ADVERTISEMENT

ಬೆಳೆ ಹಾನಿ: ದೊರೆಯದ ಪರಿಹಾರ

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:31 IST
Last Updated 23 ಮೇ 2017, 7:31 IST

ಕುಷ್ಟಗಿ: ತಾಲ್ಲೂಕಿನ ರೈತರಿಗೆ ಬೆಳೆಹಾನಿ ಪರಿಹಾರ ಸಮರ್ಪಕವಾಗಿ ಹಂಚಿಕೆಯಾಗಿಲ್ಲ ಎಂದು ರೈತರು ಸೋಮವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾಹಿತಿ ಪಡೆಯಲು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ತಹಶೀಲ್ದಾರ್‌ ಕಚೇರಿಗೆ ಬಂದಿದ್ದ ಅನೇಕ ರೈತರು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದರು.

‘ಮಳೆ ಇಲ್ಲ. ಭೀಕರ ಬರ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರ್ಕಾರ ರೈತರಿಗೆ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಈ ತಾಲ್ಲೂಕಿನಲ್ಲಿ ರೈತರ ಬ್ಯಾಂಕ್‌ ಖಾತೆಗಳಿಗೆ ಪರಿಹಾರ ಮೊತ್ತ ಜಮೆ ಮಾಡುವಾಗ ಅನ್ಯಾಯ ಮಾಡಿದ್ದಾರೆ.

ಎರಡು ಹೆಕ್ಟೆರ್‌ ಜಮೀನು ಹೊಂದಿದ ರೈತರಿಗೆ ₹10 ಸಾವಿರ ಪರಿಹಾರ ವಿತರಿಸುವ ಅವಕಾಶ ಇದ್ದರೂ ಬಹುತೇಕ  ರೈತರಿಗೆ ತೀರಾ ಕಡಿಮೆ ಪ್ರಮಾಣದಲ್ಲಿ ಪರಿಹಾರ  ಜಮೆಯಾಗಿದೆ. ಬೆಳೆ ಬೆಳೆಯದ ಅನರ್ಹರಿಗೆ ಅತಿ ಹೆಚ್ಚಿನ ಪರಿಹಾರ ನೀಡಿರುವುದರ ಹಿಂದೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈವಾಡ ಇದೆ’ ಎಂದು ಆರೋಪಿಸಿದರು.

ADVERTISEMENT

ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ ರೈತರು, ‘ತಾಲ್ಲೂಕಿನಲ್ಲಿ ಇನ್ನೂ ಶೇಕಡ 50ರಷ್ಟು ರೈತರಿಗೆ ಪರಿಹಾರ ದೊರಕಿಲ್ಲ. ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆಯಾಗಿಲ್ಲ. ರೈತರು ಅಗತ್ಯ ಮಾಹಿತಿ ನೀಡಿಲ್ಲ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಈಗಲಾದರೂ ಈ ಬಗ್ಗೆ ಮುತುವರ್ಜಿ ವಹಿಸಿ ಪರಿಹಾರ  ಜಮೆ ಮಾಡುವುದಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ವೈಜ್ಞಾನಿಕ ರೀತಿಯಲ್ಲಿ ಬೆಳೆಹಾನಿ ಪರಿಹಾರ ನಿಗದಿಪಡಿಸಿಲ್ಲ. ಅನರ್ಹರಿಗೆ ಹೆಚ್ಚಿನ ಪಾಲು ದೊರೆತಿದೆ. ತಾರತಮ್ಯ ನೀತಿಗೆ ಕಡಿವಾಣ ಹಾಕಬೇಕು ಎಂದು ರೈತ ಮುಖಂಡ ಆರ್‌.ಕೆ.ದೇಸಾಯಿ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಗ್ರೇಡ್‌ 2 ತಹಶೀಲ್ದಾರ್‌ ಶ್ರೀನಿವಾಸಮೂರ್ತಿ, ‘ತಾಲ್ಲೂಕಿನಲ್ಲಿ 45 ಸಾವಿರ ಅರ್ಹ ಹಿಡುವಳಿದಾರರು ಇದ್ದು, 22 ಸಾವಿರ ರೈತರಿಗೆ ಬೆಳೆಹಾನಿ ಪರಿಹಾರವನ್ನು ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗಿದೆ. ಶೀಘ್ರ ಉಳಿದ ಎಲ್ಲ ರೈತರಿಗೂ ಪರಿಹಾರ ಮೊತ್ತ ಜಮೆ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.

ರೈತರಾದ ಗಂಗಾಧರಯ್ಯ ಹಿರೇಮಠ, ಬಸನಗೌಡ ಮಾಲಿಪಾಟೀಲ, ಹಂಪಮ್ಮ ಶಂಕರಗೌಡ, ರವೀಂದ್ರ ಮೇಟಿ, ಮುದಿಬಸಪ್ಪ ಬನ್ನಟ್ಟಿ, ದೊಡ್ಡಪ್ಪ ಓತಗೇರಿ, ಈರಣ್ಣ ದಂಡಿನ, ಗೌಡಪ್ಪ ತಳವಾರ, ಮಹಾಲಿಂಗಪ್ಪ ಬನ್ನಟ್ಟಿ, ಶರಣಪ್ಪ ಕುರ್ನಾಳ, ರೈತ ಮುಖಂಡ ಆರ್‌.ಕೆ.ದೇಸಾಯಿ ಇದ್ದರು.

* * 

ಬ್ಯಾಂಕ್‌ಗಳಲ್ಲಿ ಬೇನಾಮಿ ವ್ಯಕ್ತಿಗಳು ತೆರೆದ ಖಾತೆಗಳಿಗೆ ಪರಿಹಾರ ಧನ ಜಮೆಯಾಗಿದ್ದು, ಆಧಾರ್‌ ಸಂಖ್ಯೆಯನ್ನೂ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಹನುಮಗೌಡ ಪಾಟೀಲ,
ಅಡವಿಭಾವಿ  ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.