ADVERTISEMENT

ಗವಿಮಠದ ‘ಜಲದೀಕ್ಷೆ’ಯ ಪ್ರಾಯೋಗಿಕ ಅನುಷ್ಠಾನ

ಶರತ್‌ ಹೆಗ್ಡೆ
Published 22 ಮಾರ್ಚ್ 2017, 9:31 IST
Last Updated 22 ಮಾರ್ಚ್ 2017, 9:31 IST

ಕೊಪ್ಪಳ:  ಒಂದು ವರ್ಷದ ಹಿಂದೆ ಈ ಕೆರೆಗೆ ಕಾಯಕಲ್ಪ ನೀಡಲಾಗಿತ್ತು. ತಳಭಾಗದಲ್ಲಿ ಅಲ್ಪ ಪ್ರಮಾಣದ ಒಸರು ಇತ್ತು. ಅಷ್ಟೆ. ಉಳಿದಂತೆ ಸುತ್ತ ಬಂಡೆ. ಈ ಕೆರೆಯಲ್ಲಿ ಮಳೆಗಾಲ ಹೊರತುಪಡಿಸಿದರೆ ಶುದ್ಧ ನೀರು ತುಂಬುವುದು ಕಲ್ಪನಾತೀತ. ಅದಕ್ಕೆ ಬರಗಾಲ ಬೇರೆ ಬರೆ ಎಳೆದಿದೆ. ಆದರೆ. ಮಾರ್ಚ್‌ 15ರಂದು ಒಂದೇ ರಾತ್ರಿ ಸುರಿದ ಮಳೆ ಈ ಕೆರೆಯ ಕಾಲು ಭಾಗದಷ್ಟು ನೀರು ತುಂಬಿಸಿದೆ. ಕೆರೆಯಲ್ಲೀಗ ಸುಮಾರು 4ರಿಂದ 5 ಅಡಿಗಳಷ್ಟು ನೀರು ತುಂಬಿದೆ.

– ಇದು ನಗರದ ಗವಿಮಠದ ಕೆರೆಯ ಕಥೆ. ಗವಿಮಠದ ಬಂಡೆಯ ಕೆಳಗೆ ಈ ಕೆರೆ ಇದೆ. ಸರಿಯಾಗಿ ಕಾಯಕಲ್ಪ ಸಿಗದೆ ನೀರು ಪಾಚಿಗಟ್ಟಿತ್ತು. ಮಾತ್ರವಲ್ಲ ಬೀದಿ ವ್ಯಾಪಾರಿಗಳು, ಸ್ಥಳೀಯರು ಪಾತ್ರೆ ತೊಳೆಯಲು, ಬಟ್ಟೆ ಒಗೆಯಲೂ ಇದೇ ನೀರನ್ನು ಬಳಸಿ ಅದು ಮತ್ತಷ್ಟು ಕೆಟ್ಟು ಹೋಗಿತ್ತು. ಆದರೆ, ಈಗ ಅದೆಲ್ಲ ಹಳೆಯ ಕಥೆ.

2016ರ ಜ. 8ರಂದು ಈ ಕೆರೆಯ ಹೂಳು ತೆಗೆಯಲು ಆರಂಭಿಸಲಾಯಿತು. ರಾಜ್ಯ ಸರ್ಕಾರ ₹ 1 ಕೋಟಿ ಅನುದಾನ ನೀಡಿತು. ಅಂದು ಆರಂಭವಾದ ಕೆಲಸ ಡಿಸೆಂಬರ್‌ ವೇಳೆಗೆ ಬಹುತೇಕ ಪೂರ್ಣಗೊಂಡಿತು. ಜಾತ್ರೆಯ ಹೆಸರಿನಲ್ಲಿ ಮಠ ಬೃಹತ್‌ ಜಲದೀಕ್ಷೆ ಆಂದೋಲನ ಕೈಗೊಂಡಿತು. ಅದಕ್ಕೆ ಜೀವಂತ ಉದಾಹರಣೆ ಕೊಡುವ ದೃಷ್ಟಿಯಿಂದ ಕೆರೆಗೆ ಕಾಯಕಲ್ಪ ನೀಡಿ ತೋರಿಸಿದೆ.

ಪರಿಸರ ಪುನರುತ್ಥಾನ: ಕೆರೆಯ ಸುತ್ತ ತಡೆಗೋಡೆ ನಿರ್ಮಿಸಲಾಗಿದೆ. ವಿಹಾರಪಥ, ಹುಲ್ಲುಹಾಸು ನಿರ್ಮಾಣ ಕಾಮಗಾರಿ ಸಾಗಿದೆ. ಇದೇ ಕೆರೆಯ ದಂಡೆಯಲ್ಲಿ ಪ್ರತಿ ಅಮಾವಾಸ್ಯೆಯಂದು ‘ಬೆಳಕಿನೆಡೆಗೆ’ ಹೆಸರಿನ ಅಧ್ಯಾತ್ಮ ಗೋಷ್ಠಿ ನಡೆಯುತ್ತದೆ. ಒಟ್ಟಿನಲ್ಲಿ ಒಂದು ಕೆರೆಗೆ ನೀಡಿದ ಪುನಶ್ಚೇತನ ಹಲವು ಸುಂದರ, ಸಕಾರಾತ್ಮಕ ಪರಿಣಾಮಗಳನ್ನು ಸೃಷ್ಟಿಸಿದೆ.

ನೀರು ಎಲ್ಲಿಂದ?
ಹಾಗೆ ನೋಡಿದರೆ ಈ ಕೆರೆಗೆ ಒರತೆಯ ಪ್ರಮಾಣ ಅತ್ಯಲ್ಪ. ಮಠದ ಸುತ್ತಮುತ್ತ ವ್ಯಾಪಕವಾಗಿ ಕೊಳವೆಬಾವಿ ತೋಡಿದ್ದರಿಂದ ಆ ಒರತೆಯೂ ಕ್ಷೀಣಿಸಿದೆ. ಅದಕ್ಕಾಗಿ ಮಠದ ಜಾತ್ರಾ ಮೈದಾನ, ಮಠದ ಕಾಲೇಜು ಮುಂದಿನ ರಸ್ತೆಯ ನೀರು, ಬಂಡೆಯ ಮೇಲಿನ ನೀರು ನೇರವಾಗಿ ಕೆರೆಯ ತೂಬಿಗೆ ಹರಿಯುವಂತೆ ಮಾಡಲಾಗಿದೆ.

ಸುಮಾರು 15 ಎಕರೆ ಪ್ರದೇಶದ ಜಾತ್ರಾ ಮೈದಾನದ ನೀರು ಒಳಚರಂಡಿ ಮೂಲಕ ಹರಿದು ತೂಬಿನ ಮುಂಭಾಗದ ಹೊಂಡದಲ್ಲಿ ಸಂಗ್ರಹವಾಗುತ್ತದೆ. ಈ ಹೊಂಡದಲ್ಲಿ ಕಲ್ಲು ಹಾಸು ಇದೆ. ಕಸಕಡ್ಡಿಗಳೆಲ್ಲಾ ಇಲ್ಲಿಯೇ ಸಂಗ್ರಹವಾಗಿ ತೂಬಿನ ಜಾಲರಿಯ ಮೂಲಕ ಶುದ್ಧ ಮಳೆ ನೀರು ಕೆರೆ ಸೇರುತ್ತದೆ. ಈ ವರ್ಷ ಉತ್ತಮ ಮಳೆಯಾದರೆ ಆ ನೀರಿನಿಂದಲೇ ಕೆರೆ ತುಂಬಿ ತುಳುಕುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಮಠದ ವಕ್ತಾರರು.

ಮಠದ ನಿತ್ಯ ಬಳಕೆಗೆ ಬೇಕಾಗುವಷ್ಟು ನೀರು ಈಗಾಗಲೇ ಲಭ್ಯವಿದೆ. ನೀರಿನಲ್ಲಿ ಬಾತುಕೋಳಿಗಳು ಆಟವಾಡುತ್ತಿವೆ. ಮಳೆ ನೀರಿನ ಕೆಸರು ಇನ್ನಷ್ಟು ಬಸಿಯಬೇಕು. ಮೇಲ್ಪದರದ ಶುದ್ಧ ನೀರು ವರ್ಷವಿಡೀ ಸಿಗುವ ವಿಶ್ವಾಸ ಮಠದ ಆಡಳಿತದ್ದು. ಮಾತ್ರವಲ್ಲ ಇದೇ ಕೆರೆಗೆ ತುಂಗಭದ್ರಾ ನದಿ ನೀರನ್ನು ಹರಿಸುವ ಸಿದ್ಧತೆಯೂ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.