ADVERTISEMENT

‘ಯುವಕರಲ್ಲಿ ಜೀವನೋತ್ಸಾಹ ತುಂಬಿ’

​ಪ್ರಜಾವಾಣಿ ವಾರ್ತೆ
Published 16 ಮೇ 2017, 9:30 IST
Last Updated 16 ಮೇ 2017, 9:30 IST

ಕುಷ್ಟಗಿ: ನಿರುದ್ಯೋಗಿ ಯುವಕರಿಗೆ ವೃತ್ತಿ ಕೌಶಲ, ನೈಪುಣ್ಯತೆ ಬಗ್ಗೆ ಸೂಕ್ತ ತರಬೇತಿ ನೀಡುವ ಮೂಲಕ ಅವರಲ್ಲಿ ಜೀವನೋತ್ಸಾಹ ತುಂಬುವ ಅಗತ್ಯವಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಸೋಮವಾರ ಪಟ್ಟಣದಲ್ಲಿ ಆಯೋಜಿಸಿದ್ದ ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಬಹಳಷ್ಟು ಜನ ನಿರುದ್ಯೋಗಿ ಯುವಕ ಯುವತಿಯರಿದ್ದಾರೆ, ಅವರಿಗೆ ಸೂಕ್ತ ವೃತ್ತಿಯನ್ನು ಆಯ್ದುಕೊಳ್ಳುವ ನಿಟ್ಟಿನಲ್ಲಿ ತರಬೇತಿ ಹಾಗೂ ತರಬೇತಿಗೊಳಿಸುವ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಂಜೀವಿನಿ ಸಂಸ್ಥೆಯವರು ಮುತುವರ್ಜಿ ವಹಿಸಬೇಕು. 

ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ನಿಗಾವಹಿಸಬೇಕು. ಅಂದರೆ ನಿರುದ್ಯೋಗಿಗಳಿಗೆ ಸ್ವಾವಲಂಬನೆಯ ಬದುಕಿನ ದಾರಿ ತೋರಿಸುವುದಕ್ಕೆ ಸಾಧ್ಯವಾಗುತ್ತದೆ’ ಎಂದರು.

ADVERTISEMENT

‘ಯಾವುದೇ ಯೋಜನೆ ಜಾರಿಗೆ ಅನುಷ್ಠಾನ ಹಂತದಲ್ಲಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ತರಬೇತುದಾರ ಸಂಸ್ಥೆಗಳು ಇಚ್ಛಾಸಕ್ತಿ ತೋರದಿದ್ದರೆ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ.

ಹಾಗಾಗಿ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ನಡೆಸದೆ ಎಲ್ಲ ನಿರುದ್ಯೋಗಿ ಯುವಕ ಯುವತಿಯರ ಹೆಸರುಗಳು ಸಂಬಂಧಿಸಿದ ವೆಬ್‌ಸೈಟ್‌ನಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು’ ಎಂದು ಶಾಸಕರು ತಾಕೀತು ಮಾಡಿದರು.

ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ಮೋಹನ್‌ ಮಾತನಾಡಿ, ‘ನಿರುದ್ಯೋಗಿಗಳಲ್ಲಿ ವೃತ್ತಿ ನೈಪುಣ್ಯತೆ, ಕೌಶಲ ಅಭಿವೃದ್ಧಿಗೊಳಿಸದ ಕಾರಣ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ತರಬೇತಿ ನೀಡುವ ಅನೇಕ ಸಂಸ್ಥೆಗಳಿದ್ದರೂ ಯಾರಿಗೆ ಯಾವ ವೃತ್ತಿಯಲ್ಲಿ ತರಬೇತಿ ನೀಡಬೇಕೆಂಬ ಪರಿಕಲ್ಪನೆ ಇಲ್ಲದಿರುವುದೂ ನಿರುದ್ಯೋಗ ಸಮಸ್ಯೆಗೆ ಕಾರಣವಾಗಿದೆ’ ಎಂದರು.

‘ಕೌಶಲ್ಯ ಕರ್ನಾಟಕ ವೆಬ್‌ಸೈಟ್‌ನಲ್ಲಿ ನಿರುದ್ಯೋಗಿಗಳ ಹೆಸರು ದಾಖಲಿಸುವುದರಿಂದ ಉದ್ಯೋಗದ ಬೇಡಿಕೆಯ ನಿಖರವಾದ ಅಂಕಿ ಅಂಶಗಳನ್ನು ಒಳಗೊಂಡ ಎಲ್ಲ ಮಾಹಿತಿ ಒಂದೇ ಕಡೆ ದೊರೆಯುತ್ತವೆ. ಸಂಬಂಧಿಸಿದ ತರಬೇತಿ ಸಂಸ್ಥೆಗಳು ನೇರವಾಗಿ ನಿರುದ್ಯೋಗಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.  ಹಾಗಾಗಿ ತಾಲ್ಲೂಕಿನ ಎಲ್ಲ ನಿರುದ್ಯೋಗಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಮಾಹಿತಿ ರವಾನಿಸಬೇಕು’ ಎಂದರು.

ನೋಂದಣಿ ಪ್ರಕ್ರಿಯೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಜೀವಿನಿ ಯೋಜನೆಯ ಕರಿಬಸಪ್ಪ, ತಾಲ್ಲೂಕಿನಲ್ಲಿ 3 ರಿಂದ 4 ಸಾವಿರ ನಿರುದ್ಯೋಗಿ ಯುವಕ, ಯುವತಿಯರ ಹೆಸರುಗಳನ್ನು ನೋಂದಾಯಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಮಹೇಶ್‌, ಸದಸ್ಯ ವಿಜಯ ನಾಯಕ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಪುರಸಭೆ ಅಧ್ಯಕ್ಷ ಸಯ್ಯದ್‌ ಮೈನುದ್ದೀನ ಮುಲ್ಲಾ, ಗ್ರೇಡ್‌– 2 ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.