ADVERTISEMENT

ಬದುಕು ಕಟ್ಟಿಕೊಡುತ್ತಿವೆ ಬಂಡೆಕಲ್ಲುಗಳು!

ಇಲ್ಲಿ ಕಲ್ಲುಗಳು ಕಂಬ, ಮಣೆಯಾಗಿ, ದೇವರ ವಿಗ್ರಹ, ಗಾಲಿಗಳಾಗಿ ಅರಳುತ್ತವೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 7:02 IST
Last Updated 25 ನವೆಂಬರ್ 2015, 7:02 IST

ಕೊಪ್ಪಳ: ಇಲ್ಲಿ ಕಲ್ಲುಗಳು ಕಂಬವಾಗಿ, ಮಣೆಯಾಗಿ, ದೇವರ ವಿಗ್ರಹಗಳಾಗಿ, ಗಾಲಿಗಳಾಗುತ್ತವೆ. –ಹೀಗೆ ವಿವಿಧ ಆಕೃತಿಯಲ್ಲಿ ಇರುವುದು ನೋಡುಗರ ಮನಸ್ಸನ್ನು ಕ್ಷಣ ಮಂತ್ರ ಮುಗ್ಧರನ್ನಾಗಿಸುವ ದೃಶ್ಯ ಸಮೀಪದ ದೇವಲಾಪುರ ಬಳಿ ಎರಡು ಎಕರೆ ಜಮೀನು ಒಂದರಲ್ಲಿ ಕಾಣಬಹುದು.

ನಿರಕ್ಷರ ಕುಕ್ಷಿಗಳಾದರೂ ಕೈಯಲ್ಲಿ ಉಳಿ ಹಿಡಿದು ಕೆತ್ತನೆ ಕೆಲಸ ಮಾಡುವ ಶಿಲಾ ಸಾಕ್ಷರರಿವರು. ಮೂಲತಃ ಶಿಲ್ಪಿಗಳಲ್ಲದಿದ್ದರೂ, ಬದುಕಿನ ತುತ್ತು ಸಂಪಾದಿಸುವುದಕ್ಕಾಗಿ ಅಲೆಮಾರಿಯಾಗಿ ಬಂದು ಶಾಶ್ವತ ನೆಲೆ ಕಂಡುಕೊಂಡ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯವರಾದ ಮರಿಯಪ್ಪ ಅಂಬಿಗರು ಮತ್ತು ಸಂಗಡಿಗರು ಇದನ್ನೇ ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡಿದ್ದಾರೆ.

‘ಜೀವನಾಧಾರಕ್ಕೆ ಸ್ವಗ್ರಾಮದಲ್ಲಿ ಶಿಲ್ಪಿಗಳ ಕೈಯಲ್ಲಿ ಕೂಲಿ ಕೆಲಸ ಮಾಡಿ ಶಿಲ್ಪ ಕಲೆ ಕಲಿಯಲಾಯಿತು. ಅದರೊಂದಿಗೆ ಸ್ವಲ್ಪ ಪ್ರಮಾಣದ ಹಣ ಗಳಿಸಿಕೊಂಡು 10 ವರ್ಷಗಳ ಹಿಂದೆ ಈ ಜಿಲ್ಲೆಗೆ ಬಂದೆ. ₹1.20 ಲಕ್ಷ ಹಣದಿಂದ ಹಾಗೂ ಗವಿಸಿದ್ದೇಶ್ವರ ಸ್ವಾಮಿಗಳ ಸಹಾಯ ಪಡೆದು ಶಿಲ್ಪಗಾರಿಕೆ ಕೆಲಸ ಪ್ರಾರಂಭಿಸಲಾಯಿತು. ಮೂರು ವರ್ಷ ಗವಿಮಠದ ಶಿಲ್ಪ ಕೆತ್ತನೇ ಕೆಲಸ ಮಾಡಲಾಗಿದೆ.

ನಂತರ ಜಿಲ್ಲೆಯ ವಿವಿಧ ಊರುಗಳಲ್ಲಿ ದೇವಸ್ಥಾನ, ದೀಪದ ಕಂಬ, ಆಂಜನೇಯನ ಮೂರ್ತಿಗಳನ್ನು ಕೆತ್ತಿಕೊಡಲಾಗುತ್ತಿದೆ. ಇಲ್ಲಿಗೆ ಬಂದಾಗಿನಿಂದ 20– 25 ಗುಡಿಗೋಪುರ, 60ರಿಂದ 70 ತೇರಿನ ಗಾಲಿಗಳನ್ನು ತಯಾರಿಸಿ ಕೊಡಲಾಗಿದೆ. ಅಲ್ಲದೆ ಸಣ್ಣ ಪುಟ್ಟ ಮೂರ್ತಿಗಳನ್ನು ಕೆತ್ತಿಕೊಡಲಾಗಿದೆ.

ಚಿಕೇನಕೊಪ್ಪದ ಮಾರುತೇಶ್ವರ ದೇವಾಲಯ, ಅಲ್ಲನಗರದ ತೇರಿನಗಾಲಿ, ದೇಶಿಕ್ಯಾಂಪ್‌ನಲ್ಲಿ ಮಾರುತೇಶ್ವರ ದೇವಸ್ಥಾನ, ಇರಕಲ್‌ಗಡ, ಗೊಂಡಬಾಳದ ತೇರಿನ ಗಾಲಿಗಳು ಹೀಗೆ ಸುತ್ತಮುತ್ತ ಹಲವಾರು ಹಳ್ಳಿಗಳಿಗೆ ಮೂರ್ತಿ, ಕಂಬಗಳು,  ಗಡಗ, ಪುಷ್ಪಕಂಬಗಳನ್ನು ಕೆತ್ತಿಕೊಡಲಾಗಿದೆ.

ತಿಂಗಳಿಗೆ ಎಲ್ಲ ಕೂಲಿಕಾರರ ಖರ್ಚು ತೆಗೆದು ₹15ಸಾವಿರ ಉಳಿಯುತ್ತದೆ. ಸರ್ಕಾರದಿಂದ ಯಾವುದೇ  ಅನುದಾನ ಪಡೆದಿಲ್ಲ. ಬಳ್ಳಾರಿ, ಆಂದ್ರಪ್ರದೇಶ, ಕೊರಗೊಡು ಹೀಗೆ ವಿವಿಧಕಡೆಗಳಿಂದ ಕೂಲಿಕಾರರು ಬಂದಿದ್ದಾರೆ. ಊಟ, ವಸತಿ ಕೊಟ್ಟು ದಿನಕ್ಕೆ ₹400 ಕೂಲಿ ನೀಡಲಾಗುತ್ತದೆ. ಕೂಲಿಕಾರರು ತಿಂಗಳಿಗೆ ₹12 ಸಾವಿರದಂತೆ ಯಾವ ಸರ್ಕಾರಿ ನೌಕರನಿಗೂ ಕಮ್ಮಿ ಇಲ್ಲದಂತೆ ಜೀವನ ಸಾಗಿಸುತ್ತಿದ್ದಾರೆ. ಕೆಲವರು ಪಿಯುಸಿ, ಎಸ್ಸೆಸ್ಸೆಲ್ಸಿ ಓದಿದ್ದಾರೆ.

ಕೆಲವರು ಏನೂ ಓದದೇ ಇದ್ದಾರೆ. ಕಲ್ಲುಗಳನ್ನು ಸಮೀಪದ ಬುಕ್ಕ ಸಾಗರ, ಹಳೆಕುಮಟಗಳಿಂದ ತರಿಸಲಾಗುತ್ತದೆ. ಇಲ್ಲಿ ಕಟಿಂಗ್‌ ಮೆಷಿನ್‌, ಪೇಪರ್ ಮೆಷಿನ್‌, ಕ್ರೇನ್‌, ಟ್ರಾಕ್ಟರ್‌, ಅಪ್ಪೇಗಾಡಿ ಇವುಗಳನ್ನು ಸಹಾಯಕ್ಕೆ ಬಳಸಲಾಗುತ್ತದೆ’ ಎನ್ನುತ್ತಾರೆ ಶಿಲ್ಪಿಗಳಾದ ಮರಿಯಪ್ಪ ಅಂಬಿಗರು.

ಕಷ್ಟಗಳೆಂದು ಕೈಕಟ್ಟಿ ಕುಳಿತುಕೊಳ್ಳದೆ ಯೋಚನೆ ಮಾಡಿ, ಶ್ರಮವಹಿಸಿದರೆ ಜೀವದಲ್ಲಿ ಯಶಸ್ಸು ಕಂಡುಕೊಳ್ಳಬಹುದು ಎಂಬುದಕ್ಕೆ  ಕಲ್ಲನ್ನು ಕಲೆಯಾಗಿಸುವ ಮರಿಯಪ್ಪ ಸಾಕ್ಷಿ. ಬಂಡೆಯಾಗಿದ್ದ ಅವರ ಬಡತನವನ್ನು ಸುಂದರ ಮೂರ್ತಿಯನ್ನಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.