ADVERTISEMENT

ಮಿಂಚಿದ ಸಂಗಣ್ಣ, ಚುಚ್ಚಿದ ಸಿದ್ದರಾಮಯ್ಯ...

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 7:00 IST
Last Updated 23 ಸೆಪ್ಟೆಂಬರ್ 2017, 7:00 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಸಚಿವ ಬಸವರಾಜ ರಾಯರಡ್ಡಿ, ಶಾಸಕರಾದ ಇಕ್ಬಾಲ್‌ ಅನ್ಸಾರಿ, ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಳ ಇದ್ದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಸಚಿವ ಬಸವರಾಜ ರಾಯರಡ್ಡಿ, ಶಾಸಕರಾದ ಇಕ್ಬಾಲ್‌ ಅನ್ಸಾರಿ, ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಳ ಇದ್ದರು   

ಕೊಪ್ಪಳ: ರಾಜ್ಯ ಸರ್ಕಾರದ ಸಾಧನೆಗಳು, ಮುಂದಿನ ಚುನಾವಣೆಯ ಪೂರ್ವಸಿದ್ಧತಾ ವೇದಿಕೆಯಾಗಿ ಹಮ್ಮಿಕೊಂಡಿದ್ದ ಫಲಾನುಭವಿಗಳ ಸಮಾವೇಶದಲ್ಲಿ ಕಾಂಗ್ರೆಸ್‌ - ಬಿಜೆಪಿ ಕಾರ್ಯಕ್ರಮಗಳ ಬಗೆಗೆ ಪರಸ್ಪರ ಹೇಳಿಕೊಳ್ಳುವ, ಚುಚ್ಚುವ ವಾಗ್ವೈಖರಿ, ಅಭಿನಯ ಇತ್ಯಾದಿ ಪ್ರದರ್ಶನಗಳ ಮೇಲಾಟವೇ ನಡೆಯಿತು.

ಕಾರ್ಯಕ್ರಮದುದ್ದಕ್ಕೂ ಶಾಸಕರು, ಸಚಿವರು ಎಲ್ಲರೂ ಸಿದ್ದರಾಮಯ್ಯ ಅವರ ಗುಣಗಾನ ಮಾಡಿದರು. ಅನ್ನಭಾಗ್ಯ, ಕೃಷಿ ಭಾಗ್ಯ ಹೀಗೆ ಹಲವು ಯೋಜನೆಗಳನ್ನು ಕೊಂಡಾಡಿದರು.

ಇದು ಸಂಸದ ಸಂಗಣ್ಣ ಕರಡಿ ಅವರಿಗೆ ಇರಿಸುಮುರುಸು ತಂದಿತು. ತಮ್ಮ ಸರದಿ ಬಂದಾಗ ಮಾತನಾಡಿದ ಸಂಗಣ್ಣ, ಅನ್ನಭಾಗ್ಯ ಯೋಜನೆಗೆ ಅನುದಾನ ಕೇಂದ್ರ ಸರ್ಕಾರದಿಂದ ಬರುತ್ತದೆ. ಗಂಗಾವತಿ ಸಮೀಪದ ಕಡೆಬಾಗಿಲು ಸೇತುವೆ, ತಳಕಲ್‌ನಲ್ಲಿ ನಿರ್ಮಾಣವಾಗುತ್ತಿರುವ ಎಂಜಿನಿಯರಿಂಗ್‌ ಕಾಲೇಜು, ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ನಮ್ಮ ಅವಧಿಯಲ್ಲಿ ಚಾಲನೆ ನೀಡಿ ಅನುದಾನ ಮೀಸಲಿಟ್ಟಿದ್ದೆವು. ಇದ್ಯಾವುದನ್ನೂ ಗುರುತಿಸುವ ಅಥವಾ ಹೆಸರು ಹೇಳುವ ಪ್ರಯತ್ನ ನಡೆಯಲೇ ಇಲ್ಲ.

ADVERTISEMENT

ಬಸವರಾಜ ರಾಯರಡ್ಡಿ ಅವರು ಹಲವು ಬಾರಿ ಗೆದ್ದು ಸಂಸದ, ಸಚಿವರು ಆಗಿದ್ದಾರೆ. ಹಾಗಿದ್ದರೂ ಯಲಬುರ್ಗಾ ಭಾಗಕ್ಕೆ ಇನ್ನೂ ನೀರಾವರಿ ಆಗಿಲ್ಲ. ಕುಷ್ಟಗಿ ಭಾಗಕ್ಕೂ ನೀರಾವರಿ ಆಗಿಲ್ಲ. ಕೆರೆ ತುಂಬಿಸುವ ಯೋಜೆನಗೆ ಹಿಂದಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ಅಂದಿನ ವಿಧಾನ ಪರಿಷತ್‌ ಸದಸ್ಯ ಹಾಲಪ್ಪಾಚಾರ್‌ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಾಗಿ ನಾಲ್ಕು ವರ್ಷ ಕಳೆದರೂ ಈ ಸರ್ಕಾರ ಯೋಜನೆಯನ್ನು ಮುಂದುವರಿಸಲೇ ಇಲ್ಲ.

ಕೃಷ್ಣಾ ಬಿ. ಸ್ಕೀಂ ಅಡಿ ಅಣೆಕಟ್ಟೆಯ ಎತ್ತರ ಹೆಚ್ಚಿಸಬೇಕಿತ್ತು ಅದ್ಯಾವುದೂ ಆಗಲಿಲ್ಲ. ರಾಜ್ಯದ ಅರ್ಥವ್ಯವಸ್ಥೆ ಕುಸಿದಿದೆ ಎಂದು ಸಕಾರಾತ್ಮಕ ಧಾಟಿಯಲ್ಲೇ ಸಿದ್ದರಾಮಯ್ಯ ಅವರ ಕಾಲೆಳೆದರು. 

ಇಡೀ ಮಾತು ಆಲಿಸಿದ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಒಂದೊಂದಾಗಿ ಪ್ರತ್ಯುತ್ತರ ನೀಡಿದರು. 'ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ನಮ್ಮ ಅವಧಿಯಲ್ಲೇ ಶಂಕು ಸ್ಥಾಪನೆಗೊಂಡು ಉದ್ಘಾಟನೆಯಾಗಿದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರದ ಅನುದಾನವಿದೆ ನಿಜ. ಆದರೆ, ಅದಕ್ಕೂ ಮೊದಲು ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್‌ ಅವರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು ಎಂದು ಆಲೋಚಿಸಿ 2004-05ರ ಆರ್ಥಿಕ ವರ್ಷದಲ್ಲಿ 6 ಮೆಡಿಕಲ್‌ ಕಾಲೇಜುಗಳನ್ನು ಮಂಜೂರು ಮಾಡಿಸಿದ್ದೆ. ಇದೀಗ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. ಮುಂದಿನ ವರ್ಷದ ವೇಳೆಗೆ ರಾಜ್ಯದಲ್ಲಿ ಒಟ್ಟು 23 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಅಸ್ತಿತ್ವದಲ್ಲಿರಲಿವೆ.

ಇದೆಲ್ಲಾ ನಿಮಗೇಕೆ (ಬಿಜೆಪಿಯವರಿಗೆ) ಹೊಳೆಯಲಿಲ್ಲ? ನಿಮ್ಮ ಅವಧಿಯಲ್ಲಿ 5 ವರ್ಷಗಳಲ್ಲಿ ಒಟ್ಟು ರೂ 18 ಸಾವಿರ ಕೋಟಿ ಮೊತ್ತವನ್ನು ನೀರಾವರಿಗಾಗಿ ಬಳಸಿದಿರಿ. ನಮ್ಮ ಸರ್ಕಾರ ತನ್ನ ಅವಧಿಯೊಳಗೆ ಒಟ್ಟು ₹ 60 ಸಾವಿರ ಕೋಟಿ ಅನುದಾನವನ್ನು ನೀರಾವರಿಗಾಗಿ ಖರ್ಚು ಮಾಡಲಿದೆ ಎಂದರು.

ನಾವು ಎಲ್ಲ ಜಾತಿ ಧರ್ಮದವರಿಗೆ ಸಮಾನ ಆದ್ಯತೆ ಕೊಟ್ಟು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿಯ ಹೆಸರಿಟ್ಟಿದ್ದೇವೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಇರಿಸಿದ್ದೇವೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದೇವೆ. ಹೇಮರಡ್ಡಿ ಮಲ್ಲಮ್ಮ, ಕಿತ್ತೂರುರಾಣಿ ಚನ್ನಮ್ಮ ಜಯಂತಿ ಆಚರಿಸಿದ್ದೇವೆ. ಇದೆಲ್ಲಾ ಚುನಾವಣಾ ತಂತ್ರ ಎಂದೇ ಆರೋಪಿಸಿದ್ದೀರಿ. ಹಾಗೆಂದೇ ಇಟ್ಟುಕೊಳ್ಳೋಣ. ಹಾಗಿದ್ದರೆ ಇದನ್ನೆಲ್ಲಾ ನೀವೇಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, ಇಷ್ಟೊಂದು ಜನಸಾಗರ ಇಲ್ಲಿ ಸೇರಿದ್ದಾರೆ ಎಂದರೆ ಈ ಸರ್ಕಾರದ ಮೇಲೆ ಅಷ್ಟೊಂದು ವಿಶ್ವಾಸ ಇಟ್ಟಿದ್ದಾರೆ ಎಂದು ಅರ್ಥ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಪ್ರಾಸ್ತಾವಿಕ ಮಾತನಾಡಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌, ಶಾಸಕರಾದ ಶಿವರಾಜ ತಂಗಡಗಿ, ದೊಡ್ಡನಗೌಡ ಪಾಟೀಲ್‌, ಇಕ್ಬಾಲ್‌ ಅನ್ಸಾರಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೆಖರ ಹಿಟ್ನಾಳ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಕೆ.ಬಸವರಾಜ ಹಿಟ್ನಾಳ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.