ADVERTISEMENT

ಬಿಜೆಪಿ, ಕಾಂಗ್ರೆಸ್‌ಗೆ ಸೆಡ್ಡುಹೊಡೆದ ಬಂಡಾಯ ಅಭ್ಯರ್ಥಿಗಳು

ಚುನಾವಣಾ ಕಣದಲ್ಲಿ ಉಳಿದ ತಂಗಡಗಿ ಬೆಂಬಲಿಗ, ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 9:22 IST
Last Updated 12 ಫೆಬ್ರುವರಿ 2016, 9:22 IST
ಕುಷ್ಟಗಿಯಲ್ಲಿ ಗುರುವಾರ ನಾಮಪತ್ರ ಹಿಂಪಡೆಯುವಂತೆ ತಾ.ಪಂ ಕ್ಷೇತ್ರದ ಅಭ್ಯರ್ಥಿಗೆ ಇತರೆ ಮುಖಂಡರು ದುಂಬಾಲು ಬಿದ್ದಿದ್ದು ಕಂಡುಬಂತು
ಕುಷ್ಟಗಿಯಲ್ಲಿ ಗುರುವಾರ ನಾಮಪತ್ರ ಹಿಂಪಡೆಯುವಂತೆ ತಾ.ಪಂ ಕ್ಷೇತ್ರದ ಅಭ್ಯರ್ಥಿಗೆ ಇತರೆ ಮುಖಂಡರು ದುಂಬಾಲು ಬಿದ್ದಿದ್ದು ಕಂಡುಬಂತು   

ಕುಷ್ಟಗಿ: ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಾಮಪತ್ರಗಳನ್ನು ಹಿಂದೆ ಪಡೆಯುವ ಅವಧಿ ಅಂತ್ಯಗೊಂಡಿದ್ದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಅಲ್ಲಲ್ಲಿ ಬಂಡಾಯದ ಬಿಸಿ ತಟ್ಟಿದೆ.

ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ಹನುಮೇಶ ನಾಯಕ ಅವರ ಸಹೋದರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಬೆಂಬಲಿಗ ಉಮೇಶ ನಾಯಕ್‌ ಮೆಣೆದಾಳ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುವ ಮೂಲಕ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಸೆಡ್ಡುಹೊಡೆದಿದ್ದಾರೆ.

ಉಮೇಶ ನಾಯಕ್ ನಾಮಪತ್ರ ಹಿಂದೆ ತೆಗೆಯಿಸುವಂತೆ ಕಾಂಗ್ರೆಸ್‌ ಅಭ್ಯರ್ಥಿ ಹನುಮಗೌಡ ಕಿಲಾರಟ್ಟಿ ಒತ್ತಾಯಿಸಿದ್ದರು. ಉಮೇಶ ಕಣದಲ್ಲಿ ಉಳಿದರೆ ತಂಗಡಗಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಈ ಕುರಿತು ವಿವರಿಸಿದ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಉಮೇಶ ನಾಯಕ್‌ ಕಣದಲ್ಲಿ ಉಳಿದಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೆವು. ಅವರೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳುವ ಮೂಲಕ ತಂಗಡಗಿ ಕಡೆಗೆ ಬೆರಳು ತೋರಿಸಿದರು.

ಬಿಜೆಪಿಗೆ ಪ್ರಹಾರ: ಟಿಕೆಟ್‌ ಹಂಚಿಕೆಯಲ್ಲಿನ ಅಸಮಾಧಾನದಿಂದ ಮೊದಲೇ ಕಂಗೆಟ್ಟಿರುವ ಬಿಜೆಪಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಂಡಾಯದ ಬಿಸಿ ತಟ್ಟಿದೆ. ಹನುಮನಾಳ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೆಡ್ಡು ಹೊಡೆದಿದ್ದ ಈರಣ್ಣ ಗಜೇಂದ್ರಗಡ ನಾಮಪತ್ರ ಹಿಂಪಡೆದಿದ್ದಾರೆ. ಆದೇ ರೀತಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೋಮಣ್ಣ ಇಂಗಳದಾಳ ಸಹ ನಾಮಪತ್ರ ಮರಳಿಪಡೆದಿದ್ದಾರೆ.

ಆದರೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದ ಶರಣಪ್ಪ ತಳ್ಳಿಕೇರಿ ಏಕಾಏಕಿ ನಾಮಪತ್ರ ಹಿಂದೆಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದು , ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲದಂತಾಗಿದೆ. ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಂಡಾಯ ಅಭ್ಯರ್ಥಿ ನೇಮಣ್ಣ ಮೇಲಸಕ್ರಿ ಅವರಿಗೆ ಅನಿವಾರ್ಯವಾಗಿ ಬಿಜೆಪಿ ಬೆಂಬಲ ಸೂಚಿಸಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವರೇ ಎಂದು ಪಕ್ಷದ ಮುಖಂಡರು ಹೇಳಿಕೆ ನೀಡಿದ್ದಾರೆ.

ತಮ್ಮ ಪತ್ನಿಗೆ ಟಿಕೆಟ್‌ ನೀಡದಿರುವುದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ ಮಾಜಿ ಅಧ್ಯಕ್ಷ ಅಮರೇಗೌಡ ಪಾಟೀಲ ಒತ್ತಡಕ್ಕೆ ಮಣಿಯದೆ ಪತ್ನಿ ಬಸವರಾಜೇಶ್ವರಿ ಪಾಟೀಲ ಅವರನ್ನು ಕೊರಡಕೇರಾ ಕ್ಷೇತ್ರದಲ್ಲಿ ಕಣದಲ್ಲಿ ಉಳಿಸುವ ಮೂಲಕ ಬಿಜೆಪಿಗೆ ಪ್ರಹಾರ ನೀಡಿದ್ದಾರೆ. ಬಸವರಾಜೇಶ್ವರಿ ಕಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವುದು ಬಿಜೆಪಿ ಜೊತೆಗೆ ಕಾಂಗ್ರೆಸ್‌ ಪಕ್ಷದಲ್ಲೂ ಆತಂಕ ಎದುರಾಗಿದ್ದು ಎರಡೂ ಹಾಲಿ ಮಾಜಿ ಶಾಸಕರು ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರಿದ್ದರೂ ಅಮರೇಗೌಡ ಪಾಟೀಲ ಒತ್ತಡಕ್ಕೆ ಮಣಿದಿಲ್ಲ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಮರೇಗೌಡ ಪಾಟೀಲ, ಪ್ರಮುಖ ರಾಷ್ಟ್ರೀಯ ಪಕ್ಷಗಳ ಮುಖಂಡರು ಪಕ್ಷೇತರ ಅಭ್ಯರ್ಥಿಯಾಗಿರುವ ತಮ್ಮ ಪತ್ನಿಯನ್ನು ಕಣದಿಂದ ಹಿಂದಕ್ಕೆ ಸರಿಸಲು ತಂತ್ರ ನಡೆಸುವ ಮೂಲಕ ತಮ್ಮ ಅಸ್ಥಿರತೆಯನ್ನು ಚುನಾವಣೆಗೆ ಮೊದಲೇ ಒಪ್ಪಿಕೊಂಡಿದ್ದಾರೆ ಎಂದು ಛೇಡಿಸಿದರು. ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದು, ತಮ್ಮ ಪತ್ನಿಯ ಗೆಲುವು ನಿಶ್ಚಿತ. ತಾವು ಕಣದಿಂದ ನಿವೃತ್ತಿಯಾಗುವುದಿಲ್ಲ. ವಿರೋಧಿಗಳ ವದಂತಿಗೆ ಮತದಾರರು ಕಿವಿಗೊಡಬಾರದು ಎಂದು ಹೇಳಿದರು.

ದೋಟಿಹಾಳ ತಾ.ಪಂ: ದೋಟಿಹಾಳ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಮಾಜಿ ಶಾಸಕ ಹಸನ್‌ಸಾಬ್‌ ದೋಟಿಹಾಳ ಅವರ ಪುತ್ರ ರೆಹಮಾನಸಾಬ್‌ ಕಾಂಗ್ರೆಸ್‌  ಅಭ್ಯರ್ಥಿಯಾಗಿದ್ದರೆ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರ ಕಟ್ಟಾ ಬೆಂಬಲಿಗ, ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ.ಅಸ್ಲಾಂ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.