ADVERTISEMENT

ನೀರಿನ ಕೊರತೆ; ಸೊರಗಿದ ಬೆಳೆ

ಹೊಲಗಳಲ್ಲಿ ಕೆಲಸವಿಲ್ಲದೆ ಗುಳೆ ಹೊರಟ ರೈತರು

​ಪ್ರಜಾವಾಣಿ ವಾರ್ತೆ
Published 25 ಮೇ 2017, 7:08 IST
Last Updated 25 ಮೇ 2017, 7:08 IST

ಕನಕಗಿರಿ: ಈ ಭಾಗದಲ್ಲಿ ಮೂರು ವರ್ಷಗಳಿಂದ ಉತ್ತಮ ಮಳೆ ಬೀಳದ ಕಾರಣ ರೈತರು ಕಂಗಾಲಾಗಿದ್ದು, ದುಡಿಯಲು ಹೊಲಗಳಲ್ಲಿ ಕೆಲಸ ಇಲ್ಲದೆ ಗುಳೆ ನಡೆದಿದ್ದಾರೆ.

ಹುಲಿಹೈದರ, ಚಿಕ್ಕಮಾದಿನಾಳ ಹಾಗೂ ನವಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಜನ, ಜಾನುವಾರು ತತ್ತರಿಸಿವೆ. ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ತೋಟಗಾರಿಕೆ ಬೆಳೆಗಳು ಒಣಗುತ್ತಿವೆ.

ಕನಕಗಿರಿ, ಚಿಕ್ಕಮಾದಿನಾಳ, ರಾಂಪುರ, ಸೋಮಸಾಗರ, ಹುಲಿಹೈದರ, ನವಲಿ, ಜೀರಾಳ, ಬಂಕಾಪುರ, ಬೈಲಕ್ಕುಂಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಪ್ರಗತಿ ಪರ ರೈತರು ದಾಳಿಂಬೆ, ಮಾವು, ಪೇರಲ, ದ್ರಾಕ್ಷಿ, ಲಿಂಬು ಬೆಳೆ ಹಾಕಿದ್ದಾರೆ. ಸಮರ್ಪಕವಾಗಿ ನೀರಿಲ್ಲದೆ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ರೈತರು ಕೈ ಸುಟ್ಟುಕೊಂಡಿದ್ದಾರೆ. 

‘ಬ್ಯಾಂಕ್, ಸಹಕಾರಿ ಸಂಘಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ  ಬೆಳೆ ಬೆಳೆಯಲು ಶ್ರಮಿಸಿದರೂ ಅಂತರ್ಜಲ ಮಟ್ಟ ಕುಸಿದ ಕಾರಣ ಗಿಡಗಳು ಒಣಗುತ್ತಿವೆ. ಹಸಿರು ಬಣ್ಣದ ಎಲೆಗಳು ಒಣಗಿ ನೆಲಕ್ಕೆ ಬೀಳುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ’ ಎಂದು ರೈತರು ತಿಳಿಸಿದರು.

ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿದರೂ ಹನಿ ನೀರು ಬೀಳುತ್ತಿಲ್ಲ. ಹಣ ನೀಡಿ ನೀರಿನ ಟ್ಯಾಂಕರ್‌ ಮೂಲಕ ಬೆಳೆಗಳಿಗೆ ನೀರುಣ್ಣಿಸಿದರೂ ನೀರು ಸಾಲುತ್ತಿಲ್ಲ’ ಎಂದು ರೈತರಾದ ಫಕೀರಪ್ಪ, ಶಿವಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.