ADVERTISEMENT

ಬಡ್ತಿ ಮೀಸಲಾತಿ– ರಾಷ್ಟ್ರಪತಿ ಅಂಕಿತ: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 7:31 IST
Last Updated 18 ಜೂನ್ 2018, 7:31 IST

ಕೊಪ್ಪಳ: ಬಡ್ತಿ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿರುವುದನ್ನು ಸ್ವಾಗತಿಸಿ ನಗರದ ಅಶೋಕ ವೃತ್ತದಲ್ಲಿ ಭಾನುವಾರ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರ ಒಕ್ಕೂಟದ ಜಿಲ್ಲಾ ಘಟಕ, ಎಸ್‌.ಸಿ, ಎಸ್‌.ಟಿ ವಿದ್ಯಾರ್ಥಿ ಒಕ್ಕೂಟ, ಎಸ್‌.ಸಿ, ಎಸ್‌.ಟಿ ನಿವೃತ್ತ ನೌಕರರ ಜಿಲ್ಲಾ ಘಟಕದ ಆಶ್ರಯದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ ಮಾಲಗಿತ್ತಿ ಮಾತನಾಡಿ, ಸಂವಿಧಾನಬದ್ಧವಾದ ಹಕ್ಕುಗಳನ್ನು ಪಡೆಯಲು ಶೋಷಿತ ಸಮುದಾಯಗಳು ಇಂದಿಗೂ ಪರದಾಡಬೇಕಿದೆ. ರಾಜ್ಯ ಸರ್ಕಾರ ಸ್ಪಷ್ಟವಾಗಿ ಸಾಮಾಜಿಕ ನ್ಯಾಯದ ಪರವಾಗಿ ನಿಲುವು ತಾಳುವ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರ ಹಿತಕಾಯಲು ರಚಿಸಿರುವ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ ಹಾಕಿರುವುದು ಸಂತಸ ತಂದಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಡಾ.ಪ್ರಭುರಾಜ ನಾಯಕ ಮಾತನಾಡಿ, ಮೀಸಲಾತಿ ಎನ್ನುವುದು ಆರ್ಥಿಕ ಹಿಂದುಳಿದಿರುವಿಕೆಗೆ ಸಂಬಂಧಿಸಿಲ್ಲ. ಅದು ಸಾಮಾಜಿಕತೆಗೆ ಸಂಬಂಧಿಸಿದೆ. ಈ ದೇಶದಲ್ಲಿ ವರ್ಣ ವ್ಯವಸ್ಥೆ, ಜಾತಿ ಆಧರಿಸಿರುವ ಶ್ರೇಣಿಕೃತ ವ್ಯವಸ್ಥೆ ಇದೆ. ಆದ್ದರಿಂದ ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾಗಿರುವ ವರ್ಗಗಳು ಅಕ್ಷರ, ಉದ್ಯೋಗ, ಭೂಮಿ, ಮತ್ತಿತರ ಹಕ್ಕುಗಳಿಂದ ದೂರ ಇಡಲ್ಪಟ್ಟಿದ್ದವು. ಡಾ ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾದ ನಂತರ ಈ ವರ್ಗಗಳ ಹಿತರಕ್ಷಣೆಗೆ ಕಾನೂನು ಅಸ್ತಿತ್ವಕ್ಕೆ ಬಂದಿವೆ ಎಂದು ಹೇಳಿದರು.

ADVERTISEMENT

ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷವಾದರೂ ಈ ಕಾನೂನುಗಳ ಲಾಭ ಪಡೆಯಲು ನಾವು ಹೋರಾಡಬೇಕಾಗಿದೆ. ಇಂದಿಗೂ ನ್ಯಾಯಯುತವಾಗಿ ಸಿಗಬೇಕಾದ ಪ್ರಮಾಣದಲ್ಲಿ ಮೀಸಲಾತಿ ಸಿಕ್ಕಿಲ್ಲ. ಶೋಷಿತ ಸಮುದಾಯಗಳ ನೌಕರರು, ಮುಖಂಡರು ಉಪಪಂಗಡಗಳು ಒಂದಾಗಿ ಹೋರಾಡಬೇಕು. ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ವಿಧೇಯಕ ನಮ್ಮ ನೈತಿಕ ಸ್ಥೈರ್ಯ ಹೆಚ್ಚಿಸಿದೆ ಎಂದರು.

ಡಾ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು.

ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಹನುಮಂತಪ್ಪ ಚಲವಾದಿ, ವಿದ್ಯಾರ್ಥಿ ಒಕ್ಕೂಟದ ಹಾಲೇಶ ಕಂದಾರಿ, ಹೇಮಂತಕುಮಾರ ದೊಡ್ಡಮನಿ, ಮಂಜುನಾಥ ಆರೆಂಟನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.