ADVERTISEMENT

ನಕಲಿ ಬೀಜ ಪೂರೈಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 7:37 IST
Last Updated 18 ಜೂನ್ 2018, 7:37 IST

ಕೊಪ್ಪಳ: ತಾಲ್ಲೂಕಿನ ಗುಳದಳ್ಳಿ ಗ್ರಾಮದ ರೈತ ಕೊಳ್ಳಪ್ಪ ಬೆಣ್ಣಿ ಅವರು ಜಮೀನಿನಲ್ಲಿ ನಾಟಿ ಮಾಡಿದ ಬೆಂಡೆ ಬೀಜ ಕಳಪೆಯಾಗಿದ್ದು, ಬೆಳೆ ಬಾರದೆ ನಷ್ಟ ಅನುಭವಿಸಿದ್ದಾರೆ.

ಈ ಕುರಿತು ಸಂಬಂಧಿಸಿದ ಕಂಪನಿ ಹಾಗೂ ಬೀಜ ವಿತರಕರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೂವರೆ ಎಕರೆ ಜಮೀನಿನಲ್ಲಿ 1.50 ಕೆ.ಜಿ ಬೀಜವನ್ನು ಬಿತ್ತನೆ ಮಾಡಲಾಗಿತ್ತು. ಅಲ್ಲದೆ, ಮೇಲಿಂದ ಮೇಲೆ ಕ್ರಿಮಿನಾಶಕವನ್ನು ಅವರ ಸಲಹೆ ಮೇರೆಗೆ ಸಿಂಪಡಣೆ ಮಾಡಲಾಗಿತ್ತು. ಆದರೂ ಬೆಂಡೆಕಾಯಿಗಳು ಬಿಳುಚಿಕೊಂಡಿದ್ದು, ನಷ್ಟ  ಅನುಭವಿಸುವಂತಾಗಿದೆ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.

'ಗಿಡಗಳು ಸಮೃದ್ಧವಾಗಿ ಬೆಳೆದಿದ್ದರೂ, ಬಿಳುಚಿಕೊಂಡಿವೆ. ಅಲ್ಲದೆ ಕಾಯಿಗಳೂ  ಬಿಳುಚಾಗಿದ್ದು, ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಹಿಂದೇಟು ಹಾಕಿದರು. ಸುಮಾರು 20 ಸಾವಿರ ರೂಪಾಯಿಯನ್ನು ಬೀಜ, ಗೊಬ್ಬರ, ಕ್ರಿಮಿನಾಶಕಕ್ಕೆ  ಖರ್ಚು ಮಾಡಲಾಗಿತ್ತು ಎಂದು ರೈತರು ತಿಳಿಸಿದರು.

ADVERTISEMENT

ನಷ್ಟ ಭರಿಸುವಂತೆ ಕಂಪನಿ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಯಾವುದೇ ಪರಿಹಾರ ನೀಡಿಲ್ಲ ಎಂದು ಅವರು ದೂರಿದರು.

ರೈತರಿಗೆ ಮೋಸ ಮಾಡುವ ಕಂಪನಿಗಳ ವಿರುದ್ಧ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.