ADVERTISEMENT

ಮಕ್ಕಳ ಹಕ್ಕು ಸಂರಕ್ಷಣೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:06 IST
Last Updated 12 ಜನವರಿ 2017, 11:06 IST

ಕೊಪ್ಪಳ: ಬಾಲ್ಯ ವಿವಾಹ ಪದ್ಧತಿ ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಯುನಿಸೆಫ್ - ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಅಡಿಯಲ್ಲಿ ಈಚೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆ ಕುರಿತ  ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 

ಮುಖ್ಯಶಿಕ್ಷಕರು ಬಾಲ್ಯ ವಿವಾಹ ನಿಷೇಧಾಧಿಕಾರಿಗಳೂ ಆಗಿದ್ದು, ಅದನ್ನು ತಡೆಯುವಲ್ಲಿ ಮಹತ್ವದ ಪಾತ್ರವಹಿಸಬೇಕು. ಬಾಲ್ಯ ವಿವಾಹವಾದ ಪರಿಣಾಮವಾಗಿ ಗರ್ಭಕೋಶದ ಸಮಸ್ಯೆ, ಗರ್ಭಕೋಶ ಅಥವಾ ಸ್ತನ ಕ್ಯಾನ್ಸರ್ ಸಮಸ್ಯೆಗಳನ್ನು ಶೋಷಿತ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದಾರೆ. ಶಿಶು ಮರಣ ಅಥವಾ ತಾಯಿ ಮರಣದ ಪ್ರಕರಣಗಳು ಹೆಚ್ಚಾಗಲಿವೆ. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಬಿಡಬಾರದು ಎಂದರು.

ಉಪವಿಭಾಗಾಧಿಕಾರಿ ಗುರುಪ್ರಸಾದ ಹೆಗ್ಡೆ ಮಾತನಾಡಿ, ಹಕ್ಕು ಆಧಾರಿತ ಸಮುದಾಯದಲ್ಲಿ ನಾವು ಮತ್ತು ನಮ್ಮ ಕುಟುಂಬದ ಸದಸ್ಯರು ಮಾತ್ರ ಮಾನವ ಹಕ್ಕುಗಳನ್ನು ಅನುಭವಿಸುತ್ತಿದ್ದು ಬೇರೆಯವರ ಬಗ್ಗೆ ನಿರ್ಲಕ್ಷ್ಯ ತೋರಬಾರದು.  ನಾವೆಲ್ಲರೂ ಮಕ್ಕಳ ಹಕ್ಕುಗಳಿಗೆ ತೊಂದರೆಯಾಗುತ್ತಿದ್ದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ಜಿ.ರಾಮತ್ನಾಳ ಮಾತನಾಡಿ, ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ಪೋಷಣೆ) ಕಾಯ್ದೆ-2015ರ ಅಡಿಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಆರೈಕೆ ಮತ್ತು ಪೋಷಣೆ ಅವಶ್ಯವಿರುವ ಮಕ್ಕಳಿಗೆ ಪುನರ್ವಸತಿ ನೀಡುವ ಅಧಿಕಾರ ಹೊಂದಿದೆ. ಆದ್ದರಿಂದ ಆರೈಕೆ ಮತ್ತು ಪೋಷಣೆ ಅವಶ್ಯವಿರುವ ಮಗುವನ್ನು ಸಮಿತಿಯ ಮುಂದೆ ಹಾಜರುಪಡಿಸಬಹುದು. ಅಥವಾ ಹತ್ತಿರದ ಪೊಲಿಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಅವರನ್ನು ಮಕ್ಕಳ ಕಲ್ಯಾಣಧಿಕಾರಿ ಎಂದು ನೇಮಿಸಿದ್ದು ಅವರ ಮುಂದೆ ಹಾಜರುಪಡಿಸಬಹುದು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರೋಹಿಣಿ ಕೊಟಗಾರ ಅಧ್ಯಕ್ಷತೆ ವಹಿಸಿದ್ದರು. ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್, ತರಬೇತಿ ಸಂಯೋಜಕ ಹರೀಶ ಜೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.