ADVERTISEMENT

ಪ್ರೇಕ್ಷಕನಾಗಿದ್ದವ ಶಾಸಕನಾದ ಕಥೆ

ದೊಡ್ಡನಗೌಡರ ನೆನಪಿನ ಬುತ್ತಿ: ಅಭಿವೃದ್ಧಿ ಕೆಲಸ ಮಾಡಿ ಋಣ ತೀರಿಸುವ ತುಡಿತ

ನಾರಾಯಣರಾವ ಕುಲಕರ್ಣಿ
Published 23 ಮಾರ್ಚ್ 2018, 11:47 IST
Last Updated 23 ಮಾರ್ಚ್ 2018, 11:47 IST
ದೊಡ್ಡನಗೌಡ ಪಾಟೀಲ
ದೊಡ್ಡನಗೌಡ ಪಾಟೀಲ   

ಕುಷ್ಟಗಿ: ‘ಅಪ್ಪ ಶಾಸಕರಾಗಿದ್ದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವಿಧಾನಸಭೆ ಕಲಾಪ ನೋಡಿದ್ದೆ. ಆದರೆ, ಮುಂದೊಂದು ದಿನ ಅಪ್ಪ ಕುಳಿತ ಜಾಗದಲ್ಲಿಯೇ ಕುಳಿತುಕೊಳ್ಳುತ್ತೇನೆ ಎಂಬುದನ್ನು ಕನಸಿನಲ್ಲೂ ಯೋಚಿಸಿರಲಿಲ್ಲ. ಆ ಕ್ಷಣ ನೆನೆದರೆ ರೋಮಾಂಚನವಾಗುತ್ತದೆ....’

- ಹೀಗೆ ಶಾಸಕ ದೊಡ್ಡನಗೌಡ ಪಾಟೀಲರು ಮೊದಲ ಬಾರಿ ಶಾಸಕರಾದ ನೆನಪಿನ ಸುರುಳಿ ಬಿಚ್ಚುತ್ತ ಹೋದರು.

‘ಸದನ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪವಿತ್ರ ಸ್ಥಳ. ಹಾಗೇ ‘ಶಾಸಕ ಲೆಟರ್‌ಹೆಡ್‌’ನಲ್ಲಿ ನನ್ನ ಸಹಿ ಇರುತ್ತದೆ ಎಂದರೆ ಅದು ಕ್ಷೇತ್ರದ ಜನ ನೀಡುವ ಅಧಿಕಾರದ ಭಿಕ್ಷೆ. ಈ ಪರಿಕಲ್ಪನೆಯಲ್ಲಿ ಜನಸೇವೆ ಮಾಡಬೇಕು ಎಂಬ ಕನಸು ಕಂಡಿದ್ದೆ.

ADVERTISEMENT

ಅವಕಾಶ ಸಿಕ್ಕಾಗಲೆಲ್ಲ ಕ್ಷೇತ್ರದ ಪರವಾಗಿ ಸದನದಲ್ಲಿ ದನಿ ಎತ್ತಿದ್ದೇನೆ. ಮೊದಲ ಬಾರಿ ಶಾಸಕನಾದಾಗ ಮಾಡಬೇಕು ಎಂದುಕೊಂಡಿದ್ದ ಕಾರ್ಯಗಳನ್ನು ಎರಡನೇ ಬಾರಿ ಆಯ್ಕೆಯಾದಾಗ ಮಾಡಿ ನ್ಯಾಯ ಒದಗಿಸಿದ್ದೇನೆ ಎಂಬ ತೃಪ್ತಿಯೇನೊ ಇದೆ. ಆದರೆ, ಸಂತೃಪ್ತಿ ಇಲ್ಲ. ಈ ಕ್ಷೇತ್ರದ ಜನರ ಋಣ ತೀರಿಸುವುದು ಇನ್ನೂ ಬಹಳಷ್ಟಿದೆ’ ಎಂದರು.

ಶಾಸಕ ಎಂದರೆ ಕೇವಲ ಕ್ಷೇತ್ರದ ಅಭಿವೃದ್ಧಿ ಮಾಡಿ ಮುಗಿಸುವುದಷ್ಟೇ ಅಲ್ಲ. ನಾಡಿನ ಆಗುಹೋಗುಗಳ ಬಗೆಗಿನ ಚಿಂತನೆ ನಡೆಸಬೇಕು. ಕಾನೂನು ರಚಿಸುವ, ಮಾರ್ಪಡಿಸುವ ಜವಾಬ್ದಾರಿಯೂ ಶಾಸಕರ ಮೇಲಿರುತ್ತದೆ ಎಂಬುದು ಗೊತ್ತಾಯಿತು ಎನ್ನುತ್ತಾರೆ.

ಆಗ ಸದನದ ಒಳಗಿನ ಕಾರ್ಯಕಲಾಪಗಳ ಅನುಭವ ಹೊಸದಾಗಿತ್ತು. ಹಿರಿಯರ ಸಾಲಿನಲ್ಲಿ ಕುಳಿತು ಅವರು ವ್ಯಕ್ತಪಡಿಸುವ ಅನಿಸಿಕೆ, ಅಭಿಪ್ರಾಯಗಳನ್ನು ಗಮನವಿಟ್ಟು ಕೇಳುತ್ತಿದ್ದೆ.

ಅನೇಕ ಸಂದರ್ಭಗಳಲ್ಲಿ ಪ್ರಶ್ನೆ ಕೇಳಲು ಅವಕಾಶ ಬೇಡುತ್ತಿದ್ದೆ. ಕೆಲವೊಮ್ಮೆ ಅವಕಾಶ ದೊರೆಯುತ್ತಿರಲಿಲ್ಲ. ಸದನದ ಹಿರಿಯರ ನಡೆ ನುಡಿಗಳಿಂದ ಒಂದಷ್ಟು ಅನುಭವ ಪಡೆದುಕೊಳ್ಳಲು ಶಾಸಕನಾದ ಮೊದಲ ಅವಧಿಯಲ್ಲಿ ಸಾಧ್ಯವಾಯಿತು. ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಯಾವುದೇ ಇರಲಿ. ಎಲ್ಲ ಶಾಸಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ಜ್ವಲಂತ ಸಮಸ್ಯೆಗಳ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ, ಬದಲಾದ ಪರಿಸ್ಥಿತಿಗೆ ತಕ್ಕಂತೆ ಕಾನೂನುಗಳಿಗೆ ಹೊಸರೂಪ ನೀಡುವುದು, ಬದಲಾಯಿಸುವುದು–ಹೀಗೆ ಪ್ರತಿಯೊಂದು ವಿಷಯದಲ್ಲೂ ಶಾಸಕರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ ಎಂಬುದನ್ನು ಕಲಿಯಲು ಸಾಧ್ಯವಾಯಿತು ಎನ್ನುವುದು ಗೌಡರ ಪ್ರಾಮಾಣಿಕ ಮಾತು.

ವೈಯಕ್ತಿಕ, ಕೌಟುಂಬಿಕ ಜವಾಬ್ದಾರಿಗಳನ್ನು ಬದಿಗಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಶಾಸಕನಾಗಿ ಏನೂ ಮಾಡದೆಯೂ ಇರಬಹುದು. ಆದರೆ, ನಾನು ಅಂಥವರ ಸಾಲಿಗೆ ಸೇರುವುದಿಲ್ಲ. ಬದಲಾಗಿ ಪಟ್ಟಣ, ಪ್ರತಿಯೊಂದು ಹಳ್ಳಿಗಳ ಬೇಕು ಬೇಡಗಳು, ಜನರ ಇಚ್ಛೆಗಳ ಬಗ್ಗೆ ಚಿಂತನೆ ನಡೆಸದಿದ್ದರೆ ಇಷ್ಟೊಂದು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ.

ಕೃಷ್ಣಾ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೋರಾಟ ಕಳೆದ ಒಂದು ದಶಕದಿಂದಲೂ ಮುಂದುವರಿಸಿದ್ದೇನೆ. ಹೈದರಾಬಾದ್‌ - ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ನಡೆದ ಹೋರಾಟದಲ್ಲಿ ಸಕ್ರಿಯನಾಗಿದ್ದೆ. ಆಲಮಟ್ಟಿಯಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಂಜೂರಾತಿ ಪಡೆದು ಹೆಚ್ಚಿನ ಅನುದಾನ ಬರುವಂತೆ ಪ್ರಯತ್ನಿಸಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಕುಷ್ಟಗಿ ಪಟ್ಟಣಕ್ಕೆ ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮಂಜೂರು ಮಾಡಿಸಿದೆ–ಹೀಗೆ ಶಾಸಕ ಪಾಟೀಲ ಅವರು ತಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡುತ್ತಲೇ ಹೋದರು.

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನ ಕೆಲ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದರೂ ಗೆಲುವು ತಂದುಕೊಡಲು ಸಾಧ್ಯವಾಗಿರಲಿಲ್ಲ. ಆದರೆ, 2004ರ ಚುನಾವಣೆಯಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಖಾತೆ ತೆರೆಯುವಂತಾಯಿತು. ಪಕ್ಷಕ್ಕೆ ನೆಲೆ ಒದಗಿಸುವ ಅವಕಾಶ ನನಗೆ ದೊರೆತಿದ್ದು ಖುಷಿ ಕೊಡುವ ಸಂಗತಿ ಎಂದು ಆಗಿನ ಸಂದರ್ಭವನ್ನು ನೆನಪಿಸಿಕೊಂಡರು ದೊಡ್ಡನಗೌಡ. 
**
ದೊಡ್ಡನಗೌಡರ ರಾಜಕೀಯ ದಾರಿ..

ತಂದೆ ರಾಜಕೀಯದಲ್ಲಿ ಇದ್ದದ್ದರಿಂದ ಸಹಜವಾಗಿ ರಾಜಕೀಯದ ನಂಟು ಬೆಳೆದಿತ್ತು. ಪ್ರಾರಂಭದಲ್ಲಿ ಎನ್‌ಎಸ್‌ಯುಐ ಜಿಲ್ಲಾ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ತೊಡಗಿದ್ದ ದೊಡ್ಡನಗೌಡರಿಗೆ ಶಾಸಕರ ಪುತ್ರ ಎಂಬ ಕಾರಣಕ್ಕೆ ರಾಜಕೀಯ ಪ್ರಭಾವ ವಲಯದಲ್ಲಿ ಗುರುತಿಸಿಕೊಂಡಿದ್ದರು. ರಾಜಕೀಯಕ್ಕೆ ಬರಬೇಕು ಎನ್ನುವ ಆಸೆ ಇತ್ತಾದರೂ ಇಷ್ಟು ಬೇಗ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ತಂದೆ ನಿಧನದ ನಂತರ ರಾಜಕೀಯದ ಉಸಾಬರಿ ಬೇಡ ಎಂಬ ತಾಯಿಯ ಒತ್ತಾಯ ಇತ್ತು. ಆದರೆ, ಹಿತೈಷಿಗಳು, ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ರಾಜಕೀಯ ದಾರಿ ಸವೆಸಿದ ದೊಡ್ಡನಗೌಡ 2000ನೇ ಇಸ್ವಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದರು.
**
ಸ್ಫೂರ್ತಿಯಾದ ಅವಮಾನ

2004ರಲ್ಲಿ ಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರೂ ‘ಇನ್ನೂ ಏನೂ ಅರಿಯದ ಹುಡುಗ’ ಎಂಬ ಅಸಡ್ಡೆ ಮಾತುಗಳು ಕಾಂಗ್ರೆಸ್‌ ವರಿಷ್ಠರಿಂದ ಕೇಳಿಬಂದವು.

ಇಷ್ಟೊಂದು ಅವಮಾನ ಸಹಿಸಿಕೊಳ್ಳುವುದು ಬೇಡ, ಪಕ್ಷ ಬದಲಿಸಿಯಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದಾಗ ಬಿಜೆಪಿ ಹೈಕಮಾಂಡ್‌ನ ಮುಖಂಡರು ಸಂಪರ್ಕಕ್ಕೆ ಬಂದು ಅಭ್ಯರ್ಥಿಯಾದೆ. ತಂದೆಯ ಮೇಲಿನ ಅಭಿಮಾನ ಅವರ ನಿಧನದ ನಂತರ ವ್ಯಕ್ತವಾದ ಅನುಕಂಪದಿಂದ ಶಾಸಕನಾದೆ.

ಕಾಂಗ್ರೆಸ್‌ನ ಅವಮಾನದಿಂದ ಹತಾಶೆಗೊಳ್ಳಲಿಲ್ಲ. ಬದಲಾಗಿ ಅದನ್ನೇ ಸ್ಫೂರ್ತಿಯಾಗಿಸಿಕೊಂಡೆ ಎನ್ನುತ್ತಾರೆ ದೊಡ್ಡನಗೌಡ.
**
ಹೆಜ್ಜೆ ಗುರುತುಗಳು

2004ರ ವಿಧಾನಸಭೆ ಚುನಾವಣೆ 44,492 ಮತಗಳಿಂದ ಗೆಲುವು
2008ರ ವಿಧಾನಸಭೆ ಚುನಾವಣೆ 30,313 ಮತಗಳಿಂದ ಸೋಲು
2013ರ ವಿಧಾನಸಭೆ ಚುನಾವಣೆ 44,007 ಮತಗಳಿಂದ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.