ADVERTISEMENT

ಜಯಘೋಷದ ಮಧ್ಯೆ ಹುಲಿಗೆಮ್ಮನ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:30 IST
Last Updated 21 ಮೇ 2017, 6:30 IST

ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿಯ ಮಹಾರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ವಾರದ ಹಿಂದೆಯೇ ವಿದ್ಯುಕ್ತ ಚಾಲನೆಗೊಂಡ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ ಇಡೀ ಜಾತ್ರೆಯ ಹೃದಯ ಭಾಗ. ಜಾತ್ರೆಯ ಅಂಗವಾಗಿ ದೇವಸ್ಥಾನದಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸಂಜೆ ವೇಳೆ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು ರಥದಲ್ಲಿರಿಸಿದರು. ಭಕ್ತರ ಜಯಘೋಷ ಮೊಳಗುತ್ತಿದ್ದಂತೆಯೇರಥವು ಮುಂದಕ್ಕೆ ಚಲಿಸಿತು. ‘ಉಧೋ ಉಧೋ ಹುಲಿಗೆಮ್ಮ’ ಎಂದು ಉದ್ಗರಿಸಿದ ಭಕ್ತರು ದೇವಿಯ ಮಹಿಮೆ ಕೊಂಡಾಡಿದರು. ಜನಪದ ಕಲಾ ಮೇಳ, ಡೊಳ್ಳು, ವಾದ್ಯ ವಾದನ ಇತ್ಯಾದಿ ಉತ್ಸವದ ವೈಭವ ಹೆಚ್ಚಿಸಿತು. ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು, ಹೂವು ಎಸೆದ ಜನರು ಭಕ್ತಿ ಸಮರ್ಪಿಸಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಹಿಟ್ನಾಳ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್‌. ಚಂದ್ರಮೌಳಿ ಭಾಗವಹಿಸಿದ್ದರು. ದೇವಸ್ಥಾನದ ಆವರಣದಲ್ಲಿ ಪ್ರಾಣಿಬಲಿ ನಡೆಯದಂತೆ ಭದ್ರತೆ ಏರ್ಪಡಿಸಲಾಗಿತ್ತು.

ADVERTISEMENT

ಬಲಿ ನಡೆಸಬಾರದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ದಯಾನಂದ ಸ್ವಾಮೀಜಿ ಅವರು ಅಹಿಂಸಾ ಜಾಗೃತಿ ಸಂದೇಶ ಯಾತ್ರೆ ನಡೆಸಿದ್ದರು. ಆದರೂ ನದಿ ದಡದಲ್ಲಿ, ದೇಗುಲದ ಹೊರವಲಯದಲ್ಲಿ ಪ್ರಾಣಿಬಲಿ ನಡೆದಿದೆ ಎಂದು ಹುಲಿಗಿ ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.