ADVERTISEMENT

‘ಬೇಸಿಗೆ ಸಂಭ್ರಮ’ಕ್ಕೆ ಮಕ್ಕಳ ಕೊರತೆ

ಒಂದು ಕಡೆ ಶಿಬಿರ; ಮತ್ತೊಂದು ಕಡೆಯಲ್ಲಿ ಬಿಸಿಯೂಟ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:14 IST
Last Updated 22 ಏಪ್ರಿಲ್ 2017, 5:14 IST
ಹನುಮಸಾಗರ: 150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ಬೇಸಿಗೆ ಸಂಭ್ರಮ ಆಯೋಜಿಸಿದೆ. ಆದರೆ ಶಿಬಿರಕ್ಕೆ ಮಕ್ಕಳು ಬಾರದ ಕಾರಣ ಬಹುತೇಕ ಕೇಂದ್ರಗಳು ಭಣಗುಡುತ್ತಿವೆ. ಬೆರಳೆಣಿಕೆ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
 
‘ಹೆಚ್ಚಿನ ಪ್ರಮಾಣದ ಬಿಸಲು, ಶಾಲೆಗಳಲ್ಲಿ ಕುಡಿಯುವ ನೀರಿನ ಕೊರತೆ, ಬೇಸಿಗೆ ಸಂಭ್ರಮ ಆಯೋಜಿಸಿರುವ ಶಾಲೆಗಳಲ್ಲಿಯೇ ಬಿಸಿಯೂಟದ ವ್ಯವಸ್ಥೆ ಇಲ್ಲದಿರುವ ಕಾರಣಗಳಿಂದ ಮಕ್ಕಳ ಕೊರತೆ ಉಂಟಾಗಿರಬಹುದು’ ಎನ್ನುತ್ತಾರೆ ಶಿಕ್ಷಕರು.
 
5 ವಾರ ನಡೆಯಲಿರುವ ಶಿಬಿರದಲ್ಲಿ ‘ಸ್ವಲ್ಪ ಓದು– ಸ್ವಲ್ಪ ಮೋಜು’ ಎಂಬ ಹೆಸರಿನಲ್ಲಿ ಪಠ್ಯ ಬೋಧಿಸಲಾಗುತ್ತಿದೆ. ಮೊದಲ ವಾರ ‘ಕುಟುಂಬ’, ಎರಡನೇ ವಾರ ‘ನೀರು’, ಮೂರನೇ ವಾರ ‘ಆಹಾರ’, ನಾಲ್ಕನೇ ವಾರ ‘ಆರೋಗ್ಯ ಮತ್ತು ನೈರ್ಮಲ್ಯ’ ಹಾಗೂ ಐದನೇ ವಾರ ‘ಪರಿಸರ’ ವಿಷಯ ಕುರಿತು ಮಕ್ಕಳಿಗೆ ಬೋಧನೆ ಮಾಡಲಾಗುವುದು. ವಾರದಲ್ಲಿ ಐದು ದಿನ ಬೋಧನೆ, ಆರನೇ ದಿನ ಹಾಡು, ಆಟ, ಕತೆ ಹೇಳುವುದು, ಭಾಷಣ, ನೃತ್ಯ ಪ್ರದರ್ಶನ, ಚಿತ್ರಕಲೆ ಮತ್ತು ನಾಟಕ ಮಾಡಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. 
 
ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ಎರಡು– ಮೂರು ಶಾಲೆಗಳನ್ನು ಸೇರಿಸಿ ಬಿಸಿಯೂಟ ಕೇಂದ್ರ ತೆರೆಯಲಾಗಿದ್ದು, ಊಟದ ಸಮಯಕ್ಕೆ ಮಕ್ಕಳು ಆಯಾ ಕೇಂದ್ರಕ್ಕೆ ಹೋಗುತ್ತಿದ್ದಾರೆ. 
 
‘ಮಕ್ಕಳು ರಜೆಯ ಮನಸ್ಥಿತಿಯಲ್ಲೇ ಇರುತ್ತಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ‘ಬೇಸಿಗೆ ಸಂಭ್ರಮ’ವನ್ನು ಕೈಬಿಟ್ಟು ಜೂನ್‌ನಲ್ಲಿ ನಡೆಸುವ ‘ಸೇತುಬಂಧ’ ಕಾರ್ಯಕ್ರಮದ ಜೊತೆ ವಿಲೀನ ಮಾಡಬೇಕು’ ಎಂದು ಶಿಕ್ಷಕರು ಒತ್ತಾಯಿಸಿದ್ದರು.
 
‘ಬೇಸಿಗೆ ಸಂಭ್ರಮ’ ಶಿಬಿರ ನಡೆಯುತ್ತಿರುವ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆ ಮಾಡಿಲ್ಲ. ಅದೇ ಶಾಲೆಯಲ್ಲಿ ಬಿಸಿಊಟದ ವ್ಯವಸ್ಥೆ ಮಾಡಿದ್ದರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿತ್ತು’ ಎಂದು ಪಾಲಕ  ಮಹಾಂತೇಶ ಗೌಡರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.