಹೊರಬರುತ್ತದೆ, ಆದರೆ ವೈಜ್ಞಾನಿಕ ವಿಲೇವಾರಿಯಾಗುತ್ತಿಲ್ಲ, ಅಂಗಡಿ, ಹೋಟೆಲ್‌, ಡಾಬಾಗಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲ. ಹಾಗಾಗಿ ಚರಂಡಿ ತ್ಯಾಜ್ಯ ಎಸೆಯುವುದಕ್ಕೆ ಪ್ರಶಸ್ತ ಸ್ಥಳವಾಗಿದೆ. ಕಠಿಣ ಕ್ರಮ ಜರುಗಿಸುವಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವೀರೇಶಗೌಡ, ಶರಣಪ್ಪ ಹಿರೇಗೌಡ್ರ ಮತ್ತಿತರರು ಆರೋಪಿಸಿದರು.

ಅನಧಿಕೃತ: ಈ ಮಧ್ಯೆ ಕೊಪ್ಪಳ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆ ಘಟಕದ ಗೋಡೆಗೆ ಹೊಂದಿಕೊಂಡಂತೆ ಈಗಾಗಲೇ ಸಾಕಷ್ಟು ಡಬ್ಬಾ ಅಂಗಡಿಗಳು ಹುಟ್ಟಿಕೊಂಡಿದ್ದು ಅವುಗಳಿಂದಲೂ ಪರಿಸರ ಮಾಲಿನ್ಯಗೊಳ್ಳುತ್ತಿದೆ.

ಅನಧಿಕೃತ ಅಂಗಡಿಗಳನ್ನು ಇಟ್ಟುಕೊಳ್ಳುವುದಕ್ಕೆ ಪುರಸಭೆಯ ಕೆಲ ಸದಸ್ಯರು ಮತ್ತು ಸಿಬ್ಬಂದಿ ಕಾರಣರಾಗಿದ್ದು ಹಣ ಕೊಟ್ಟವರಿಗೆ ಅಂಗಡಿಗಳನ್ನು ಇಟ್ಟುಕೊಳ್ಳಲು ಇವರೆಲ್ಲ ಸಹಕರಿಸುತ್ತಿದ್ದಾರೆ. ಆದರೆ ಪುರಸಭೆ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಜನರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.