ADVERTISEMENT

ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 7:33 IST
Last Updated 14 ನವೆಂಬರ್ 2017, 7:33 IST

ಕೊಪ್ಪಳ: ಕರ್ನಾಟಕ ಖಾಸಗಿ ವೈದ್ಯಕೀಯ ನಿಯಂತ್ರಣ ಮಸೂದೆ ವಿರೋಧಿಸಿ ವೈದ್ಯರು ಬೆಳಗಾವಿಗೆ ಪ್ರತಿಭಟನೆಗೆ ತೆರಳಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಮುಚ್ಚಿವೆ. ನಗರದ 10 ಪ್ರಮುಖ ಖಾಸಗಿ ಆಸ್ಪತ್ರೆಗಳು, ಗಂಗಾವತಿಯ ಖಾಸಗಿ ನರ್ಸಿಂಗ್‌ ಹೋಂಗಳು ಸೋಮವಾರ ಸೇವೆ ಸ್ಥಗಿತಗೊಳಿಸಿವೆ.

ಈಗಾಗಲೇ ದಾಖಲಾಗಿರುವ ಗಂಭೀರ ಸ್ವರೂಪದ ಒಳರೋಗಿಗಳನ್ನು ಹೊರತುಪಡಿಸಿ ಉಳಿದ ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಮುಷ್ಕರ ಮುಕ್ತಾಯಗೊಳ್ಳುವ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ನಾವು ಯಾವುದೇ ರೋಗಿಗಳನ್ನು ಇರಿಸಿಕೊಳ್ಳುತ್ತಿಲ್ಲ ಎಂದು ನಗರದ ಆಸ್ಪತ್ರೆಯೊಂದರ ಸಿಬ್ಬಂದಿ ತಿಳಿಸಿದರು.

ಆಸ್ಪತ್ರೆಯ ಸ್ವಚ್ಛತೆ, ತುರ್ತು ನಿರ್ವಹಣಾ ಸಿಬ್ಬಂದಿ ಹೊರತುಪಡಿಸಿ ಉಳಿದವರೆಲ್ಲರಿಗೂ ರಜೆ ನೀಡಲಾಗಿದೆ. ಆಸ್ಪತ್ರೆಗೆ ಹೊಂದಿಕೊಂಡಿರುವ ಔಷಧ ಅಂಗಡಿಗಳೂ, ಪ್ರಯೋಗಾಲಯಗಳು ಕೂಡಾ ಬಂದ್‌ ಆಗಿವೆ. ಸಹಜವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಹೆಚ್ಚಿದೆ. ಗ್ರಾಮೀಣ ಹಾಗೂ ಹೋಬಳಿ ಪ್ರದೇಶಗಳ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ದಾದಿಯರ ತಂಡವನ್ನು ಸಜ್ಜಾಗಿ ಇರಿಸಲಾಗಿದೆ. ಯಾವುದೇ ತುರ್ತುಪರಿಸ್ಥಿತಿ ನಿಭಾಯಿಸಲು ನಾವು ಸಿದ್ಧರಾಗಿದ್ದೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮುಷ್ಕರದ ಅರಿವಿಲ್ಲದ ಗ್ರಾಮೀಣ ಪ್ರದೇಶದ ಜನ ಆಸ್ಪತ್ರೆಗಳ ಮುಂದೆ ಸಾಲುಗಟ್ಟಿರುವುದು ಕಂಡುಬಂದಿತು. ಸಣ್ಣಪುಟ್ಟ ಕ್ಲಿನಿಕ್‌ಗಳಲ್ಲಿ ವೈದ್ಯರು ತುರ್ತು ಸೇವೆ ನೀಡುತ್ತಿದ್ದರು.
ಗಂಗಾವತಿಯಲ್ಲಿರುವ ಸುಮಾರು 23 ಆಸ್ಪತ್ರೆಗಳ ಪೈಕಿ 15ಕ್ಕೂ ಹೆಚ್ಚು ಆಸ್ಪತ್ರೆಗಳು ಮುಚ್ಚಿದ್ದವು. ಇಲ್ಲಿಯೂ ವೈದ್ಯಕೀಯ ಸೇವೆ ವ್ಯತ್ಯಯವಾಗಿದೆ.

ಮುಷ್ಕರದ ಬಗ್ಗೆ ಮೊದಲೇ ಮಾಹಿತಿ ಇದ್ದ ಕಾರಣ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು, ಜಿಲ್ಲಾ ಆಸ್ಪತ್ರೆಯ ವೈದ್ಯರು ಸೇರಿ ಪರಿಸ್ಥಿತಿ ನಿಭಾಯಿಸಿದ್ದೇವೆ. ಕೆಲವು ಅಪಘಾತ ಪ್ರಕರಣಗಳು ಬಂದಿವೆ. ಎಲ್ಲರಿಗೂ ಚಿಕಿತ್ಸೆ ನೀಡಲು ಸಕಲ ಪ್ರಯತ್ನ ಮಾಡಿದ್ದೇವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.