ADVERTISEMENT

ಮದಲಗಟ್ಟಿ ಮಾದರಿ ಸರ್ಕಾರಿ ಶಾಲೆ

ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುತ್ತಿರುವ ಶಿಕ್ಷಕರು; ಗ್ರಾಮಸ್ಥರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 7:43 IST
Last Updated 8 ಫೆಬ್ರುವರಿ 2017, 7:43 IST
ಕುಷ್ಟಗಿ ತಾಲ್ಲೂಕು ಮದಲಗಟ್ಟಿ ಸರ್ಕಾರಿ ಶಾಲೆ ಆವರಣದಲ್ಲಿ ಮಕ್ಕಳು ಮತ್ತು ಶಿಕ್ಷಕರು ಕೆಲಸದಲ್ಲಿ ನಿರತರಾಗಿರುವುದು
ಕುಷ್ಟಗಿ ತಾಲ್ಲೂಕು ಮದಲಗಟ್ಟಿ ಸರ್ಕಾರಿ ಶಾಲೆ ಆವರಣದಲ್ಲಿ ಮಕ್ಕಳು ಮತ್ತು ಶಿಕ್ಷಕರು ಕೆಲಸದಲ್ಲಿ ನಿರತರಾಗಿರುವುದು   

ಕುಷ್ಟಗಿ: ಇಲ್ಲಿನ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲಾಗುತ್ತಿದೆ. ಯಾವ ವಿದ್ಯಾರ್ಥಿಯೂ ಶಾಲೆಯಿಂದ ಹೊರಗೆ ಉಳಿದ  ಉದಾಹರಣೆ ಇಲ್ಲ. ಎಲ್ಲ ರೀತಿಯಿಂದ ಮುಂಚೂಣಿಯಲ್ಲಿರುವ ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಿಲ್ಲೆಯ ಮಾದರಿ ಶಾಲೆಗಳಲ್ಲಿ ಒಂದು.

ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ, ನೈತಿಕ ಭವಿಷ್ಯದ ಬಗ್ಗೆ ಶಿಕ್ಷಕರಿಗೆ ಎಲ್ಲಿಲ್ಲದ ಕಾಳಜಿ ಇದೆ. ಹಾಗಾಗಿ  ಪಾಲಕರು ಮತ್ತು ಗ್ರಾಮಸ್ಥರಿಗೆ ಶಾಲೆಯ ಬಗ್ಗೆ ಹೆಚ್ಚಿನ ಅಭಿಮಾನ. ಶೈಕ್ಷಣಿಕ ಅಭಿವೃದ್ಧಿ ವಿಷಯಕ್ಕೆ ಬಂದರೆ ಗ್ರಾಮಸ್ಥರು ಪೂರ್ಣ ಸಹಕಾರ ನೀಡುತ್ತಾರೆ. ಭವಿಷ್ಯದ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕುವುದಕ್ಕೆ ಪೂರಕವಾಗಿ ಮಕ್ಕಳನ್ನು ಸಜ್ಜುಗೊಳಿಸುವಲ್ಲಿ ಈ ಶಾಲೆ ಶಿಕ್ಷಕರ ಪ್ರಯತ್ನ ಜನರ ಮೆಚ್ಚುಗೆ ಪಡೆದಿದೆ.

ಶಾಲೆಯ ಆವರಣದಲ್ಲಿ ಬೆಳೆದು ನಿಂತಿರುವ ಹಚ್ಚ ಹಸಿರಿನಿಂದ ಕಂಗೊಳಿಸುವ ಗಿಡ ಮರ ಬಳ್ಳಿಗಳಲ್ಲಿ ಹಕ್ಕಿಗಳ ಇಂಚರದ ಜೊತೆಗೆ ಮಕ್ಕಳ ಕಲರವ ಕೇಳುತ್ತದೆ. ಮಕ್ಕಳ ಪಾಲಿಗೆ ಶಾಲೆ ಆಕರ್ಷಣೆಯ ತಾಣ ಎನ್ನುತ್ತಾರೆ ಗ್ರಾಮಸ್ಥರು.

5ನೇ ತರಗತಿವರೆಗಿನ ಮಕ್ಕಳ ಸಂಖ್ಯೆ 78. ಗೈರು ಹಾಜರಿ ಮಾತಿಲ್ಲ. ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇದು ಖಾಸಗಿ ಶಾಲೆಗೆ ಸೆಡ್ಡು ಹೊಡೆಯುತ್ತಿದೆ. ಮಕ್ಕಳಿಗೆ ಕಲಿಸುವ ಹಂಬಲದಿಂದ ಶಿಕ್ಷಕರು ಶಾಲೆಗೆ ಬರುತ್ತಾರೆ ಎನ್ನುತ್ತಾರೆ ಶಾಲೆ ಎಸ್‌ಡಿಎಂಸಿ ಸದಸ್ಯ ಹನುಮಗೌಡ ಮಾಲಿಪಾಟೀಲ.

ಶಾಲೆ ಮತ್ತು ಶೈಕ್ಷಣಿಕ ಅಭಿವೃದ್ಧಿ ಆಯಾ ಶಾಲೆಗಳ ಶಿಕ್ಷಕರ ಪರಸ್ಪರ ಸಮನ್ವಯತೆ ಅವಲಂಬಿಸಿರುತ್ತದೆ. ಗ್ರಾಮಸ್ಥರೊಂದಿಗೆ ಅವಿನಾಭಾವ ಸಂಬಂಧಹೊಂದಿರುವ ಮುಖ್ಯಶಿಕ್ಷಕ ಗುರಾಚಾರ ಆಶ್ರೀತ್‌, ಸಹ ಶಿಕ್ಷಕರಾದ ಮಂಜಪ್ಪ ಪೂಜಾರ, ಶಿಕ್ಷಕಿ ಗೀತಾಬಾಯಿ ದೇವಾಂಗಮಠ ಅವರ ಚಿತ್ತ ಮಕ್ಕಳ ಭವಿಷ್ಯದತ್ತ ನೆಟ್ಟಿರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಶಿಕ್ಷಕರಿಗೆ ಗುಣಾತ್ಮಕ ಶಿಕ್ಷಣದ ಪ್ರಗತಿ ಅಷ್ಟೇ ಮುಖ್ಯ. ವಿಶೇಷ ಪಾಠಗಳನ್ನು ನಡೆಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸುತ್ತಿರುತ್ತಾರೆ. ವಿವಿಧ ವಸತಿ ಶಾಲೆಗಳಲ್ಲಿ ಇಲ್ಲಿಯ ಮಕ್ಕಳು ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಗಣಿತ ಮತ್ತಿತರೆ ವಿಷಯಗಳಲ್ಲಿ ಮಕ್ಕಳ ಬುದ್ಧಿಗೆ ಸಾಣೆಹಿಡಿಯಲಾಗುತ್ತದೆ. ಪುಟ್ಟ ಗ್ರಾಮದ ಮಕ್ಕಳು ತಾಲ್ಲೂಕು, ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಪಾಠಗಳಲ್ಲದೇ ಮಕ್ಕಳಿಗೆ ಜೀವನದಲ್ಲಿ ಅನುಸರಿಸಬೇಕಾದ ನೈತಿಕ ಮೌಲ್ಯಗಳನ್ನು ತಿಳಿಸಿಕೊಡಲಾಗುತ್ತಿದೆ. ಮಕ್ಕಳು ಸುಳ್ಳು ಹೇಳುವುದು, ಕಳವು ಮಾಡುವುದು ದೂರದ ಮಾತು.

ಶಾಲೆ ಆವರಣದಲ್ಲಿ ಹಣ ಇತರೆ ಯಾವುದೇ ವಸ್ತು ಕಣ್ಣಿಗೆ ಬೀಳಲಿ ಕಿಸೆಗೆ ಇಳಿಸಿಕೊಳ್ಳದೆ ಶಿಕ್ಷಕರಿಗೆ ಒಪ್ಪಿಸುತ್ತಾರೆ. ಶಾಲಾ ಆವರಣದ ಗಿಡಮರ, ಬಳ್ಳಿಗಳ ಆರೈಕೆ ಮಾಡುವ ಮಕ್ಕಳಲ್ಲಿ ಪರಿಸರ ಪ್ರಜ್ಞೆಯೂ ಇದೆ. ಶಾಲೆ ಕಿರಿದಾದರೂ ಹಿರಿಮೆ ದೊಡ್ಡದು ಎನ್ನುತ್ತಾರೆ ಗ್ರಾಮಸ್ಥ ಭೀಮನಗೌಡ ಮಾಲಿಪಾಟೀಲ.
-ನಾರಾಯಣರಾವ ಕುಲಕರ್ಣಿ

*
ಮಕ್ಕಳಿಗೆ ನೈತಿಕ ಪಾಠ ದೊರೆಯುತ್ತಿದೆ. ಇಲ್ಲಿನ ಶಾಲೆಯ ಶಿಕ್ಷಕರು ಗಡಿಯಾರ ನೋಡಿಕೊಂಡು, ಗಂಟೆ ಹೊಡೆದು ಮನೆಗೆ ಹೋಗುವವರಲ್ಲ.
-ಹನುಮಗೌಡ,
ಎಸ್‌ಡಿಎಂಸಿ ಸದಸ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.