ADVERTISEMENT

ಮೂರು ದಿನದಲ್ಲಿ ಒತ್ತುವರಿ ತೆರವು

ಕೊಪ್ಪಳ: ನಗರಸಭೆ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ಪರಮೇಶ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:24 IST
Last Updated 22 ಏಪ್ರಿಲ್ 2017, 5:24 IST
ಮೂರು ದಿನದಲ್ಲಿ ಒತ್ತುವರಿ ತೆರವು
ಮೂರು ದಿನದಲ್ಲಿ ಒತ್ತುವರಿ ತೆರವು   
ಕೊಪ್ಪಳ: ನಗರಸಭೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಫುಟ್‌ಪಾತ್‌ಗಳನ್ನು ಮೂರು ದಿನಗಳ ಒಳಗೆ ತೆರವುಗೊಳಿಸುವುದಾಗಿ ಪೌರಾಯುಕ್ತ ಪರಮೇಶ್‌ ಹೇಳಿದರು.
 
ಶುಕ್ರವಾರ ಇಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಸದಸ್ಯರಿಗೆ ಭರವಸೆ ನೀಡಿದರು. 
 
‘ನಗರಸಭೆಯ ನಿವೇಶನ, ಉದ್ಯಾನ ಸಾಕಷ್ಟು ಕಡೆಗಳಲ್ಲಿ ಒತ್ತುವರಿ ಆಗಿದೆ. ಒತ್ತುವರಿ ತೆರವು ಬಗ್ಗೆ ಸಾಮಾನ್ಯ ಸಭೆಗಳಲ್ಲಿ ಸಾಕಷ್ಟು ಬಾರಿ ಚರ್ಚೆ ಆಗಿ ಸರ್ವಾನುಮತದ ನಿರ್ಣಯವೂ ಆಗಿದೆ. ಹಾಗಿದ್ದರೂ ಪೌರಾಯುಕ್ತರು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸದಸ್ಯರು ಹರಿಹಾಯ್ದರು.
 
ಬಿರುಸಿನ ಚರ್ಚೆ ಮಧ್ಯೆ ಮಾತನಾಡಿದ ಪೌರಾಯುಕ್ತ, ‘ನಾನು ತೆರವುಗೊಳಿಸಲು ಮುಂದಾದಾಗ ಮೂವರು ಅಡ್ಡಿಪಡಿಸಿದ್ದಾರೆ. ಅವರ ಹೆಸರನ್ನು ಹೇಳಲಾಗದು’ ಎಂದು ಪರೋಕ್ಷವಾಗಿ ಸದಸ್ಯರೇ ಅಡ್ಡಿಪಡಿಸುತ್ತಿರುವ ಬಗ್ಗೆ ತಿರುಗೇಟು ನೀಡಿದರು.
 
‘ಏನೇ ಆದರೂ ಪೌರಾಯುಕ್ತರು ತಮ್ಮ ಕರ್ತವ್ಯ ಪಾಲನೆಯಲ್ಲಿ ಅಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಅಧ್ಯಕ್ಷ ಮಹೇಂದ್ರ ಛೋಪ್ರಾ ಅಸಮಾಧಾನ ವ್ಯಕ್ತಪಡಿಸಿದರು.
 
‘ನಗರಸಭೆಯ ನಿವೃತ್ತ ಅಧಿಕಾರಿಯೊಬ್ಬರು ಉದ್ಯಾನ ಪ್ರದೇಶವನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಅದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?’ ಎಂದು ಪೌರಾಯುಕ್ತರನ್ನು ಛೋಪ್ರಾ ಪ್ರಶ್ನಿಸಿದರು. 
 
ಪ್ರತಿಕ್ರಿಯಿಸಿದ ಪೌರಾಯುಕ್ತ, ಅವರಿಗೆ ಈ ಹಿಂದೆಯೇ ಹಕ್ಕು ಪತ್ರ ನೀಡಿರುವುದಾಗಿ ಹೇಳಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲ ದಾಖಲೆಗಳನ್ನು ಹಾಜರುಪಡಿಸುವುದಾಗಿ ಹೇಳಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. 
 
ಭೂಪರಿವರ್ತನೆ, ಹಕ್ಕುಪತ್ರ ನೀಡಿಕೆಗೆ ಕಂದಾಯ ನಿರೀಕ್ಷಕರು ಹಣ ಪಡೆದು ಬೇಕಾಬಿಟ್ಟಿ ಸಹಿ ಮಾಡುತ್ತಾರೆ ಎಂದು ಸದಸ್ಯರೊಬ್ಬರು ಆರೋಪಿಸಿದರು. ಈ ಆರೋಪವನ್ನು ಕಂದಾಯ ನಿರೀಕ್ಷಕರು ಅಲ್ಲಗಳೆದರು.
 
‘ಇನ್ನು ಮುಂದೆ ಭೂಪರಿವರ್ತನೆ, ಪರಭಾರೆ, ಕಟ್ಟಡ ನಿರ್ಮಾಣ ಪರವಾನಗಿ ನೀಡಬೇಕಾದರೂ ಆಯಾ ವಾರ್ಡ್‌ನ ಸದಸ್ಯರ ಗಮನಕ್ಕೆ ತಂದು ಅವರ ಸಹಿ ಪಡೆದು ಅನುಮತಿ ನೀಡಬೇಕು’ ಎಂದು ಛೋಪ್ರಾ ಹೇಳಿದರು.
 
ನಗರಾಭಿವೃದ್ಧಿ ಯೋಜನೆ ಸಂಬಂಧಿಸಿದ ಕರಡುನಕ್ಷೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪ್ರದರ್ಶಿಸಿ ಸಲಹೆ, ಸೂಚನೆ, ಆಕ್ಷೇಪ ಇದ್ದಲ್ಲಿ ಸಲ್ಲಿಸಲು ಕೋರಿದರು. ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ ಬನ್ನಿಕೊಪ್ಪ ಇದ್ದರು.
***
ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ 
ಪ್ರಾಣೇಶ್‌ ಮಾದಿನೂರು, ಮೌಲಾಹುಸೇನ್‌ ಜಮೇದಾರ್‌, ಪ್ರಾಣೇಶ್‌ ಮಹೇಂದ್ರಕರ್‌, ರೇಣುಕಾ ಕಲ್ಲಾಕ್ಷಪ್ಪ, ನಿರ್ಮಲಾ ಕಾರಟಗಿ, ಸುವರ್ಣಾ ಬಸವ ರಾಜ, ಅನಿಕೇತ್‌ ಅಗಡಿ ಆಯ್ಕೆಯಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.