ADVERTISEMENT

ಪಿಎಸ್ಐ ಬೂಟಿನ ಏಟು: ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 27 ಮೇ 2017, 7:35 IST
Last Updated 27 ಮೇ 2017, 7:35 IST

ಗಂಗಾವತಿ: ಉದ್ರಿಕ್ತ ಜನರನ್ನು ನಿಯಂತ್ರಿಸಲು ಅನಿರೀಕ್ಷಿತವಾಗಿ ಪೊಲೀಸ್ ಅಧಿಕಾರಿಯೊಬ್ಬರು ತಾವು ಧರಿಸಿದ್ದ ಶೂ ತೆಗೆದು ಜನರನ್ನು ಹೊಡೆದು ಚದುರಿಸಲು ಯತ್ನಿಸಿದ್ದಾರೆ ಎನ್ನಲಾದ ವಿಡಿಯೊ ಒಂದು ತಿಂಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ.

ಗಂಗಾವತಿ ತಾಲ್ಲೂಕಿನ ಸಿಂಗನಾಳ ಗ್ರಾಮದಲ್ಲಿ ಹೊಲದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಶಿವಬಸಪ್ಪ ಹಾಗೂ ವೀರಭದ್ರಪ್ಪ ಎಂಬ ದಯಾದಿಗಳ ಮಧ್ಯೆ ಕಲಹ ಏರ್ಪಟ್ಟಿತ್ತು.  ಗ್ರಾಮದ ಕೆಲ ಯುವಕರು ಪರ-ವಿರೋಧ ವಹಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ವಾಗ್ವಾದ ನಡೆದು ಕೈಮಿಲಾಯಿಸುವ ಹಂತಕ್ಕೆ ತಲುಪಿದಾಗ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಉಬಯ ಗುಂಪಿನ ಒಟ್ಟು 17 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ ಏ.22ರಂದು ಗ್ರಾಮದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ADVERTISEMENT

‘ಪೊಲೀಸರ ಸಮ್ಮುಖದಲ್ಲಿಯೇ ಯುವಕರು ಬಡಿದಾಟ ಆರಂಭಿಸಿದಾಗ ತಳ್ಳಾಟ-ನೂಕಾಟ ನಡೆಯಿತು. ಈ ಸಂದರ್ಭ ಪಿಎಸ್ಐ ಪ್ರಕಾಶ ಮಾಳೆ  ಸಹನೆ ಕಳೆದುಕೊಂಡು, ತಾವು ಧರಿಸಿದ್ದ ಬೂಟಿನಿಂದ ಯುವಕರನ್ನು ಥಳಿಸಲು ಮುಂದಾದರು’ ಎಂದು ಗ್ರಾಮದ ಯುವಕರು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಿಎಸ್ಐ ಪ್ರಕಾಶ ಮಾಳೆ, ‘ಇಲಾಖೆ ನೀಡಿರುವ ತಮ್ಮ ಶೂಗಳಿಗೆ ಲೇಸ್ ಇಲ್ಲ. ಗಲಾಟೆಯಲ್ಲಿ ಎರಡು ಮೂರು ಬಾರಿ ಶೂ ಬಿಚ್ಚಿತ್ತು. ಕಾಲಿಗೆ ಹಾಕುತ್ತಿದ್ದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾದ ಮಾಹಿತಿ ಬಂದ ತಕ್ಷಣ, ಆ ವ್ಯಕ್ತಿಯನ್ನು ನಿಯಂತ್ರಿಸಲು ಮುಂದಾದೆ.

ಈ ಸಂದರ್ಭದಲ್ಲಿ ಕೈಯಲ್ಲಿ ಶೂ ಇರುವುದರ ಬಗ್ಗೆ ಗಮನ ಇರಲಿಲ್ಲ. ಕೈ ಮೇಲಕ್ಕೆತ್ತಿದಾಗ ಶೂ ಇರುವ ಬಗ್ಗೆ ಅರಿವಾಗಿ ತಕ್ಷಣ ಕೆಳಕ್ಕಿಳಿಸಲಾಗಿದೆ. ಯಾರಿಗೂ ಶೂ ನಿಂದ ಹೊಡೆದಿಲ್ಲ. ಆದರೆ ಕೆಲವರು ಇದನ್ನು ತಿರುಚಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.