ADVERTISEMENT

ಲೋಕ ಅದಾಲತ್‌: 214 ಪ್ರಕರಣ ಇತ್ಯರ್ಥ

152 ಸಿವಿಲ್‌ ಕೇಸ್‌ಗಳು, 60 ಕ್ರಿಮಿನಲ್‌ ಪ್ರಕರಣಗಳ ರಾಜಿಸಂಧಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 12:41 IST
Last Updated 12 ಫೆಬ್ರುವರಿ 2017, 12:41 IST

ಕುಷ್ಟಗಿ: ಇಲ್ಲಿಯ ನ್ಯಾಯಾಲಯಗಳಲ್ಲಿ ಬಹಳ ದಿನಗಳಿಂದ ಮುಂದುವರಿದಿದ್ದ ವಿವಿಧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಸಲುವಾಗಿ ಹಿರಿಯ ಮತ್ತು ಕಿರಿಯ ಶ್ರೇಣಿ ನ್ಯಾಯಾಲಯಗಳಲ್ಲಿ ಶನಿವಾರ ಜನತಾ ನ್ಯಾಯಾಲಯ ಹಮ್ಮಿಕೊಳ್ಳಲಾಗಿತ್ತು.

152 ಸಿವಿಲ್‌ ಪ್ರಕರಣಗಳು, 1 ಮೋಟಾರು ವಾಹನ ಅಪಘಾತ ಪ್ರಕರಣ, 60 ವಿವಿಧ ಕ್ರಿಮಿನಲ್‌ ಪ್ರಕರಣಗಳು ಮತ್ತು 1 ಜೀವನಾಂಶ ಪ್ರಕರಣ ಸೇರಿ ಒಟ್ಟು 214 ಪ್ರಕರಣಗಳು ಪರಸ್ಪರ ರಾಜಿ ಸಂಧಾನದಿಂದ ಇತ್ಯರ್ಥಗೊಂಡವು.

ಹಿರಿಯ ಸಿವಿಲ್‌ ನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ ಹಾಗೂ ಕಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೇಶವಮೂರ್ತಿ ಇದ್ದರು. ವಕೀಲರಾದ ಚಂದ್ರಶೇಖರ ಉಪ್ಪಿನ ಮತ್ತು ಬಿ.ಆರ್‌. ಹೊಸಗೌಡರ ಸಂಧಾನಕಾರರಾಗಿದ್ರು. ನಾಗಪ್ಪ ಸೂಡಿ ಮತ್ತು ಅನೇಕ ವಕೀಲರು ಲೋಕ್‌ ಅದಾಲತ್‌ನಲ್ಲಿ ಪಾಲ್ಗೊಂಡಿದ್ದರು. ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಎರಡೂ ನ್ಯಾಯಾಲಯಗಳಲ್ಲಿ ಕಕ್ಷಿದಾರರು ಕಿಕ್ಕಿರಿದು ಸೇರಿದ್ದರು.

ಲೋಕ್‌ ಅದಾಲತ್‌ ಮಹತ್ವ ಕುರಿತು ವಿವರಿಸಿದ ವಕೀಲರ ಸಂಘದ ಅಧ್ಯಕ್ಷ ನಾಗಪ್ಪ ಸೂಡಿ, ಪ್ರಕರಣ ನಡೆದು ತೀರ್ಪು ಹೊರಬಂದರೆ ಒಬ್ಬ ವ್ಯಕ್ತಿ ಮಾತ್ರ ಗೆಲ್ಲಲು ಸಾಧ್ಯ. ಆದರೆ, ರಾಜಿ ಸಂಧಾನದಲ್ಲಿ ಇಬ್ಬರೂ ಗೆಲ್ಲುತ್ತಾರೆ. ನ್ಯಾಯಾಲಯದಲ್ಲಿ ಸೋಲು ಉಂಟಾಯಿತು ಎಂಬ ನೋವು ಇರುವುದಿಲ್ಲ. ಹಣ, ಶ್ರಮ ವ್ಯರ್ಥವಾಗುವುದಿಲ್ಲ. ಅಲ್ಲದೆ, ಮಾನಸಿಕ ನೆಮ್ಮದಿಯೂ ಇರುತ್ತದೆ ಎಂದು ತಿಳಿಸಿದರು. ರಾಜಿಯಾಗಲು ಮೊದಲೇ ನಿರ್ಧರಿಸಿದ ಪ್ರಕರಣಗಳನ್ನೂ ಸಹ ಜನತಾ ನ್ಯಾಯಾಲಯದಲ್ಲಿ ಸೇರಿಸಲಾಗಿತ್ತು ಎಂದು ಕೆಲ ವಕೀಲರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT