ADVERTISEMENT

ನೀರು ಪೂರೈಕೆಗೆ ಕಾರಟಗಿ ಪುರಸಭೆ ಅಡ್ಡಿ

ಚಳ್ಳೂರು ಕ್ಯಾಂಪ್‌ನಲ್ಲಿ ಹಾಹಾಕಾರ: ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:08 IST
Last Updated 14 ಮಾರ್ಚ್ 2017, 6:08 IST

ಕಾರಟಗಿ: ಪಟ್ಟಣದಿಂದ 5 ಕಿ. ಮೀ. ದೂರದ ಚಳ್ಳೂರ ಕ್ಯಾಂಪ್‌ನಲ್ಲಿ ಕುಡಿವ ನೀರಿಗೆ ಹಾಹಾಕರ ಉಂಟಾಗಿದೆ.
ಚಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಬಹುಗ್ರಾಮ ಕುಡಿಯುವ ನೀರಿನ ಕೆರೆಯಲ್ಲಿ ನೀರು ಇಲ್ಲದೆ ಹತ್ತಾರು ಕಿ. ಮೀ. ನೀರಿಗಾಗಿ ಅಲೆಯುತ್ತಿದ್ದಾರೆ. ಇನ್ನೊಂದೆಡೆ ಕುಡಿಯುವ ನೀರಿನ ವಿಷಯದಲ್ಲೂ ರಾಜಕೀಯ ಪ್ರವೇಶಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಕೊಳವೆಬಾವಿಗೆ ಮೋಟಾರ್ ಅಳವಡಿಕೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ.

ಕ್ಯಾಂಪ್‌ನಲ್ಲಿ ಕೊಳವೆಬಾವಿ 400 ಅಡಿ ಕೊರೆಸಿದರೂ ಕ್ಯಾಂಪ್‌ನಲ್ಲಿ ನೀರು ಬರುವುದಿಲ್ಲ. ಇದರ ಪರಿಹಾರಕ್ಕೆ ಕಾರಟಗಿ ಕೆರೆ ಬಸವೇಶ್ವರ ದೇಗುಲ ಬಳಿ ಚಳ್ಳೂರ ಪಂಚಾಯಿತಿಯಿಂದ ಕೊಳವೆ ಬಾವಿ ಕೊರೆಸಿ, ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಸ್ವಾತಿ ರಾಮಮೋಹನರ ಅವರ ಅನುದಾನ ದಲ್ಲಿ ನಡೆಸಲಾಗಿದೆ. ಕಾಮಗಾರಿ ಮುಗಿ ದಿದ್ದು, ಕೊಳವೆ ಬಾವಿಗೆ ಮೋಟಾರ್ ಸಂಪರ್ಕ ಕಲ್ಪಿಸಿದರೆ ಕ್ಯಾಂಪ್‌ಗೆ ನೀರು ಬರುತ್ತದೆ. ಆದರೆ, ಇದಕ್ಕೆ ಕಾರಟಗಿ ಪುರಸಭೆ ಉಪಾಧ್ಯಕ್ಷೆ ಮಹಾದೇವಿ ಭಜಂತ್ರಿ, ಸದಸ್ಯ ರವಿ ನಂದಿಹಳ್ಳಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾರಟಗಿ ಯಿಂದ ನೀರು ಪೂರೈಕೆ ಮಾಡಬಾರದು ಎಂದು ಹೇಳಿದ್ದಾರೆ. ಹೀಗಾಗಿ ನೀರು ಪೂರೈಕೆಗೆ ಮೋಟಾರ ಅಳವಡಿಕೆ ಕಾರ್ಯಕ್ಕೆ ವಿಘ್ನ ಎದುರಾಗಿದೆ.
ಈ ಬಗ್ಗೆ ಚಳ್ಳೂರ ಗ್ರಾಮ ಪಂಚಾ­ಯಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ನೀರಿನ ಸಮಸ್ಯೆಗೆ ಸ್ಪಂದಿಸುವಂತೆ ಕೋರಿದೆ. ಇನ್ನೊಂದೆಡೆ ಪುರಸಭೆಯೂ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲ. ನಮ್ಮಲ್ಲೂ ನೀರಿನ ಸಮಸ್ಯೆ ಇದೆ ಎಂದು ಸ್ಪಷ್ಟಪಡಿಸಿ ಗೊತ್ತುವಳಿ ಅಂಗೀಕರಿಸಿ ಜಿಲ್ಲಾಡಳಿತಕ್ಕೆ ರವಾನಿಸಿದೆ.

‘ಕ್ಯಾಂಪ್‌ಗೆ ನೀರು ಪೂರೈಕೆಯಾದರೆ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಹೆಸರು ಬರುತ್ತದೆ ಎಂಬ ಆತಂಕದಲ್ಲಿ ಕೆಲವರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಚಳ್ಳೂರ ಗ್ರಾ.ಪಂ ಉಪಾಧ್ಯಕ್ಷೆ ಜಯಾ, ಸದಸ್ಯ ವೆಂಕಟೇಶ್ವರರಾವ್ ಆರೋಪಿಸಿದರು.

‘ನೀರು ಯಾರ ಆಸ್ತಿಯಲ್ಲ, ಎಲ್ಲಿಂದಲೋ ನೀರು ತಂದಾಗ ಮಾತ್ರ ಜನರಿಗೆ ನೀರುಣಿಸಲು ಸಾಧ್ಯ. ಪುರಸಭೆ ಅಡ್ಡಿಪಡಿಸುವುದು, ಗೊತ್ತುವಳಿ ಅಂಗೀ ಕರಿ­ಸುವುದು ತಪ್ಪು. ಸಂಬಂಧಿಸಿದವರಿಗೆ ತಿಳಿಸಿ, ಚಳ್ಳೂರಕ್ಯಾಂಪ್‌ಗೆ ನೀರು ಸರಬರಾಜು ಮಾಡಿಸುವುದಾಗಿ’ ಶಾಸಕ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದರು.
ಕುಡಿಯುವ ನೀರಿನ ವಿಷಯದಲ್ಲೂ ರಾಜಕೀಯ ನುಸುಳಿದ್ದಕ್ಕೆ ಬೇಸರ ಗೊಂಡ ಕ್ಯಾಂಪ್‌ ನಾಗರಿಕರು ಭಾನುವಾರ ಮಾಜಿ ಸಚಿವ ಸಾಲೋಣಿ ನಾಗಪ್ಪನವರ ಮೊರೆ ಹೋಗಿದ್ದಾರೆ.

‘ಪಟ್ಟಣದಲ್ಲಿ ನೀರಿನ ಸಮಸ್ಯೆ ಇಲ್ಲ. ಕುಡಿಯುವ ನೀರು ಬೇರೆಡೆಯಿಂದಲೂ ಬರುತ್ತಿದೆ. ಇದರ ಜ್ಞಾನವಿಲ್ಲದೆ ಹಲವರು ಆಕ್ಷೇಪಿಸುವುದು ಸರಿಯಲ್ಲ’ ಎಂದು ಸಾಲೋಣಿ ನಾಗಪ್ಪ ತಿಳಿಸಿದರು.

ಕ್ಯಾಂಪ್‌ನ ಪ್ರಮುಖರಾದ ಎಸ್. ನಾಗೇಶ್ವರರಾವ್, ಪಿ.ಸಾಯಿರಾಂ, ಜಿ. ಆನಂದರಾವ್, ಎ.ವೆಂಕಟೇಶ್ವರರಾವ್, ಪಿ.ಸೂರ್ಯಬಾಬು,  ಎಸ್‌.ಸುಬ್ಬಾರಾವ್, ಬಿ. ಬಾಬುರಾವ್, ಎನ್.ರಾಮಕೃಷ್ಣ, ಬಿ.ಪ್ರಸಾದ, ಜಿ.ಶ್ರೀನಿವಾಸ, ಬಿ.ಸತ್ಯನಾರಾಯಣ, ಎಸ್.ರಾಮಕೃಷ್ಣ, ಎನ್.ಶ್ರೀನಿವಾಸ ಕ್ಯಾಂಪ್‌ನ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.