ADVERTISEMENT

ಬರದ ನಡುವೆ ರಸಭರಿತ ಕಲ್ಲಂಗಡಿ ಬೆಳೆಯುವ ಯಶಸ್ವಿ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 5:57 IST
Last Updated 15 ಮಾರ್ಚ್ 2017, 5:57 IST
ಕೊಪ್ಪಳ ತಾಲ್ಲೂಕು ಬೇವಿನಹಳ್ಳಿ ಗ್ರಾಮದ ಮಂಜುನಾಥ ಅವರ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಕಲ್ಲಂಗಡಿ ಹಣ್ಣು.
ಕೊಪ್ಪಳ ತಾಲ್ಲೂಕು ಬೇವಿನಹಳ್ಳಿ ಗ್ರಾಮದ ಮಂಜುನಾಥ ಅವರ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಕಲ್ಲಂಗಡಿ ಹಣ್ಣು.   

ಕೊಪ್ಪಳ: ಇಲ್ಲಿನ ಹೊಲದಲ್ಲಿರುವ ಕಲ್ಲಂಗಡಿ ಹಣ್ಣಿನ ತೂಕ ಸರಾಸರಿ10 ಕೆಜಿ. ಕಳೆರಹಿತ ಹೊಲ, ಸಮೃದ್ಧ ಫಸಲು. ಪ್ರತಿ ಕಿಲೋಗೆ ₹ 10ರಂತೆ ಮಾರಾಟ ಮಾಡುತ್ತಾರೆ. ಎಕರೆಗೆ 10ರಿಂದ 15 ಟನ್‌ ಇಳುವರಿ...

– ಇದು ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ರೈತರ ಯಶಸ್ವಿ ಪ್ರಯೋಗ. ಇದರ ಹಿಂದಿದ್ದದ್ದು ತೋಟಗಾರಿಕಾ ಇಲಾಖೆಯ ನೆರವು ಮತ್ತು ಮಾರ್ಗದರ್ಶನ. ಸಮಗ್ರ ತೋಟಗಾರಿಕಾ ಮಿಷನ್‌ ಯೋಜನೆ ಅಡಿ ಇಲ್ಲಿನ ಮಂಜುನಾಥ ಅವರ ಹೊಲದಲ್ಲಿ ಈ ಪ್ರಯೋಗ ನಡೆದಿದೆ. ಇದೇ ರೀತಿ ಶಹಾಪುರ, ರುದ್ರಾಪುರದಲ್ಲಿಯೂ ನಡೆದಿದೆ. ಒಟ್ಟು 25 ರೈತರು ಫಲಾನುಭವಿಗಳಾಗಿದ್ದಾರೆ.

ಇವರು ರೈತರು: ತಾಲ್ಲೂಕಿನ ಶಹಾಪುರ, ಬೇವಿನಹಳ್ಳಿ ಮತ್ತು ರುದ್ರಾಪುರ ಗ್ರಾಮಗಳ ರೈತರಾದ ಅನ್ನವ್ವ ಮಡ್ಡಿ, ಕರಿಯಪ್ಪ ಕುರಿ, ಸಿದ್ದಪ್ಪ ಅಡಗಿ, ಮುಕ್ಕಣ್ಣ ಮಡ್ಡಿ, ಸೋಮಣ್ಣ ಬೆಟಗೇರಿ, ಮಲ್ಲಯ್ಯ ಹಿರೇಮಠ, ಭೀಮಪ್ಪ ಬಸರಿಹಾಳ, ಶಂಕ್ರಮ್ಮ ವಡಿಯರ್, ನಿಂಗಜ್ಜ, ರಾಮಪ್ಪ ಕುರಿ, ಮಾರ್ಕಂಡೆಪ್ಪ, ಮಾರುತಿ ಪೂಜಾರ್ ಸೇರಿದಂತೆ ಹಲವು ರೈತರು ಈ ಸಾಲಿನಲ್ಲಿದ್ದಾರೆ.

ADVERTISEMENT

ಪ್ರತಿ ಎಕರೆಗೆ ಸುಮಾರು ₹ 32 ಸಾವಿರ ವೆಚ್ಚವಾಗಿದೆ. ತೋಟಗಾರಿಕೆ ಇಲಾಖೆಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿ ಪ್ರತಿ ಎಕರೆಗೆ ₹ 17 ಸಾವಿರ ಸಹಾಯಧನ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಶೇ 90 ರಷ್ಟು ಸಬ್ಸಿಡಿ ಇದೆ. ಇದರಿಂದ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲಾಯಿತು. ಹೀಗಾಗಿ ನೀರು ಹಾಯಿಸುವ ಶ್ರಮವೂ ಇಲ್ಲ.   ತಂತ್ರಜ್ಞಾನ ಅಳವಡಿಕೆ, ಗೊಬ್ಬರ ಸೇರಿದಂತೆ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಪರಿಣಾಮವಾಗಿ ಬರ ಪರಿಸ್ಥಿತಿ ಹಾಗೂ ಅತ್ಯಲ್ಪ ನೀರಿನ ಲಭ್ಯತೆಯಲ್ಲೂ ಕಲ್ಲಂಗಡಿ ಬೆಳೆ ಚೆನ್ನಾಗಿ ಬಂದಿದೆ.\

(ಕಲ್ಲಂಗಡಿ ಹೊತ್ತು ಸಾಗುತ್ತಿರುವ ಯುವಕರು)

ಬೆಳೆದ ವಿಧಾನ: ಭೂಮಿ ಹದಗೊಳಿಸಿದ ನಂತರ ಏರು ಮಡಿ ಮಾಡಿ, ನಂತರ ಹನಿ ನೀರಾವರಿಗಾಗಿ ಪೈಪ್ ಅಳವಡಿಸಲಾಗುತ್ತದೆ. ಅದರ ಮೇಲೆ ಇದಕ್ಕೆ ಪ್ಲಾಸ್ಟಿಕ್ ಹೊದಿಕೆ (ಮಲ್ಚ್) ಹಾಕಲಾಗುತ್ತದೆ. ಬಳಿಕ ನಿಗದಿತ ಅಂತರದಲ್ಲಿ ಬಿತ್ತನೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ಹೊದಿಕೆ ಬಳಸುವುದರಿಂದ, ಕಳೆ ಕಡಿಮೆ, ಬಳ್ಳಿಗೆ ರೋಗಬಾಧೆ ಭೀತಿಯೂ ಇಲ್ಲ. ಹನಿ ನೀರಾವರಿ ವ್ಯವಸ್ಥೆಯ ಮೂಲಕ ರಸಗೊಬ್ಬರವನ್ನೂ ಪೂರೈಸಬಹುದು. ಮಾನವ ಶ್ರಮವೂ ಕಡಿಮೆ. ಮಾರುಕಟ್ಟೆಯಲ್ಲಿ ಪ್ರತಿ ಟನ್ ಕಲ್ಲಂಗಡಿಗೆ ಕನಿಷ್ಟ ₹ 10 ಸಾವಿರ  ದೊರೆಯುತ್ತದೆ. ಇನ್ನು ಹಬ್ಬಗಳ ಸಂದರ್ಭದಲ್ಲಿ ಬೆಲೆ ಏರುತ್ತದೆ. ಪ್ರತಿ ಎಕರೆಗೆ ಎಕರೆಗೆ  ₹ 1 ಲಕ್ಷದಿಂದ ₹ 1.50 ಲಕ್ಷ ಆದಾಯ ಗಳಿಸಬಹುದು ಎನ್ನುತ್ತಾರೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು.

ತಾಂತ್ರಿಕತೆ ಅಳವಡಿಸಿಕೊಂಡು, ತೋಟಗಾರಿಕೆಯನ್ನು ಲಾಭದಾಯಕವನ್ನಾಗಿಸಿಕೊಳ್ಳುವ ಮೂಲಕ ಉತ್ತಮ ಲಾಭ ಪಡೆಯುತ್ತಿರುವ  ಇಲ್ಲಿನ ರೈತರು ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ ಎನ್ನುತ್ತಾರೆ ಕೊಪ್ಪಳದ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್‌ನ ಸಲಹಾಧಿಕಾರಿ ವಾಮನಮೂರ್ತಿ ಅವರು. ಮಾಹಿತಿಗೆ ವಾಮನಮೂರ್ತಿ ಮೊ. 94826 72039ಕ್ಕೆ ಸಂಪರ್ಕಿಸಬಹುದು.

***

ಸಮಗ್ರ ತೋಟಗಾರಿಕಾ ಮಿಷನ್‌ ಅಡಿಯಲ್ಲಿ ಒಂದೊಂದು ತಾಲ್ಲೂಕಿಗೆ ಒಂದೊಂದು ಬೆಳೆಗೆ ನೆರವು ನೀಡಲಾಗಿದೆ. ಈ ಪ್ರಯೋಗ ಯಶಸ್ವಿಯೂ ಆಗಿದೆ.
–ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.