ADVERTISEMENT

ದಕ್ಷತೆ, ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ: ಡಿಸಿ

ಗ್ರಾಮ ಪಂಚಾಯಿತಿ ಚುನಾವಣೆ: ಅಧಿಕಾರಿಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 7 ಮೇ 2015, 7:30 IST
Last Updated 7 ಮೇ 2015, 7:30 IST

ಕೊಪ್ಪಳ: ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಹೇಳಿದರು. ಜಿಲ್ಲಾಡಳಿತ ಭವನದ ಸಭಾಂಗಣ­ದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ ಕುರಿತು ಬುಧವಾರ ಚುನಾವಣಾ­ಧಿಕಾರಿಗಳು ಹಾಗೂ ಸಹಾಯಕ ಚುನಾ­ವಣಾ­ಧಿಕಾರಿಗಳ  ತರಬೇತಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 158ಗ್ರಾಮ ಪಂಚಾಯಿತಿಗಳಿದ್ದು,  ಮೇ 15ರಂದು ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜೂನ್ 2ರಂದು ಮತದಾನ ನಡೆಯಲಿದೆ. ಚುನಾವಣೆ ಸಂಬಂಧ ಈಗಾಗಲೇ ಪ್ರತಿ ತಾಲ್ಲೂಕಿಗೂ ತಲಾ ಒಬ್ಬರು ಜಿಲ್ಲಾ­ಮಟ್ಟದ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು. 

ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಮಾತನಾಡಿ, ಈ ಚುನಾವಣೆಗಳು ಪಕ್ಷರಹಿತವಾಗಿ ಜರುಗಲಿವೆ. ಅಧಿಕಾರಿಗಳು, ಆಯಾ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ಎಚ್ಚರಿಕೆಯಿಂದ ನಿರ್ವಹಿಸಬೇಕು.

ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳಿಗೆ ಸೂಕ್ತ ತಿಳಿವಳಿಕೆ ನೀಡಬಹುದು. ಚುನಾವಣೆಗೆ ಠೇವಣಿ ಮೊತ್ತ ಸಾಮಾನ್ಯ ಅಭ್ಯರ್ಥಿಗೆ ₹200 ಹಾಗೂ ಪ.ಜಾತಿ/ಪ.ಪಂಗಡ/ಹಿಂದುಳಿದ ವರ್ಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ₹100 ನಿಗದಿಪಡಿಸಲಾಗಿದೆ. ಉಮೇದುವಾರಿಕೆ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 4 ನಾಮಪತ್ರ ಸಲ್ಲಿಸಬಹುದು.

ನಿಗದಿತ ನಮೂನೆಯಲ್ಲಿ ಕುಟುಂಬ ಸದಸ್ಯರ ಚರ ಮತ್ತು ಸ್ಥಿರಾಸ್ತಿ ವಿವರ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಶುಲ್ಕವಿಲ್ಲ. ಎಲ್ಲ ಅಧಿಕಾರಿಗಳಿಗೆ ಈಗಾಗಲೆ ಚುನಾವಣಾ ಕೈಪಿಡಿಯನ್ನು ವಿತರಿಸಲಾಗಿದೆ. ಯಾವುದೇ ಗೊಂದಲ ಅಥವಾ ಸಮಸ್ಯೆ ಕಂಡುಬಂದಲ್ಲಿ ಸಂಬಂಧಪಟ್ಟ ತಹಶೀಲ್ದಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಅಥವಾ ಜಿಲ್ಲಾಧಿಕಾರಿ ಗಮನಕ್ಕೆ ತಂದು ಪರಿಹರಿಸಿಕೊಳ್ಳ­ಬಹುದು ಎಂದರು. ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಈ ಹಿಂದಿನ ಚುನಾವಣೆಯಲ್ಲಿ ಉಂಟಾದ ಲೋಪ-ದೋಷಗಳು ಈ ಬಾರಿ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.