ADVERTISEMENT

ಮೂಲಸೌಕರ್ಯ ವಂಚಿತ ಚಿಕ್ಕತೆಮ್ಮಿನಾಳ

ಶುಧ್ಧ ನೀರಿನ ಕೊರತೆ , ಕೂಲಿಕಾರರಿಗೆ ಸಿಗದ ಉದ್ಯೋಗ ಖಾತ್ರಿ ಕೆಲಸ

ಕೆ.ಶರಣಬಸವ ನವಲಹಳ್ಳಿ
Published 11 ಜುಲೈ 2017, 7:51 IST
Last Updated 11 ಜುಲೈ 2017, 7:51 IST

ತಾವರಗೇರಾ: ಇಲ್ಲಿಗೆ ಸಮೀಪದ ಚಿಕ್ಕೆ ತೆಮ್ಮಿನಾಳ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ ಸೌಲಭ್ಯಗಳಿಲ್ಲದೆ ಜನರು ತೊಂದರೆ ಅನುಭವಿಸಬೇಕಾಗಿದೆ.

ಮೆಣೆದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿಕ್ಕ ತೆಮ್ಮಿನಾಳ ಗ್ರಾಮ ಬರುತ್ತದೆ. ಗ್ರಾಮದ ಹೊರ ವಲಯದಲ್ಲಿ  ಮೂರು ವರ್ಷದ ಹಿಂದೆ ಸರ್ಕಾರ ಗೋಶಾಲೆ ಆರಂಭಿಸಿತ್ತು. ಆ ಸಮಯದಲ್ಲಿ ಕೊಳವೆಬಾವಿ ಕೊರೆಸ ಲಾಗಿತ್ತು. ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ತೊಟ್ಟಿ ನಿರ್ಮಿಸಲಾಗಿದೆ. ಆದರೆ, ಸದ್ಯ ಕೊಳವೆಬಾವಿ ಮತ್ತು ನೀರಿನ ತೊಟ್ಟಿ ನಿರುಪಯುಕ್ತವಾ ಗಿವೆ. ಕೊಳವೆಬಾವಿಯನ್ನು ಮುಚ್ಚಿಲ್ಲ. ಹೀಗಾಗಿ  ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಮಹಿಳೆಯರು ರಸ್ತೆಯಲ್ಲಿ ಬಟ್ಟೆ ತೊಳೆಯುತ್ತಾರೆ. ಹೀಗಾಗಿ ಗ್ರಾಮ ದಲ್ಲಿರುವ ನೀರಿನ ಟ್ಯಾಂಕ್ ಬಳಿ ಬಟ್ಟೆ ತೊಳೆಯಲು ಅನುಕೂಲವಾಗುವಂತೆ ಕಟ್ಟೆ ನಿರ್ಮಾಣ ಮಾಡಬೇಕು.

ADVERTISEMENT

‘ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಇದರಿಂದ ಗ್ರಾಮಸ್ಥರು ಪ್ಲೋರೈಡ್‌ಯುಕ್ತ ನೀರನ್ನೇ ಕುಡಿಯಬೇಕಾಗಿದೆ. ಗ್ರಾಮದಲ್ಲಿ 4 ಕೈಪಂಪ್‌ಗಳು, ಕಿರು ನೀರು ಸರಬರಾಜು ಟ್ಯಾಂಕ್‌ಗಳಿದ್ದು ಅವುಗಳ ಸುತ್ತ ಸ್ವಚ್ಛತೆ ಕಾಪಾಡಿಲ್ಲ. ಕೂಡಲೇ ಗ್ರಾಮದಲ್ಲಿ ನೀರು ಶುದ್ಧಿಕರಣ ಘಟಕ ಸ್ಥಾಪಿಸಬೇಕು’ ಎಂದು  ಗ್ರಾಮ ಹನಮಮ್ಮ ಒತ್ತಾಯಿಸಿದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಶಿಕ್ಷಕ ಇದ್ದಾರೆ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಗ್ರಾಮದ ಶರಣಪ್ಪ ಶಾಸಲಮರಿ ಹೇಳಿದರು.

ಗ್ರಾಮ ಪಂಚಾಯಿತಿ  ಕೆರೆ ಹೂಳೆತ್ತುವ ಯೋಜನೆ ರೂಪಿಸಿದೆ. ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡುತ್ತಿಲ್ಲ. ‘ಕೆರೆ ಹೂಳೆತ್ತುವ ಯೋಜನೆ ಅಡಿ ಕೂಲಿ ನೀಡಲು ಬರುವುದಿಲ್ಲ.  ರೈತರ ಜಮೀನಿನ ಬದು ನಿರ್ಮಾಣ, ಕೃಷಿಹೊಂಡ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ನೀಡಬಹುದು. 

ಆದರೆ, ಕೃಷಿ ಇಲಾಖೆ ಗ್ರಾಮದಲ್ಲಿ 30ಕ್ಕೂ ಹೆಚ್ಚು ರೈತರ ಹೊಲದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿದೆ. ಇದರಿಂದ ಕೂಲಿಕಾರರಿಗೆ ಕೆಲಸ ನೀಡುತ್ತಿಲ್ಲ’ ಎಂದು ಗ್ರಾಮ ಪಂಚಾಯತಿ ಸದಸ್ಯ ವೆಂಕಟೇಶ ಹೇಳಿದರು
***

ಕಳೆದ ವರ್ಷದ ಉದ್ಯೋಗ ಖಾತ್ರಿ ಕಾಮಗಾರಿಯ ಕೂಲಿ ಹಣ ಇನ್ನೂ ಪಾವತಿಸಿಲ್ಲ. ಬೆಳೆ ಪರಿಹಾರ ಹಣ ಜಮಾ ಆಗಿಲ್ಲ. ಗ್ರಾಮಕ್ಕೆ ಶುದ್ಧ ಕುಡಿವ ನೀರಿನ ಘಟಕ ಅವಶ್ಯವಿದೆ
ಹನಮಪ್ಪ ಮರಕುಂದಿ, ಚಿಕ್ಕೆ ತೆಮ್ಮಿನಾಳ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.