ADVERTISEMENT

ಕೋಟೆ ಕಾಯಕಲ್ಪ: ಆರಂಭ ಶೂರತ್ವಕ್ಕೇ ಸೀಮಿತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 10:15 IST
Last Updated 22 ಆಗಸ್ಟ್ 2014, 10:15 IST
ಕೊಪ್ಪಳ ಹೊರವಲಯದ ಕೋಟೆ ಶಿಥಿಲಾವಸ್ಥೆಯಲ್ಲಿದೆ.
ಕೊಪ್ಪಳ ಹೊರವಲಯದ ಕೋಟೆ ಶಿಥಿಲಾವಸ್ಥೆಯಲ್ಲಿದೆ.   

ಕೊಪ್ಪಳ: ನಗರದ ಐತಿಹಾಸಿಕ ಕೋಟೆಗೆ ಕಾಯಕಲ್ಪ ನೀಡುವ ಪ್ರಯತ್ನ ಕೇವಲ ತೋರಿಕೆಗಷ್ಟೇ ಆಗಿದೆ. ಕೋಟೆಯ ಕಂದಕ ಸ್ವಚ್ಛಗೊಳಿಸಿ ಕೋಟೆಯ ನವೀಕರಣಕ್ಕೆ  ₨ 3 ಕೋಟಿ ಅನುದಾನ ಪಡೆದಿದ್ದ ನಿರ್ಮಿತಿ ಕೇಂದ್ರ ಕೇವಲ ಆರಂಭಶೂರತ್ವ ಮೆರೆದು ಅರ್ಧಂಬರ್ಧ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. 6 ತಿಂಗಳ ಹಿಂದೆ ಕೆಲಸ ಆರಂಭವಾಗಿತ್ತು. ಆದರೆ, ಬಳಿಕ ಕಾಮಗಾರಿ ಮುಂದುವರಿಯಲೇ ಇಲ್ಲ.

ಕಂದಕದ ಹೂಳು, ಕುರುಚಲು ಗಿಡಗಳ ತೆರವು, ಪ್ರವೇಶದ್ವಾರದ ಆಸುಪಾಸಿನಲ್ಲಿ ಒಂದಿಷ್ಟು ಕಲ್ಲುಗಳನ್ನು ಜೋಡಿಸಿ ಸಿಮೆಂಟ್‌ ತೇಪೆ ಹಾಕಿರುವುದನ್ನು ಬಿಟ್ಟರೆ ಏನೂ ಆಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕೋಟೆಯ ಎರಡನೇ ಸುತ್ತು ಪ್ರವೇಶಿಸುವಾಗಲೇ ಕಾಮಗಾರಿಯ ಗುಣಮಟ್ಟ ಗೊತ್ತಾಗಿಬಿಡುತ್ತದೆ. ಮೆಟ್ಟಿಲಿನ ಕಲ್ಲುಗಳು ಮತ್ತಷ್ಟು ಜರಿದಿವೆ. ಕುರುಚಲು, ಗಿಡ, ಹಾವಸೆ ದಟ್ಟವಾಗಿವೆ. ಅಲ್ಲಲ್ಲಿ ಕಾಣುವ ಬಾವಿಗಳೊಳಗೆ ದಟ್ಟವಾದ ಪೊದೆ ಬೆಳೆದಿದೆ. ದಪ್ಪ ಗೋಡೆಯ ಕಲ್ಲುಗಳು ಒಂದೊಂದಾಗಿ ಉದುರುತ್ತಿವೆ.

ನಿಖರ ಇತಿಹಾಸ ಲಭ್ಯವಿಲ್ಲದಿದ್ದರೂ ಕೋಟೆ ತನ್ನೊಳಗೆ ಇತಿಹಾಸ, ಹೋರಾಟ, ಧಾರ್ಮಿಕ ವಿಷಯಗಳ ಸಾವಿರಾರು ಕಥೆಗಳನ್ನು ಹುದುಗಿಸಿಕೊಂಡಿದೆ. ಆದರೆ, ಎಲ್ಲ ವಿಷಯಗಳ ಮರು ಅಧ್ಯಯನಕ್ಕೆ ಅವಕಾಶವಿದ್ದರೂ ಕೋಟೆಗೆ ಕಾಯಕಲ್ಪ ದೊರೆತಿಲ್ಲ.

ಮೇಲ್ಭಾಗದ ಗೋಡೆಗಳು ಮತ್ತಷ್ಟು ಕುಸಿದಿದ್ದರೂ ಸಂರಕ್ಷಣೆಯ ಜವಾಬ್ದಾರಿ ಹೊತ್ತ ಪುರಾತತ್ವ ಸಂರಕ್ಷಣಾ ಇಲಾಖೆ ಅಧಿಕಾರಿಗಳು ಇತ್ತ ತಲೆಹಾಕಿಲ್ಲ ಎಂದು ಕೋಟೆ ಪ್ರದೇಶದ ನಿವಾಸಿಗಳು ದೂರಿದರು. ಇದೇ ಕೋಟೆಯ ತಪ್ಪಲು ಪ್ರದೇಶ ಬಯಲು ಶೌಚವಾಗಿಬಿಟ್ಟಿದೆ.
ಸೂಕ್ತ ನಿರ್ವಹಣೆ, ಕಾವಲುಗಾರರು ಇಲ್ಲದೇ ಈ ಪ್ರದೇಶ ಹಾಳು ಬಿದ್ದಿದ್ದು, ದನಗಾಹಿಗಳು, ಜೂಜುಕೋರರ ತಾಣವಾಗಿಬಿಟ್ಟಿದೆ. ಕೋಟೆಯ ಮೇಲ್ಭಾಗದಲ್ಲಿರುವ ವಿದ್ಯುತ್ ಕಂಬ ಸಂಪೂರ್ಣ ಬಾಗಿ ಅಪಾಯ ಆಹ್ವಾನಿಸುತ್ತಿದೆ.

‘ಪ್ರವಾಸಿ ತಾಣ’
ಸುಮಾರು 400 ಮೀಟರ್‍ ಎತ್ತರದ ಕೊಪ್ಪಳ ಕೋಟೆಯು ಇಡೀ ಜಿಲ್ಲೆಯಲ್ಲೇ ಪ್ರಮುಖ ಪ್ರವಾಸಿ ತಾಣ. ಟಿಪ್ಪು ಸುಲ್ತಾನನು 1789ರಲ್ಲಿ ಈ ಕೋಟೆಯನ್ನು ಮರಾಠರಿಂದ ವಶಪಡಿಸಿ­ಕೊಂಡು, ಫ್ರಾನ್ಸ್‌ನ ಎಂಜಿನಿಯರ್‌ಗಳ ಸಹಾಯದಿಂದ ಮರುನಿರ್ಮಾಣ ಮಾಡಿದ ಎಂದು ಹೇಳಲಾಗುತ್ತದೆ. 1790ರಲ್ಲಿ ನಿಜಾಮರ ಜತೆಗೂಡಿ ಬ್ರಿಟಿಷರು ಈ ಕೋಟೆಯನ್ನು ವಶಪಡಿಸಿಕೊಂಡಾಗ ಕೋಟೆ ಗಟ್ಟಿಯಾಗಿರುವ ಬಗ್ಗೆ ಬ್ರಿಟಿಷರೂ ಕೂಡ ಹೊಗಳಿದ್ದರು.

‘ಹಂತ ಹಂತವಾಗಿ ಕಾಮಗಾರಿ’
‘ಕೋಟೆಯ ನವೀಕರಣ ಕಾಮಗಾರಿ ನಡೆಸುತ್ತೇವೆ. ಗೋಡೆ, ಕಲ್ಲುಗಳ ಮರು ಜೋಡಣೆಗೆ ಹಂಪಿಯ ವಾಸ್ತುಶಿಲ್ಪಿಗಳನ್ನು ಸಂಪರ್ಕಿಸಿದ್ದೇವೆ. ಅವರು ಸಮಯಕ್ಕೆ ಸರಿಯಾಗಿ ಲಭ್ಯವಾಗಿಲ್ಲ. ಮಳೆಗಾಲ ಕಾಮಗಾರಿಗೆ ಅಡ್ಡಿಯಾಗಿದೆ. ಒಂದೊಂದೇ ಕಾಮಗಾರಿಗಳನ್ನು ಹಂತಹಂತವಾಗಿ ನಡೆಸುತ್ತೇವೆ’.

–ಶಶಿಧರ,
ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT