ADVERTISEMENT

ಬಾಲಕಾರ್ಮಿಕ ಪದ್ಧತಿ ತಡೆ ಬೀದಿನಾಟಕ

ಕೊಪ್ಪಳ ನಗರದಲ್ಲಿ ಜನಜಾಗೃತಿ ಆಂದೋಲನಕ್ಕೆ ಚಾಲನೆ; ‘ಕಳಿಸಬ್ಯಾಡವ್ವ ಕೆಲಸಕ್ಕ ನನ್ನ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 9:45 IST
Last Updated 15 ಫೆಬ್ರುವರಿ 2017, 9:45 IST
ಕೊಪ್ಪಳದಲ್ಲಿ ಮಂಗಳವಾರ ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಗೃತಿ ಆಂದೋಲನ ಉದ್ಘಾಟಿಸಿದ  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮಾತನಾಡಿದರು
ಕೊಪ್ಪಳದಲ್ಲಿ ಮಂಗಳವಾರ ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಗೃತಿ ಆಂದೋಲನ ಉದ್ಘಾಟಿಸಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮಾತನಾಡಿದರು   
ಕೊಪ್ಪಳ: ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಹೇಳಿದರು.
 
 ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಬಾಲಕಾರ್ಮಿಕ ಪದ್ಧತಿಯ ತಡೆಯಲು   ಬೀದಿನಾಟಕ ಮೂಲಕ ಜನಜಾಗೃತಿ ಆಂದೋಲನಕ್ಕೆ ನಗರದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಂಗಳವಾರ ಅವರು ಮಾತನಾಡಿದರು.
ಮಕ್ಕಳನ್ನು ಬಡತನದ ಕುಂಟು ನೆಪ ಹೇಳಿಕೊಂಡು ದುಡಿಮೆಗೆ ಕಳುಹಿಸುವ ಅನಿಷ್ಟ ವ್ಯವಸ್ಥೆ ನಮ್ಮ ಸಮಾಜದಲ್ಲಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದು ಹೆಚ್ಚಾಗಿದೆ. 
 
ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರ್ಖಾನೆ, ಉದ್ಯಮ, ಕೋಳಿಫಾರಂ, ಮನೆಕೆಲಸ, ಗ್ಯಾರೇಜ್, ಹೋಟೆಲ್ ಸೇರಿದಂತೆ ಯಾವುದೇ ಬಗೆಯ ಕೆಲಸಕ್ಕೆ ಸೇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.  ಅಂಥವರಿಗೆ ಜೈಲು ಶಿಕ್ಷೆಯ ಜತೆಗೆ ದಂಡ ವಿಧಿಸಲು ಕಾನೂನು ಅವಕಾಶ ಕಲ್ಪಿಸಿದೆ. 
 
ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ, ಶಾಲಾಬ್ಯಾಗ್, ಮಧ್ಯಾಹ್ನದ ಬಿಸಿಯೂಟ, ಉಚಿತವಾಗಿ ಸಮವಸ್ತ್ರ ನೀಡಿ ಉತ್ತೇಜಿಸುತ್ತಿದೆ. ಮಕ್ಕಳು ವಿದ್ಯಾವಂತರಾದರೆ, ಮುಂದಿನ ಅವರ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳಲಿದೆ. ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಅನೇಕ ಕಾರ್ಯಕ್ರಮ ಜಾರಿಗೊಳಿಸುತ್ತಿದೆ ಎಂದು ಅವರು ಹೇಳಿದರು.
 
 ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ಜಿಲ್ಲೆಯಲ್ಲಿ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ವಿವಿಧ ಕಲಾತಂಡಗಳು ತೆರಳಿ, ಬೀದಿನಾಟಕಗಳನ್ನು ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಲಿವೆ ಎಂದರು.
 
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ತಹಶೀಲ್ದಾರ್‌ ಕಚೇರಿಯ ಜಯಶ್ರೀ, ಅಂಗವಿಕಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಇದ್ದರು. ಶಿವಮೂರ್ತಿ ಮೇಟಿ ನೇತೃತ್ವದ ಚೇತನ ಸಾಂಸ್ಕೃತಿಕ ಕಲಾಸಂಘದ ವತಿಯಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ‘ಕಳಿಸಬ್ಯಾಡವ್ವ ಕೆಲಸಕ್ಕ ನನ್ನ’ ಬೀದಿನಾಟಕ ಪ್ರದರ್ಶನ ನಡೆಯಿತು.
 
* ಹದಿನಾಲ್ಕು ವರ್ಷದ ಕೆಳಗಿನ ಮಕ್ಕಳನ್ನು ಯಾವುದೇ ಬಗೆಯ ಕೆಲಸಕ್ಕೆ ಸೇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.
ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.