ADVERTISEMENT

ರೈತರ ನೆರವಿಗೆ ನಿಂತ ಮೋದಿ

ಕೇಂದ್ರದ 4ವರ್ಷದ ಸಾಧನೆಗೆ ಶ್ರೀರಾಮುಲು ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 13:14 IST
Last Updated 3 ಜೂನ್ 2018, 13:14 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಕೊಪ್ಪಳ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ವರ್ಷದಲ್ಲಿ ಕರ್ನಾಟಕಕ್ಕೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕರಿಸಿದ್ದಾರೆ’ ಎಂದು ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಜ್ವಲ ಯೋಜನೆಯಲ್ಲಿ ಸಾವಿರಾರು ಬಡ ಹಾಗೂ ಮಹಿಳೆಯರಿಗೆ ಗ್ಯಾಸ್, ಸಿಲಿಂಡರ್ ವಿತರಿಸಲಾಗಿದೆ. ಅಮೃತ ಯೋಜನೆ, ಸ್ಮಾರ್ಟ್ ಸಿಟಿ ಸೇರಿದಂತೆ ಲಕ್ಷಾಂತರ ಕೋಟಿ ವೆಚ್ಚ ಮಾಡಿದ್ದಾರೆ. ಆದರೆ ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರದ ಅಸಹಕಾರದ ನಡುವೆ ಕೆಲವೊಂದು ಯೋಜನೆ ಅನುಷ್ಠಾನಗೊಳ್ಳುವಲ್ಲಿ ವಿಳಂಬವಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸ್ವಚ್ಛ ಭಾರತದ ಪರಿಕಲ್ಪನೆ ಮೋದಿ ಅವರ ಅಮೋಘ ಸಾಧನೆ. ಫಸಲ್ ಬಿಮಾ ಯೋಜನೆ ಅಡಿ ಮಧ್ಯವರ್ತಿಗಳ ಕಾಟವಿಲ್ಲದೆ. ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಮುದ್ರಾ ಯೋಜನೆಯಿಂದ ಅನೇಕ ಯುವಕರ ಸ್ವಾವಲಂಬಿ ಬದುಕಿಗೆ ಆಧಾರವಾಗಿದೆ’ ಎಂದು ಹೇಳಿದರು.

ADVERTISEMENT

‘ಭಾರತ ಮಾಲಾ ಯೋಜನೆಯಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಆಗಲಿದೆ. ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುಣಮಟ್ಟದಿಂದ ಕೂಡಿದ್ದು, ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಇತ್ತೀಚೆಗೆ ನಡೆದ ಎಲ್ಲ ಉಪಚುನಾವಣೆಗಳು ಕೇಂದ್ರ ಸರ್ಕಾರದ ವಿರುದ್ಧದ ಜನಾದೇಶ ಎಂದು ಭಾವಿಸಬಾರದು. ಅಲ್ಲಿ ಸ್ಥಳೀಯ ಸಮಸ್ಯೆಗಳಿಂದ ಹಾಗೂ ಕಾಂಗ್ರೆಸ್ಸಿನ ಶಕ್ತಿ ಕುಂದಿದ್ದರಿಂದ ಪ್ರಾದೇಶಿಕ ಪಕ್ಷಗಳು ಗೆಲುವು ಸಾಧಿಸಿವೆ. ಸಾರ್ವತ್ರಿಕ ಚುನಾವಣೆ ಮೇಲೆ ಇದು ಯಾವುದೇ ರೀತಿ ಪ್ರಭಾವ ಬೀರುವುದಿಲ್ಲ. ಮುಂದಿನ ಅವಧಿಗೂ ಕೂಡಾ ನರೇಂದ್ರ ಮೋದಿ ಅವರೇ ಪ್ರಧಾನಿ ಸ್ಥಾನ ಅಲಂಕರಿಸುವುದು ಶೇ 100ರಷ್ಟು ಸತ್ಯ’ ಎಂದು ಭವಿಷ್ಯ ನುಡಿದರು.

ಸ್ವಾಮೀಜಿ ಹೇಳಿಕೆಗೆ ಅಪಾರ್ಥ ಕಲ್ಪಿಸಬೇಡಿ: ಪೇಜಾವರ ಸ್ವಾಮೀಜಿ ಕೇಂದ್ರ ಸರ್ಕಾರದ ಸಾಧನೆ ಕುರಿತು ಅಸಮಾಧಾನ ತಾಳಿದ್ದಾರೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮೋದಿ ಸರ್ಕಾರದ ಬಗ್ಗೆ ಸ್ವಾಮೀಜಿ ವಿಶೇಷ ಗೌರವ ಇದೆ. ಅವರು ಇನ್ನೂ ಹೆಚ್ಚಿನ ಕೆಲಸ ಆಗಬೇಕಿತ್ತು ಎಂಬ ಸಲಹೆ ನೀಡಿದ್ದಾರೆ ಹೊರತು, ಆರೋಪ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಡಿಕೆಸಿ ವಿರುದ್ಧ ಕಿಡಿ:‘ಕಾನೂನಿಗಿಂತ ಡಿ.ಕೆ.ಶಿವಕುಮಾರ ದೊಡ್ಡವರೇನಲ್ಲ. ಅವರು ಅಕ್ರಮ ನಡೆಸಿದ್ದರೆ ಸ್ವತಂತ್ರವಾದ ತನಿಖಾ ಸಂಸ್ಥೆಗಳೇ ಪರಿಶೀಲನೆ ನಡೆಸಲಿವೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಳ್ಳುವುದೇಕೆ’ ಎಂದು ಲೇವಡಿ ಮಾಡಿದರು.

‘ಸಿಬಿಐ, ಇಡಿ ಸೇರಿದಂತೆ ಅನೇಕ ಸಂಸ್ಥೆಗಳು ಯಾರದೇ ನಿರ್ದೇಶನದಂತೆ ಕೆಲಸ ಮಾಡುವುದಿಲ್ಲ. ಭ್ರಷ್ಟಾಚಾರ, ಅಕ್ರಮ ಮುಂತಾದ ಅವ್ಯವಹಾರಗಳ ಸಂಶಯ ಬಂದರೆ ಅವರೇ ನೇರವಾಗಿ ದಾಳಿ ಮಾಡಿ ಪರಿಶೀಲನೆ ಮಾಡುತ್ತಾರೆ. ಬಿಜೆಪಿ ನಾಯಕರ ಮನೆ ಮೇಲೆಯೂ ದಾಳಿ ನಡೆದಿದೆ. ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಯುವ ಮುಖಂಡ ಅಮರೇಶ ಕರಡಿ ಇದ್ದರು.

'ಅವಕಾಶವಾದಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ'

ಕೊಪ್ಪಳ: 'ರಾಜ್ಯದಲ್ಲಿ ಅವಕಾಶವಾದಿ ರಾಜಕಾರಣಕ್ಕೆ ಜೆಡಿಎಸ್- ಕಾಂಗ್ರೆಸ್ ಮುನ್ನುಡಿ ಬರೆದಿವೆ. ಇದು ಬಹಳ ದಿನ ಉಳಿಯುವುದಿಲ್ಲ ಎಂದು ಶ್ರೀರಾಮಲು ಹೇಳಿದರು.

ನಾವು 104 ಸ್ಥಾನಗಳನ್ನು ಗೆದ್ದು ಸುಮ್ಮನೆ ಕೂಡುವುದಿಲ್ಲ. ರೈತರ ಸಾಲ ಮನ್ನಾಕ್ಕೆ ನಿರಂತರ ಹೋರಾಟ ಮಾಡುತ್ತೇವೆ. ಕುಮಾರಸ್ವಾಮಿ ತಾಸಿಗೊಮ್ಮೆ ಹೇಳಿಕೆ ಬದಲಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

ಸರ್ಕಾರದ ರಚನೆಯಿಂದ ನಾವು ಯಾಕೆ ಹಿಂದೆ ಸರಿಯಬೇಕಾಯಿತು ಎಂಬುದಕ್ಕೆ ಸ್ಟಷ್ಟನೆ ನೀಡಿದ ರಾಮುಲು ಕುದುರೆ ವ್ಯಾಪಾರಕ್ಕೆ ಬಿಜೆಪಿ ಪ್ರಯತ್ನಿಸಿಲ್ಲ. ನಮ್ಮ ನಾಯಕರಾದ ಯಡಿಯೂರಪ್ಪನವರು ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದ್ದರೇ ಹೊರತು ಅನ್ಯ ಮಾರ್ಗದಿಂದ ಸರ್ಕಾರ ರಚನೆಗೆ ಪ್ರಯತ್ನ ಮುಂದುವರಿಸಲಿಲ್ಲ ಎಂದು ಸ್ಟಷ್ಟಪಡಿಸಿದರು.

**
ಕೇಂದ್ರ ಸರ್ಕಾರದ ಸಾಧನೆ ಕಾಂಗ್ರೆಸ್ ಸರ್ಕಾರದ 40 ವರ್ಷಗಳ ಸಾಧನೆಗೆ ಸಮನಾಗಿ ಕೆಲಸ ಮಾಡಿದೆ. ನರೇಂದ್ರ ಮೋದಿ ಬದ್ಧತೆ ಇರುವ ಪ್ರಧಾನಮಂತ್ರಿ
ಬಿ.ಶ್ರೀರಾಮುಲು, ಶಾಸಕ, ಮೊಳಕಾಲ್ಮೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.