ADVERTISEMENT

ದೇವದಾಸಿ ಪದ್ಧತಿ ನಿರ್ಮೂಲನೆಯಾಗಲಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 9:48 IST
Last Updated 15 ನವೆಂಬರ್ 2017, 9:48 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಪರಿಶೀಲನಾ ಸಭೆ ನಡೆಸಿದರು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಪರಿಶೀಲನಾ ಸಭೆ ನಡೆಸಿದರು   

ಕೊಪ್ಪಳ: ‘ಜಿಲ್ಲೆಯಲ್ಲಿ ಬಾಲ್ಯವಿವಾಹ ಮತ್ತು ದೇವದಾಸಿ ಪದ್ಧತಿ ತಡೆಗಟ್ಟಲು ಸಾಕಷ್ಟು ಪ್ರಯತ್ನ ಮಾಡಬೇಕಿದೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಪೋಕ್ಸೋ ಪ್ರಕರಣಗಳು, ಪ್ರೇಮ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚು ನಡೆಯುತ್ತಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಮತ್ತು ಶಿಕ್ಷಣ ಇಲಾಖೆ ಈ ಬಗ್ಗೆ ಜಾಗೃತಿ ಮೂಡಿ
ಸಬೇಕು’ ಎಂದು ಅವರು ಹೇಳಿದರು.

‘ಮಕ್ಕಳು ಮೊಬೈಲ್‌ನ್ನು ಎಚ್ಚರದಿಂದ ಬಳಸುವಂತೆ ತಿಳಿಹೇಳಬೇಕು. ಇದರಿಂದಲೇ ಮಕ್ಕಳು ಹಾದಿ ತಪ್ಪುತ್ತಿದ್ದಾರೆ’ ಎಂದರು. ಜಿಲ್ಲಾ ಆಸ್ಪತ್ರೆ ಸ್ಥಿತಿಗತಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಆಸ್ಪತ್ರೆ ಮಾರುಕಟ್ಟೆ ಇದ್ದಂತಿದೆ. ಸರಿಯಾದ ಮೂಲಸೌಲಭ್ಯ, ವೈದ್ಯಕೀಯ ಸಿಬ್ಬಂದಿ ಇಲ್ಲ.

ADVERTISEMENT

ಶಿಸ್ತು ಕಾಪಾಡುವವರಿಲ್ಲ. ಕುಡಿಯುವ ನೀರಿನ ಸೌಲಭ್ಯ ಇಲ್ಲ. ಆಸ್ಪತ್ರೆಯಲ್ಲಿರುವ ದಟ್ಟಣೆ ನೋಡಿದರೆ ಇಲ್ಲಿಗೆ ಇನ್ನೊಂದು ಸರ್ಕಾರಿ ಆಸ್ಪತ್ರೆ ಅಥವಾ ಹೆಚ್ಚುವರಿ ಕಟ್ಟಡ ಬೇಕಿದೆ. ಈ ಬಗ್ಗೆ ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಖುದ್ದಾಗಿ ಮನವರಿಕೆ ಮಾಡುತ್ತೇನೆ’ ಎಂದು ಹೇಳಿದರು.

‘ಮಹಿಳೆಯರನ್ನು ಪೊಲೀಸ್‌ ಠಾಣೆಯಲ್ಲಿ ಹೆಚ್ಚುಹೊತ್ತು ಕೂರಿಸುವಂತಾಗಬಾರದು. ಕೂಡಲೇ ಅವರ ಸಮಸ್ಯೆಗೆ ಸ್ಪಂದಿಸಿ ಸಮಸ್ಯೆ ಪರಿಹರಿಸಿ ಅಥವಾ ಪ್ರಕರಣ ದಾಖಲಿಸಿ ಕಳುಹಿಸಬೇಕ’ ಎಂದು ಅವರು ಸೂಚಿಸಿದರು.

ಕಾರ್ಮಿಕ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ನಾಗಲಕ್ಷ್ಮೀ, ‘ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಜಿಲ್ಲೆಯಲ್ಲಿ ಎಷ್ಟು ಕಾರ್ಮಿಕರು ಇದ್ದಾರೆ ಎಂಬ ಮಾಹಿತಿಯೂ ಇಲ್ಲ. ಕಾರ್ಖಾನೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದ್ದೀರಾ? ಮಹಿಳಾ ಕಾರ್ಮಿಕರ ಸ್ಥಿತಿಗತಿ ನೋಡಿದ್ದೀರಾ’ ಎಂದು ಕಾರ್ಮಿಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಆಯೋಗದ ಸದಸ್ಯೆ ಮಾಲತಿ ರಾಮ ಚಂದ್ರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್‌ ಘಾಳಿ ಇದ್ದರು.

ಮಹಿಳೆಗೆ ಹಿಂಸೆ: ಸ್ವಯಂ ದೂರು
ಭಾಗ್ಯನಗರದಲ್ಲಿ ಮಹಿಳೆ ಮತ್ತು ಅವರ ಮಗಳಿಗೆ ಚಿತ್ರಹಿಂಸೆ ನೀಡುತ್ತಿರುವ ಬಗ್ಗೆ ಸ್ವಯಂ ಸೇವಾ ಸಂಘಟನೆಯ ಮುಖಂಡ ಗಿರೀಶಾನಂದ ಇತರ ಕಾರ್ಯಕರ್ತರು ನಾಗಲಕ್ಷ್ಮೀ ಗಮನಕ್ಕೆ ತಂದರು. ಮಹಿಳೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ.

ಸ್ವಯಂ ಸೇವಾ ಸಂಘಟನೆಯವರು ಸಾಕಷ್ಟು ಬಾರಿ ಆಪ್ತ ಸಮಾಲೋಚನೆಗೆ ಯತ್ನಿಸಿದರೂ ಬಗೆಹರಿದಿಲ್ಲ ಎಂದು ಹೇಳಿದರು. ಪ್ರತಿಕ್ರಿಯಿಸಿದ ನಾಗಲಕ್ಷ್ಮೀ, ಈ ಬಗ್ಗೆ ಪೊಲೀಸರು ಹೋಗಿ ತಿಳಿಹೇಳಬೇಕು. ಈ ಬಗ್ಗೆ ಸ್ವಯಂ ದೂರು ದಾಖಲಿಸಿ ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.

* * 

ಮೊಬೈಲ್‌ ಬಳಸಿ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಸೈಬರ್‌ ಅಪರಾಧಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು.
ನಾಗಲಕ್ಷ್ಮೀಬಾಯಿ,
ಅಧ್ಯಕ್ಷೆ ರಾಜ್ಯ ಮಹಿಳಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.