ADVERTISEMENT

ಕುಷ್ಟಗಿ: ಯಲಬುಣಚಿ ಗ್ರಾಮಸ್ಥರ ಧರಣಿ

​ಪ್ರಜಾವಾಣಿ ವಾರ್ತೆ
Published 4 ಮೇ 2016, 11:32 IST
Last Updated 4 ಮೇ 2016, 11:32 IST

ಕುಷ್ಟಗಿ: ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ತಾಲ್ಲೂಕಿನ ಯಲಬುಣಚಿ ಗ್ರಾಮಸ್ಥರು ಮಂಗಳವಾರ ಇಲ್ಲಿಯ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಧರಣಿ ನಡೆಸಿದರು.

ಈ ಬಗ್ಗೆ  ಮನವಿ ಮಾಡುತ್ತ ಬಂದರೂ ಮೇಲಧಿಕಾರಿಗಳು ಕ್ರಮ ಜರುಗಿಸದ ಕಾರಣ ಬೇಸತ್ತು ಪ್ರತಿಭಟನೆಸುವುದಾಗಿ ಗ್ರಾಮಸ್ಥರು ತಿಳಿಸಿದರು.
ನರೇಗಾ ಯೋಜನೆಯ ಕೆಲಸಕಾರ್ಯಗಳನ್ನು ಪಂಚಾಯಿತಿ ಸದಸ್ಯರೇ ನಿರ್ವಹಿಸುತ್ತಿದ್ದಾರೆ.

ಅಮಾಯಕ ಕೂಲಿಕಾರರಿಂದ ಪಡೆದ ಜಾಬ್‌ಕಾರ್ಡ್‌ಗಳನ್ನು ಪಂಚಾಯಿತಿ ಸದಸ್ಯರೇ ತಮ್ಮ ಬಳಿ ಇಟ್ಟುಕೊಂಡಿದ್ದು ಅವುಗಳನ್ನು ಮರಳಿಸುತ್ತಿಲ್ಲ. ಜಾಬ್‌ಕಾರ್ಡ್‌ ಹೊಂದಿರುವ ಕೂಲಿಕಾರರಿಗೆ ಕೆಲಸವೇ ಇಲ್ಲ. ಅಭಿವೃದ್ಧಿ ಅಧಿಕಾರಿಯನ್ನು ಕೇಳಿದರೆ  ಮಾಹಿತಿ ನೀಡುತ್ತಿಲ್ಲ ಎನ್ನುತ್ತಾರೆ ಎಂದು ದೂರಿದರು.

ನಕಲಿಜಾಬ್‌ಕಾರ್ಡ್‌ಗಳು:   ಬೆನಕನಾಳ ಗ್ರಾಮ ಪಂಚಾಯಿತಿಯಲ್ಲಿ ಬೇನಾಮಿ ಹೆಸರಿನಲ್ಲಿ  ನಕಲಿ ಜಾಬ್‌ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು ಒಂದೇ ಕೆಲಸಕ್ಕೆ ₹ 7 ಲಕ್ಷ ಖರ್ಚು ಮಾಡುವ ಮೂಲಕ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದ್ದು ಈ ಬಗ್ಗೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. 

ಧರಣಿ ನಿರತರೊಂದಿಗೆ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಭು ಮಾನೆ, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ತಪ್ಪಾಗಿರುವುದು ಕಂಡುಬಂದರೆ  ಕ್ರಮದ ಭರವಸೆ ನೀಡಿದರು. ಜಾಬ್‌ಕಾರ್ಡ್‌ಗಳ ಕುರಿತು ವಿವರಿಸಿದ ನರೇಗಾ ಸಹಾಯಕ ನಿರ್ದೇಶಕ ಪವನಕುಮಾರ , ಹಳೆ ಜಾಬ್‌ಕಾರ್ಡ್‌ಗಳ ಸಂಖ್ಯೆ ತಿಳಿಸಿದರೆ ಹೊಸ ಕಾರ್ಡ್‌ಗಳನ್ನು ವಿತರಿಸುವುದಾಗಿ ತಿಳಿಸಿದರು.  ಹಣ ಪಾವತಿಸದಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪಂಚಾಯಿತಿಗೆ ಮಂಜೂರಾದ ವಿವಿಧ ವಸತಿ ಯೋಜನೆಗಳ ಮಂಜೂರಾತಿ ಪಟ್ಟಿ ನೀಡುವುದಾಗಿ ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟಪಡಿಸಿದರು.

ಮೌನೇಶ ಬನ್ನಿಗೋಳ, ಪ್ರಮುಖರಾದ ಸಂಗಪ್ಪ ಗುಡಿ, ಸೇದೂಸಾಬ್‌ ಸೂಡಿ, ದ್ಯಾಮಪ್ಪ ಕಂಬದ, ಶಿವಕುಮಾರ ಕುಂಟೋಜಿ, ಶರಣಪ್ಪ ಕುಂಟೋಜಿ, ರಂಜಾನಸಾಬ್‌, ಪರಸಪ್ಪ ಭಜಂತ್ರಿ, ಯಮನೂರಪ್ಪ ಗುರಿಕಾರ ಮತ್ತು ಗ್ರಾಮದ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.